Advertisement

ನಾನಾಸಾಹೇಬ್‌ ಟಿಟಿ ರೋಡ್‌ ಸಂಪರ್ಕ ರಸ್ತೆ ನಿರ್ಮಿಸಿ

10:44 PM Mar 01, 2020 | Sriram |

ಕುಂದಾಪುರ: ಗಾಂಧಿಮೈದಾನ ದಾಟಿ ಲೈಬ್ರರಿ, ಲೋಕೋಪಯೋಗಿ ಇಲಾಖೆ ಕಚೇರಿ, ಮೆಸ್ಕಾಂ ಕಚೇರಿ, ಎಲ್‌ಐಸಿ ಕಚೇರಿ, ಎಎಸ್‌ಪಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ರೇಷ್ಮೆ ಇಲಾಖೆ ಕಚೇರಿ ಹೀಗೆ ನಾನಾ ಜನಾವಶ್ಯಕ ಕೇಂದ್ರಗಳನ್ನು ಹೊಂದಿದೆ ನಾನಾ ಸಾಹೇಬ್‌ ರಸ್ತೆ. ಸರ್ವಿಸ್‌ ರಸ್ತೆಯಿಂದ ಈ ರಸ್ತೆಗೆ ತಿರುಗುವಲ್ಲಿಯೇ ಅಧ್ವಾನ.

Advertisement

ರಸ್ತೆ ಹಾಳಾಗಿದೆ. ಇದರ ದುರಸ್ತಿಗೆ ಅನೇಕ ಸಮಯದಿಂದ ಬೇಡಿಕೆಯಿದೆ. ಏಕೆಂದರೆ ಮುಂದುವರಿದ ಈ ರಸ್ತೆಯಲ್ಲಿ ದೊರೆಯುವ ವ್ಯಾಸರಾಯ ಮಠ, ಸಭಾಭವನಕ್ಕೂ ಜನರ ಭೇಟಿ ಇದ್ದೇ ಇರುತ್ತದೆ. ಅಂತಹ ನೂರಾರು ವಾಹನಗಳಿಗೆ ಈ ಕೆಟ್ಟ ರಸ್ತೆಯ ಮೂಲಕ ಪ್ರಯಾಣವೆಂಬ ಶಿಕ್ಷೆ ಕಡ್ಡಾಯ.ಸುದಿನ ವಾರ್ಡ್‌ನಲ್ಲಿ ಸುತ್ತಾಟ ಸಂದರ್ಭ ನಾನಾ ಸಾಹೇಬ್‌ ವಾರ್ಡ್‌ ನಲ್ಲಿ ಓಡಾಟ ನಡೆಸಿದಾಗ ಅನೇಕರು ಹೇಳಿದ್ದು ಇಲ್ಲಿ ಅಂತಹ ಗಂಭೀರ ಸಮಸ್ಯೆಗಳು ಇಲ್ಲ ಎಂದು. ರಸ್ತೆ, ಚರಂಡಿ ಇತ್ಯಾದಿ ಬೇಡಿಕೆಗಳು ಇದ್ದೇ ಇದೆ.

ಪಾರ್ಕಿಂಗ್‌ ಸಮಸ್ಯೆ
ಏಳೆಂಟು ಕಚೇರಿಗಳು ಇರುವ ಈ ವಠಾರದಲ್ಲಿ ಹತ್ತಾರು ವಾಹನಗಳು ಏಕಕಾಲದಲ್ಲಿ ಇರುತ್ತವೆ. ಅವುಗಳಿಗೆ ಸೂಕ್ತ ನಿಲುಗಡೆ ತಾಣವೇ ಇಲ್ಲ. ಜಾಗ ಇದ್ದರೂ ಅದು ವ್ಯವಸ್ಥಿತವಾಗಿಲ್ಲ. ಹಾಗಾಗಿ ಇಲ್ಲೊಂದು ಪಾರ್ಕಿಂಗ್‌ ಜಾಗ ಮಾಡಬೇಕು ಎಂಬ ಬೇಡಿಕೆ ಇಲ್ಲಿನ ಜನರಿದ್ದಿದೆ. ಅದಕ್ಕೆ ವ್ಯವಸ್ಥೆ ಗಳಾಗುತ್ತಿವೆ. ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಪಾರ್ಕಿಂಗ್‌ ಸ್ಥಳ ಮಾಡಲು ಯೋಜನೆ ಸಿದ್ಧವಾಗಿದೆ. ಇಂಟರ್‌ಲಾಕ್‌ ಹಾಕಿ ಸುಸಜ್ಜಿತಗೊಳಿಸಲಾಗುವುದು ಎನ್ನುತ್ತಾರೆ ವಾರ್ಡ್‌ ಸದಸ್ಯರು.

ರಸ್ತೆಗೆ ಬೇಡಿಕೆ
ನಾನಾ ಸಾಹೇಬ್‌ ರಸ್ತೆಯಿಂದ ಟಿಟಿ ರೋಡ್‌ಗೆ ಸಂಪರ್ಕ ಕಲ್ಪಿಸಲು ಒಂದು ರಸ್ತೆ ಬೇಕು ಎಂಬ ಬೇಡಿಕೆ ಇದೆ. ಇಲ್ಲಿ ಪರಿಪೂರ್ಣ ರಸ್ತೆ ಇಲ್ಲ. ಆದರೆ ಒಂದು ರಾಜಾಕಾಲುವೆ ಹೋಗಿದ್ದು ಅದು 8 ಅಡಿ ಹಾಗೂ ಅದರ ತಡೆಗೋಡೆ 3 ಅಡಿಯಷ್ಟು ಇದೆ. ಇದರ ಮೇಲೆ ಸಿಮೆಂಟ್‌ ಚಪ್ಪಡಿ ಹಾಕಿದರೆ 11 ಅಡಿಯ ರಸ್ತೆ ದೊರೆಯುತ್ತದೆ. ನಂತರ ಟಿಟಿ ರೋಡ್‌ ಸಂಪರ್ಕ ಸುಲಭವಾಗಿ ಸಾಧಿಸಬಹುದು ಎನ್ನುತ್ತಾರೆ ಇಲ್ಲಿನವರು. ಅಷ್ಟೇ ಅಲ್ಲ, ಫ್ಲೈಓವರ್‌ ಪೂರ್ಣವಾದ ಬಳಿಕ ಟಿಟಿ ರೋಡ್‌, ನಾನಾಸಾಹೇಬ್‌ ರೋಡ್‌ನ‌ವರು ಸುತ್ತು ಬಳಸಿ ಹೆದ್ದಾರಿಯನ್ನು, ಸರ್ವಿಸ್‌ ರಸ್ತೆಯನ್ನು ಸೇರಿಕೊಳ್ಳಬೇಕಾಗುತ್ತದೆ. ವಾಹನ ದಟ್ಟಣೆ ಹೆಚ್ಚಾಗುತ್ತದೆ. ಆಗ ಈ ಹೊಸ ರಸ್ತೆ ಎಲ್ಲರಿಗೂ ಅನುಕೂಲಕ್ಕೆ ಒದಗಲಿದೆ ಎನ್ನುತ್ತಾರೆ.

ವ್ಯಾಸರಾಜ ಮಠದ ಎದುರು ಕೆಲವು ಮನೆಗಳಿಗೆ ಹೋಗಲು ರಸ್ತೆಯ ಅವಶ್ಯವಿದೆ. ಇಲ್ಲಿ ಮೂವರು ಅಂಗವಿಕಲರ ಮನೆಗಳಿದ್ದು ಅವರಿಗೂ ರಸ್ತೆ ತೀರಾ ಅನಿವಾರ್ಯ. ಸುಮಾರು 25 ವರ್ಷಗಳ ಬೇಡಿಕೆ. ಈ ಬಾರಿ ರಸ್ತೆಯಾಗುವ ಲಕ್ಷಣ ಗೋಚರಿಸುತ್ತಿದೆ. ಸುದಿನ ಭೇಟಿ ನೀಡಿದಾಗ ರಸ್ತೆಗೆ ಮಣ್ಣು ತಂದು ಸುರಿಯುವ ಕೆಲಸ ನಡೆಯುತ್ತಿತ್ತು. ಸುಮಾರು 12.5 ಲಕ್ಷ ರೂ. ವೆಚ್ಚದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಿದ್ದಾರೆ ಎಂದು ಮಾಹಿತಿ ದೊರೆಯಿತು.

Advertisement

ಆಗಬೇಕಾದ್ದೇನು?
ಸರ್ವಿಸ್‌ ರಸ್ತೆಯಿಂದ ನಾನಾಸಾಹೇಬ್‌ ರಸ್ತೆಗೆ ಪ್ರವೇಶ ರಸ್ತೆ ಅಭಿವೃದ್ಧಿ
ಮೆಸ್ಕಾಂ ಬಳಿ ಪಾರ್ಕಿಂಗ್‌ ವ್ಯವಸ್ಥೆ
ಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಬೇಕು

ತ್ಯಾಜ್ಯ
ಚೈತನ್ಯ ವಿಶೇಷ ಶಾಲೆ ಬಳಿ ಯಾರೋ ತಂದು ತ್ಯಾಜ್ಯ ಎಸೆಯುತ್ತಾರೆ. ತೆರೆದ ಚರಂಡಿಯಲ್ಲಿ ರಾಜಾರೋಷವಾಗಿ ಹಾಸ್ಟೆಲ್‌, ಕಾಲೇಜಿನ ತ್ಯಾಜ್ಯ ನೀರು ಹರಿಯುತ್ತದೆ. ಈ ಕುರಿತು ಸ್ಥಳೀಯರಿಗೆ ಸಾಕಷ್ಟು ಅಸಮಾಧಾನವಿದೆ. ವಾಸನೆ, ಸೊಳ್ಳೆ ಉತ್ಪತ್ತಿಯಾಗುತ್ತದೆ. ಪರಿಹಾರ ಸಿಕ್ಕಿಲ್ಲ.

ಕಾಮಗಾರಿ ನಡೆಯುತ್ತಿದೆ
ಎಲ್‌ಐಸಿ, ಡಿವೈಎಸ್‌ಪಿ, ಮೆಸ್ಕಾಂ ಕಚೇರಿ ಬಳಿ 17 ಲಕ್ಷ ರೂ.ಗಳ ವೆಚ್ಚದಲ್ಲಿ ಪಾರ್ಕಿಂಗ್‌ ತಾಣ ಮಾಡಲು ಬೇಡಿಕೆಯಿಡಲಾಗಿದೆ. ವ್ಯಾಸರಾಯ ಮಠದ ಎದುರು 12.5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಆಗಲಿದೆ. ನಾನಾ ಸಾಹೇಬ್‌ ರಸ್ತೆಯ ತೋಡುಕಟ್ಟೆ ವಠಾರದಲ್ಲಿ ಚರಂಡಿ ಕೆಲಸ ಮಾಡಲಾಗಿದೆ. ಸಾರ್ವಜನಿಕರ ಬೇಡಿಕೆಗಳಿಗೆ ಹಣಕಾಸಿನ ಕೊರತೆಯಿದ್ದು ಸಾಧ್ಯವಾದಷ್ಟು ಶಾಸಕರು, ಪುರಸಭೆ ಅನುದಾನದ ಮೂಲಕ ಒದಗಿಸಲು ಪ್ರಯತ್ನಿಸಲಾಗುತ್ತಿದೆ.
-ರೋಹಿಣಿ ಉದಯ್‌, ಸದಸ್ಯರು, ಪುರಸಭೆ

ರಸ್ತೆ ನಿರ್ಮಿಸಿ
ನಾನಾ ಸಾಹೇಬ್‌ ರಸ್ತೆಯಿಂದ ಟಿಟಿ ರೋಟ್‌ಗೆ ಸಂಪರ್ಕ ರಸ್ತೆ ನಿರ್ಮಿಸಬೇಕು. ಶಾಲಾ ಮಕ್ಕಳàಗೆ, ಸಂತೆಗೆ ಬರುವವರಿಗೆ, ನಗರಕ್ಕೆ ಬರುವವರಿಗೆ ಎಂದು ಅನೇಕರಿಗೆ ಅನುಕೂಲವಾಗುತ್ತದೆ.
-ಚಂದ್ರ, ಅಧ್ಯಕ್ಷರು, ಚಾಲೆಂಜ್‌ ಕ್ರಿಕೆಟ್‌ ಕ್ಲಬ್‌

ಚರಂಡಿ ಸ್ವತ್ಛತೆ ಇಲ್ಲ
ಹಾಸ್ಟೆಲ್‌ಗ‌ಳ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಹರಿಯದೇ ನಿಲ್ಲುತ್ತದೆ.ಇದಕ್ಕೊಂದು ವ್ಯವಸ್ಥೆಯಾಗಬೇಕು. ಎಲ್ಲೆಲ್ಲಿಯವರೋ ತ್ಯಾಜ್ಯ ತಂದು ಹಾಕುವ ಕೆಟ್ಟ ಕ್ರಮ ಆರಂಭವಾಗಿದೆ. ಇದಕ್ಕೂ ಕಡಿವಾಣ ಹಾಕಬೇಕು.
-ಪ್ರವೀಣ್‌ ಕುಮಾರ್‌,ನಾನಾ ಸಾಹೇಬ್‌ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next