Advertisement
“ನಮ್ಮ ನಮ್ಮ ಮಂದಿ’ ಎನ್ನುವ ಕಲಾತಂಡ ಕಟ್ಟಿಕೊಂಡಿರುವ ಇಲ್ಲಿನ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು, ಹವ್ಯಾಸಿ ಚಿತ್ರ ಕಲಾವಿದರು ಜಿಲ್ಲೆಯ ಪುರಾತನ, ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ವಿಶ್ವಾದ್ಯಂತ ಪಸರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ 9 ಕಲಾವಿದರ ತಂಡ ಈ ಕಾರ್ಯದಲ್ಲಿ ಮಗ್ನವಾಗಿದೆ. ಪ್ರತಿ ರವಿವಾರ ಜಿಲ್ಲೆಯಲ್ಲಿ ಪುರಾತನ ದೇವಾಲಯ, ಸ್ಥಳ, ಕಟ್ಟಡಗಳನ್ನು ಗುರುತಿಸಿ ಕುಂಚದಲ್ಲಿ ಅರಳಿಸುವ ಕಾರ್ಯ ನಡೆಯುತ್ತಿದೆ.
Related Articles
Advertisement
ಕಲಾವಿದರೊಂದಿಗೆ ಚಿತ್ರಕಲಾ ಶಿಕ್ಷಕರು ಇರುವುದರಿಂದ ಅನುಭವದ ಜೊತೆಗೆ ಕೆಲ ಅತ್ಯುಪಯುಕ್ತ ಮಾಹಿತಿ ಪಡೆಯಬಹುದಾಗಿದೆ. ಕಲಾವಿದರು ಬಿಡಿಸಿದ ಚಿತ್ರಗಳ ಬಗ್ಗೆ ವಿಮರ್ಶೆಯೂ ನಡೆಯುತ್ತಿದೆ. ಹಿರಿಯ ಕಲಾವಿದರಿಂದ ಸಲಹೆ-ಸೂಚನೆಗಳನ್ನೂ ಇಲ್ಲಿಂದ ಪಡೆಯಬಹುದಾಗಿದೆ.
ಮಾರಾಟಕ್ಕೆ ಆನ್‌ಲೈನ್ ವೇದಿಕೆ : ಇಲ್ಲಿ ಬಿಡಿಸಿರುವ ಚಿತ್ರಗಳನ್ನು ಚಿತ್ರಕಲಾ ಪ್ರದರ್ಶನ-ಮಾರಾಟ, ಚಿತ್ರ ಸಂತೆ ಹಾಗೂ ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಪ್ರತಿ ರವಿವಾರ ನಡೆಯುವ ಕಾಯಕದ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧೆಡೆ ಪಸರಿಸುವ ಕೆಲಸ ಆಗುತ್ತಿದೆ. ಕುಂಚದ ಕಲೆಗೆ ಮನ ಸೋತವರು ಕಲಾವಿದರನ್ನು ಸಂಪರ್ಕಿಸಿ ಅವುಗಳನ್ನು ಖರೀದಿ ಮಾಡುತ್ತಾರೆ.
ತಂಡದಲ್ಲಿ ಯಾರ್ಯಾರು? : ಮಂಜುನಾಥ ಭಂಡಾರೆ, ವಿಜಯಕುಮಾರ ಗಾಯ್ಕವಾಡ, ಎಂ.ಎಚ್.ಪಾಟೀಲ, ದೇವೇಂದ್ರ ಬಡಿಗೇರ, ಗಣಪತಿ ಘಾಟಗೆ, ರಾಮಪ್ಪ ಒಣರೊಟ್ಟಿ, ರಾಘವೇಂದ್ರ ಪತ್ತಾರ,ಲಿಂಗರಾಜ ಬಾರಕೇರ, ಸುರೇಶ ಅರ್ಕಸಾಲಿ ಹಾಗೂ ಇನ್ನಿತರರು ತಂಡ ಕಟ್ಟಿಕೊಂಡುಚಿತ್ರಕಲೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಲೇಜಿಗೆ ಹೋದರೆ ಸಾಕು ಚಿತ್ರಕಲೆ ಕರಗತವಾಗುತ್ತದೆ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ನಾವು ಅನುಭವಿಸಿದ ಸಮಸ್ಯೆ ಚಿತ್ರಕಲೆ ಆಸಕ್ತರು ಅನುಭವಿಸಬಾರದುಎನ್ನುವ ಕಾರಣದಿಂದ ಕಲಾತಂಡ ಕಟ್ಟಿಕೊಂಡು ಪ್ರತಿ ರವಿವಾರ ಒಂದೊಂದು ಸ್ಥಳಗಳಿಗೆ ಹೋಗುತ್ತಿದ್ದೇವೆ. ಎರಡೇ ವಾರಕ್ಕೆ ಮೂರ್‍ನಾಲ್ಕುಯುವಕರು ನಮ್ಮೊಟ್ಟಿಗೆ ಸೇರಿಕೊಂಡಿದ್ದಾರೆ. ಆಸಕ್ತಿಯಿದ್ದವರು ಯಾವುದೇ ಸಂಕೋಚವಿಲ್ಲದೆ ಪಾಲ್ಗೊಳ್ಳಬಹುದು. – ಮಂಜುನಾಥ ಭಂಡಾರೆ, ಚಿತ್ರ ಕಲಾವಿದ
ಈ ಕಾರ್ಯವನ್ನು ಖುಷಿಗಾಗಿ ಮಾಡುತ್ತಿದ್ದೇವೆ. ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ಕುಂಚದಲ್ಲಿ ಸೆರೆ ಹಿಡಿಯುವುದರೊಂದಿಗೆ ಪರಿಸರ ಕಾಳಜಿ ನಮ್ಮಲ್ಲಿದೆ. ಚಿತ್ರಕಲಾ ಶಿಕ್ಷಕರ ನೇಮಕಾತಿ ನಿಲ್ಲಿಸಿರುವುದರಿಂದ ಚಿತ್ರಕಲೆ ನಶಿಸಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಚಿತ್ರಕಲೆ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. –ಗಣಪತಿ ಘಾಟಗೆ, ಚಿತ್ರ ಕಲಾವಿದ
–ಹೇಮರಡ್ಡಿ ಸೈದಾಪುರ