Advertisement

ತುತ್ತಿಟ್ಟ ಅನ್ನಪೂರ್ಣೆಗೆ ನಮೋ ನಮಃ

06:57 PM Nov 11, 2019 | Sriram |

ದಶಕದ ಹಿಂದಿನ ಮಾತು.ಟ್ರೈನಿಂಗ್‌ ನಿಮಿತ್ತ ಬಳ್ಳಾರಿಯಿಂದ ಹೈದರಾಬಾದಿಗೆ ಪ್ರಯಾಣಿಸುವುದಿತ್ತು. ಸಂಜೆ ಸುಮಾರು ನಾಲ್ಕರ ಹೊತ್ತಿಗೆ ರೈಲು.ಮಧ್ಯಾಹ್ನದವರೆಗೆ ಕೆಲಸ ಮಾಡಿ ನಂತರ ಮನೆಗೆ ಬಂದು, ಹದಿನೈದು ದಿನಗಳ ಅವಧಿಗೆ ಬೇಕಾದ ಉಡಿಗೆ -ತೊಡಿಗೆ, ಇತರ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಹೊರಟಿದ್ದೆ ರಾತ್ರಿ ಊಟಕ್ಕೆ ಹೇಗೋ ಮ್ಯಾನೇಜ್‌ ಮಾಡಿದರೆ ಆಯ್ತು ಅಂತ ಹೊರಟು ನಿಂತೆ. ನಾನಿದ್ದ ಬೋಗಿಗೆ ಪ್ಯಾಕ್ಡ್ ಫ‌ುಡ್‌ ಅಥವಾ ಹಣ್ಣುಹಂಪಲು ಏನೂ ಬರಲಿಲ್ಲ. ನನ್ನ ಸಹಪ್ರಯಾಣಿಕರೆಲ್ಲ ತಾವು ತಂದಿದ್ದ ಬುತ್ತಿ ಬಿಚ್ಚಿ ತಿನ್ನತೊಡಗಿದರು. ನನ್ನ ಹೊಟ್ಟೆ ತಾಳ ಹಾಕಲು ಶುರುಮಾಡಿತು.

Advertisement

ಆದರೆ ವಿಧಿಯಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ನನ್ನ ಎದುರಿಗೆ ಕುಳಿತಿದ್ದ ಹಿರಿಯ ದಂಪತಿ, (ಗಂಗಾವತಿಯವರೆಂದು ಪರಿಚಯಿಸಿಕೊಂಡಿದ್ದರು, ಅವರ ನೆಂಟರ ಮನೆಗೆ ಹೊರಟಿದ್ದರು ) “ನೀವೂ ತಗೊಳ್ಳಿ’ಎಂದು ತಮ್ಮ ಬುತ್ತಿ ನೀಡಲು ಬಂದಾಗ ನಾನು ನಗುತ್ತಲೇ ನಿರಾಕರಿಸಿದೆ. “ನಾವೂ ಸಸ್ಯಾಹಾರಿಗಳು, ನೀವು ನನ್ನ ಮಗಳ ಹಾಗಿದ್ದೀರಿ , ಹಸಿವಿದ್ದರೆ ನಿದ್ದೆ ಹತ್ತೋಲ್ಲ ‘ ಎಂದು ಆಕೆ ಒತ್ತಾಯ ಮಾಡಿದಾಗ, ನನಗೆ ಸ್ವಲ್ಪ ಮುಜುಗರವಾಯಿತು. ಆದರೂ, ಅವರ ವಿಶ್ವಾಸಕ್ಕೆ ಮಣಿದು ಮರುಮಾತಾಡದೆ ಸ್ವೀಕರಿಸಿ, ಊಟ ಸೇವಿಸಿದ್ದೆ. ಆದರೆ, ಆಶ್ಚರ್ಯ ಏನೆಂದರೆ, ಹಸಿವಿನ ಮರ್ಮ ಆಕೆಗೆ ಹೇಗೆ ತಿಳಿಯಿತೋ ಕಾಣೆ. ನಿಜ ಹೇಳಬೇಕೆಂದರೆ, ಆವತ್ತು ಊಟ ಮಾಡದೇ ಇದ್ದಿದ್ದರೆ, ನನ್ನ ಗತಿ ಗೋವಿಂದ !. ಆ ದಂಪತಿ ಊಟ ಕೊಟ್ಟಿದ್ದರಿಂದ ಹೊಟ್ಟೆ ತಂಪಾಗಿ, ಇಡೀ ರಾತ್ರಿ ಒಳ್ಳೆ ನಿದ್ದೆ ಬಂತು. ಬೆಳಗ್ಗೆ ನಾನು ಕಣ್ಣು ಬಿಡುವ ಹೊತ್ತಿಗೆ ಅವರು ಇಳಿದು ಹೊರಟು ಬಿಟ್ಟಿದ್ದರು. ಛೇ, ಎಂಥ ಕೆಲಸ ಆಯ್ತಲ್ಲ ಅಂದು ಕೊಂಡು, ಅವರಿಗೆ ಮನದಲ್ಲೇ ವಂದಿಸಿದ್ದೆ. ಈಗಲೂ ರೈಲ್‌ ಪ್ರಯಾಣ ಮಾಡುವ ಆ ಹಸಿವು, ಆ ಅನ್ನಪೂರ್ಣೆಯ ನೆನಪು ಕಾಡುವುದುಂಟು.

ಕೆ.ವಿ.ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next