Advertisement

ಊರ್ಜಾ,ವಿಂದ್ಯಾ,ಅವನಿಯರ ಮೈಲುಗಲ್ಲು

02:46 PM Sep 19, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮೊದಲ ಸುರಂಗ ಸೆ.22ಕ್ಕೆ ಪೂರ್ಣಗೊಳ್ಳಲಿದ್ದು, ಇದರ ಬೆನ್ನಲ್ಲೇ ಹೊಸ ವರ್ಷದವರೆಗೆ ಪ್ರತಿ ತಿಂಗಳು ಒಂದಿಲ್ಲೊಂದು ಟನೆಲ್‌ ಬೋರಿಂಗ್‌ ಯಂತ್ರ (ಟಿಬಿಎಂ) ಗಳು ಈ ಮೈಲುಗಲ್ಲುಗಳನ್ನು ಸ್ಥಾಪಿಸಲಿವೆ.

Advertisement

ಇದರೊಂದಿಗೆ ಬರುವ ಜನವರಿ ಹೊತ್ತಿಗೆ ಮೂರೂವರೆ ಕಿ.ಮೀ. ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಎರಡನೇ ಹಂತದ ಯೋಜನೆಯಲ್ಲಿ ಒಟ್ಟಾರೆ 20 ಕಿ.ಮೀ. (ಜೋಡಿ ಮಾರ್ಗ ಸೇರಿ) ಸುರಂಗ ನಿರ್ಮಾಣ ಆಗಲಿದೆ. ಇದಕ್ಕಾಗಿ ಒಂಬತ್ತು ಟಿಬಿಎಂಗಳು ಸುರಂಗದಲ್ಲಿ ಸ್ಪರ್ಧೆಗಳಿದಿವೆ. ಇದರಲ್ಲಿ ಬಿಎಂಆರ್‌ ಸಿಎಲ್‌ ಎಂಜಿನಿಯರ್‌ಗಳ ಲೆಕ್ಕಾಚಾರದ ಪ್ರಕಾರ ಬರುವ ಜನವರಿ ವೇಳೆಗೆ ಐದು ಟಿಬಿಎಂಗಳು ಒಂದು ತುದಿಯಿಂದ ಮತ್ತೊಂದು ತುದಿಸೀಳಿ ಬರುವುದು ಆಗಲಿವೆ. ಆ ಮೂಲಕ ಸುಮಾರು 3.50 ಕಿ.ಮೀ. ಸುರಂಗ ಸಿದ್ಧ ಗೊಳ್ಳಲಿದ್ದು, 2022ರ ಮಾರ್ಚ್‌ ಅಂತ್ಯಕ್ಕೆ ಕನಿಷ್ಠ ಶೇ. 25ರಷ್ಟು ಸುರಂಗ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮೂಲಗಳು”ಉದಯವಾಣಿ’ಗೆ ತಿಳಿಸಿವೆ.

ಹೆಚ್ಚು-ಕಡಿಮೆ ಒಂದು ವರ್ಷದ ಹಿಂದೆ ಕಂಟೋನ್ಮೆಂಟ್‌ನಿಂದ ಊರ್ಜಾ ತನ್ನ ಪಯಣ ಶುರುಮಾಡಿತ್ತು. ಸುಮಾರು 850 ಮೀಟರ್‌ ಉದ್ದದ
ಸುರಂಗ ಮಾರ್ಗವನ್ನು ಕೊರೆದು ಸೆ. 22ರಂದು ಶಿವಾಜಿನಗರಕ್ಕೆ ಬಂದು ತಲುಪಲಿದೆ. ಇದರ ಬೆನ್ನಲ್ಲೇ ಅಂದರೆ ಅಕ್ಟೋಬರ್‌ನಲ್ಲಿ “ವಿಂದ್ಯಾ’ ಸುರಂಗ ಕೊರೆಯುತ್ತಾ ಕಂಟೋನ್ಮೆಂಟ್‌ನಿಂದ ಅದೇ ಶಿವಾಜಿನಗರಕ್ಕೆ ಬಂದಿಳಿಯಲಿದೆ. ಇನ್ನು ಮತ್ತೊಂದೆಡೆ ವೆಲ್ಲಾರದಿಂದ ಲ್ಯಾಂಗ್‌ ಫೋರ್ಡ್‌ ನಡುವೆ ಸುರಂಗ ಕೊರೆಯುತ್ತಿರುವ “ವರದ’ ನವೆಂಬರ್‌ನಲ್ಲಿ ತನ್ನ ಪಯಣ ಪೂರ್ಣಗೊಳಿಸಲಿದ್ದು, ಶಿವಾಜಿನಗರ-ಎಂ.ಜಿ. ರಸ್ತೆ ನಡುವೆ ಸುರಂಗ ಕೊರೆಯುತ್ತಿರುವ “ಅವನಿ’ ಸುರಂಗ ಕೊರೆದು ಹೊರಬರಲಿದೆ. ಈ ಮಧ್ಯೆ ಸೌತ್‌ ರ್‍ಯಾಂಪ್‌ ನಿಂದ ಸುರಂಗ ಕೊರೆಯಲು ಆರಂಭಿಸಿರುವ “ರುದ್ರ’

ಈಗಾಗಲೇ ಡೈರಿವೃತ್ತದ ಫ್ಲೈಓವರ್‌ ದಾಟಿದ್ದು, ಜನವರಿ ಅಂತ್ಯಕ್ಕೆ ಡೈರಿ ವೃತ್ತದ ಮೆಟ್ರೋ ಸುರಂಗ ನಿಲ್ದಾಣ ತಲುಪುವ ನಿರೀಕ್ಷೆ ಇದೆ.

ಮಾರ್ಚ್‌ ಅಂತ್ಯಕ್ಕೆ ಶೇ. 25 ಸುರಂಗ ಪೂರ್ಣ?: “ಈಗಾಗಲೇ ಪ್ರತಿ ಟಿಬಿಎಂಗಳಿಗೆ ನಿರ್ದಿಷ್ಟ ಗಡುವುವಿಧಿಸಿ, ಆ ಕಾಲಮಿತಿಯಲ್ಲಿ ಗುರಿ ಸಾಧನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್‌ನಿಂದ ಜನವರಿವರೆಗೆ ಪ್ರತಿ ತಿಂಗಳು ಒಂದು ಟಿಬಿಎಂ ಪ್ರಮುಖ ಘಟ್ಟ ಪೂರೈಸಲಿವೆ. ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 20 ಕಿ.ಮೀ. ಸುರಂಗದ ಪೈಕಿ ಶೇ. 25ರಷ್ಟು ಮಾರ್ಗವನ್ನು ಕ್ರಮಿಸುವ ಗುರಿ ನಮ್ಮದಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಎಂಜಿನಿಯರೊಬ್ಬರು ಮಾಹಿತಿ ನೀಡಿದರು.

Advertisement

ಸಾಮಾನ್ಯವಾಗಿ ಮೆಟ್ರೋ ಸುರಂಗ ಮಾರ್ಗಗಳಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಸೀಳಿ ಬರುವುದು ಅಕ್ಷರಶಃ ಪ್ರಮುಖ ಘಟ್ಟ. ಯಾಕೆಂದರೆ ಭೂಮಿಯ ಸುಮಾರು 20 ಮೀಟರ್‌ ಆಳದಲ್ಲಿ ದೈತ್ಯಯಂತ್ರಗಳು ಇಳಿದು, ಭೂಮಿಯನ್ನು ಕೊರೆಯುತ್ತಾ ಒಂದು ತುದಿಯಿಂದ ಮತ್ತೊಂದು ತುದಿ ಸೀಳಿ ಹೊರಬರಬೇಕಾಗಿರುತ್ತದೆ. ಹೊಸಯಂತ್ರ, ಗೊತ್ತಿರದ ಮಣ್ಣಿನ ಲಕ್ಷಣ, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಮತ್ತಿತರ ಒತ್ತಡಗಳ ನಡುವೆ ಈ ಪಯಣ ಸಾಗಿರುತ್ತದೆ. ಈಗ ಈ ಸವಾಲಿನ ಪಯಣ ಪೂರೈಸಿ “ಊರ್ಜಾ’ ಹೊರಬರಲಿದೆ. ಇದರೊಂದಿಗೆ ಉಳಿದ ಟಿಬಿಎಂಗಳ ಮೈಲುಗಲ್ಲು ಗಳಿಗೆ ನಾಂದಿಹಾಡಲಿದೆ.

ಒಂದೇ ವೃತ್ತ; ನಾಲ್ಕು ಹಂತ!
ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ರಸ್ತೆ ಕಂ ರೈಲು ಹಾದುಹೋಗುತ್ತಿರುವುದು ನಿಮಗೆ ಗೊತ್ತು. ಆದರೆ, ಸೌತ್‌ರ್‍ಯಾಂಪ್‌
(ಅಗ್ನಿಶಾಮಕ ಠಾಣೆ)-ಡೈರಿವೃತ್ತದಲ್ಲಿ ಮೂರು ರಸ್ತೆಗಳು ಒಂದು ರೈಲು ಮಾರ್ಗ ಸೇರಿ ನಾಲ್ಕು ಲೆವೆಲ್‌ಗ‌ಳನ್ನು ನೀವು ಕಾಣಬಹುದು! ಡೈರಿ ವೃತ್ತದಲ್ಲಿ ಒಂದು ಫ್ಲೈಓವರ್‌, ಅದರ ಕೆಳಗೆ ನೆಲಮಟ್ಟದ ರಸ್ತೆ ಹಾಗೂ ಅದರಡಿ ಅಂಡರ್‌ಪಾಸ್‌ ಇದೆ. ಇದರ ಬುಡದಲ್ಲಿ ಈಗ ಮೆಟ್ರೋ ಸುರಂಗ ಮಾರ್ಗ ಹಾದುಹೋಗುತ್ತಿದ್ದು, ಇದು ಅತ್ಯಂತ ಸವಾಲಿನ ಹಾದಿಯಾಗಿತ್ತು. ವಾರದ ಹಿಂದಷ್ಟೇ ಸೌತ್‌ರ್‍ಯಾಂಪ್‌ನಿಂದ ಬಂದ “ರುದ್ರ’ ಟಿಬಿಎಂ ಈ ಸುಳಿಯನ್ನು ದಾಟಿ ಡೈರಿ ವೃತ್ತದ ನಿಲ್ದಾಣದ ಕಡೆಗೆ ದಾಪುಗಾಲಿಟ್ಟಿದೆ

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next