Advertisement

ಊರ ಸರಕಾರಿ ಕನ್ನಡ ಶಾಲೆ ಉಳಿವಿಗೆ “ನಮ್ಮಶಾಲೆ ನಮ್ಮ ಕನಸು’

08:59 PM Dec 13, 2019 | mahesh |

ಕೋಟ: ನಿರಂತರ ಸಮಾಜಮುಖೀ ಕಾರ್ಯದಲ್ಲಿ ತೊಡಗಿರುವ ಕೋಟ ಸಮೀಪದ ಗಿಳಿಯಾರು ಯುವಕ ಮಂಡಲ ಸಂಘಟನೆ ತನ್ನೂರು ಮೂಡುಗಿಳಿಯಾರಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಅಭಿವೃದ್ಧಿಗಾಗಿ “ನಮ್ಮ ಶಾಲೆ ನಮ್ಮ ಕನಸು’ ಎನ್ನುವ ವಿನೂತನ ಕಾರ್ಯಕ್ರಮವನ್ನು ಡಿ.14ರಂದು ಮೂಡುಗಿಳಿಯಾರಿನಲ್ಲಿ ಹಮ್ಮಿಕೊಂಡಿದೆ.

Advertisement

ಶಾಲೆಯ ಉಳಿವಿಗೆ ಅಕ್ಷರ ತೇರು
ಆಂಗ್ಲಮಾಧ್ಯಮ, ವಾಹನ ಸೌಲಭ್ಯ ಮುಂತಾದ ಸೌಕರ್ಯಗಳಿಗೆ ಮಾರುಹೋಗಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಇಂದು ಸರಕಾರಿ ಕನ್ನಡ ಶಾಲೆಗಳಿಂದ ದೂರವಾಗುತ್ತಿದ್ದಾರೆ. ಹೀಗಾಗಿ ತನ್ನೂರಿನ ಸರಕಾರಿ ಶಾಲೆಯಲ್ಲೂ ಆಂಗ್ಲಮಾಧ್ಯಮಕ್ಕೆ ಸರಿಸಾಟಿಯಾದ ಗುಣಮಟ್ಟದ ಶಿಕ್ಷಣ ಸಿಗಬೇಕು. ತಮ್ಮೂರ ಮಕ್ಕಳು ಉಚಿತವಾಗಿ ವಾಹನದ ಮೂಲಕ ಶಾಲೆಗೆ ಪ್ರಯಾಣಿಸಬೇಕು ಎನ್ನುವ ನಿಟ್ಟಿನಲ್ಲಿ ಸಂಘಟನೆಯು ಅಕ್ಷರ ತೇರು ಎನ್ನುವ ಸ್ವಂತ ವಾಹನ ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಪ್ರಯುಕ್ತ ಧನ ಸಂಗ್ರಹಕ್ಕಾಗಿ ಹಳೆ ವಿದ್ಯಾರ್ಥಿಗಳು, ಸ್ಥಳೀಯ ಸಂಘಸಂಸ್ಥೆಗಳ ನೆರವಿನೊಂದಿಗೆ ಡಿ.14ರಂದು ಶಾಲೆಯ ಆವರಣದಲ್ಲಿ ಪೆರ್ಡೂರು ಮೇಳದ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ವಾಹನ ಖರೀದಿ ಮತ್ತು ನಿರ್ವಹಣೆಗೆ ಮೀಸಲಿಡುತ್ತದೆ.

ಈ ಯುವಕ ಮಂಡಲದ ವತಿಯಿಂದ ಶಾಲೆಯ ಅಭಿವೃದ್ಧಿಗಾಗಿ ಈ ಹಿಂದೆ ದಾನಿಗಳ ಸಹಕಾರದೊಂದಿಗೆ ಸ್ಮಾರ್ಟ್‌ ಕ್ಲಾಸ್‌, ನ್ಪೋಕನ್‌ ಇಂಗ್ಲಿಷ್‌, ಕಂಪ್ಯೂಟರ್‌ ಶಿಕ್ಷಣ, ಹ್ಯಾಪಿ ಇಂಗ್ಲಿಷ್‌ ಕ್ಲಾಸ್‌, ವಿದ್ಯಾರ್ಥಿ ವೇತನ, ಕೈತೋಟ ಮುಂತಾದ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಈಗಾಗಲೇ ದೊರೆಯುತ್ತಿದೆ.

ಸಮಾಜಮುಖಿ ಕಾರ್ಯಕ್ಕಾಗಿ ವಾರ್ಷಿಕೋತ್ಸವವಿಲ್ಲ
ಪ್ರತಿಯೊಂದು ಸಂಘಟನೆಗಳು ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುವುದು ಮಾಮೂಲಿ. ಆದರೆ ಗಿಳಿಯಾರು ಯುವಕ ಮಂಡಲವು ಶಾಲೆಯ ಅಭಿವೃದ್ಧಿಗಾಗಿ ಕೈಗೊಂಡ ಈ ಸಮಾಜಮುಖಿ ಕಾರ್ಯಕ್ರಮಕ್ಕಾಗಿ ವಾರ್ಷಿಕೋತ್ಸವ ಆಚರಿಸಿಕೊಳ್ಳದೆ ಕೇವಲ ಈ ಕಾರ್ಯಕ್ರಮಕ್ಕೆ ಒತ್ತು ನೀಡಿದೆ.

ಅಕ್ಷರ ತೇರು ಯೋಜನೆ
ನಮ್ಮೂರ ಸರಕಾರಿ ಶಾಲೆಯ ಉಳಿವಿಗಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಇದರ ಮುಂದಿನ ಭಾಗವಾಗಿ ವಿದ್ಯಾರ್ಥಿಗಳ ಪ್ರಯಾಣಕ್ಕೆ “ನಮ್ಮಶಾಲೆ ನಮ್ಮ ಕನಸು ಎಂಬ ಅಕ್ಷರ ತೇರು ಯೋಜನೆ ಕೈಗೊಂಡಿದ್ದೇವೆ. ನಮ್ಮ ಸಮಾಜಮುಖೀ ಕಾರ್ಯಕ್ಕೆ ಶಿಕ್ಷಣಾಭಿಮಾನಿಗಳ ಸಹಕಾರ ಅಗತ್ಯ.
-ರಾಘವೇಂದ್ರ ಕುಂದರ್‌, ಅಧ್ಯಕ್ಷರು ಗಿಳಿಯಾರು ಯುವಕ ಮಂಡಲ

Advertisement
Advertisement

Udayavani is now on Telegram. Click here to join our channel and stay updated with the latest news.

Next