Advertisement

Namma Metro: ಇಂಟರ್‌ಚೇಂಜ್‌ ನಿಲ್ದಾಣಗಳ ನಿರ್ಮಾಣವೇ ಸವಾಲು

03:05 PM Sep 02, 2023 | Team Udayavani |

ಬೆಂಗಳೂರು: ಭವಿಷ್ಯದ ಅತ್ಯಂತ “ಪ್ರಯಾಣಿಕರ ಸ್ನೇಹಿ’ ಎಂದು ವಿಶ್ಲೇಷಿಸಬಹುದಾದ “ನಮ್ಮ ಮೆಟ್ರೋ’ 3ನೇ ಹಂತದ ಸರ್ಜಾಪುರ-ಕೋರಮಂಗಲ-ಹೆಬ್ಟಾಳ ನಡುವಿನ ಮಾರ್ಗದಲ್ಲಿ ಸೂಕ್ತ ಮತ್ತು ಸಮರ್ಪಕ ಇಂಟರ್‌ಚೇಂಜ್‌ ನಿಲ್ದಾಣಗಳ ನಿರ್ಮಾಣವೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

ಸುಮಾರು 37 ಕಿ.ಮೀ. ಉದ್ದದ 15 ಸಾವಿರ ಕೋಟಿ ಅಂದಾಜು ವೆಚ್ಚದ ಉದ್ದೇಶಿತ ಸರ್ಜಾಪುರ- ಹೆಬ್ಟಾಳ ನಡುವಿನ ಮೆಟ್ರೋ ಮಾರ್ಗವನ್ನು ಬಜೆಟ್‌ನಲ್ಲಿ ಈಚೆಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 3ನೇ ಹಂತದಲ್ಲಿ ಇದನ್ನು ಕೈಗೆತ್ತಿಕೊಳ್ಳಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ. ನಕ್ಷೆ ಪ್ರಕಾರ ಈ ಮಾರ್ಗವು ಒಟ್ಟು 3 ಇಂಟರ್‌ಚೇಂಜ್‌ಗಳು ಬರಲಿವೆ. ಆದರೆ, ಅವುಗಳನ್ನು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣ ಅಥವಾ ಜಯದೇವ ಹೃದ್ರೋಗ ಸಂಸ್ಥೆಯಲ್ಲಿನ ಮಾದರಿಯಲ್ಲಿ ನಿರ್ಮಿಸುವ ಸವಾಲು ಎದುರಾಗಿದೆ.

ಒಟ್ಟಾರೆ 37 ಕಿ.ಮೀ.ನಲ್ಲಿ ಸರ್ಜಾಪುರ- ಕೋರಮಂಗಲ ನಡುವೆ ಎತ್ತರಿಸಿದ ಹಾಗೂ ಕೋರಮಂಗಲದಿಂದ ಹೆಬ್ಟಾಳವರೆಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ನಿರ್ಮಿಸಲು ಯೋಜಿಸಲಾಗಿದೆ. ಇದರಲ್ಲಿ ಡೈರಿವೃತ್ತ, ಸೆಂಟ್ರಲ್‌ ಕಾಲೇಜು ಮತ್ತು ಹೆಬ್ಟಾಳದಲ್ಲಿ ಇಂಟರ್‌ಚೇಂಜ್‌ ನಿಲ್ದಾಣಗಳು ಬರಲಿವೆ. ಈಗಾಗಲೇ ಒಂದು ಕಡೆ (ಸೆಂಟ್ರಲ್‌ ಕಾಲೇಜು) ನಿಲ್ದಾಣ ತಲೆಯೆತ್ತಿದ್ದು, ಉಳಿದೆರಡು ನಿರ್ಮಾಣ ಹಂತದಲ್ಲಿವೆ. ಸದ್ಯದ ಸ್ಥಿತಿಗತಿ ಪ್ರಕಾರ ಇವುಗಳಿಗೆ ಸೇರ್ಪಡೆಗೊಳ್ಳಲಿರುವ ಮೆಟ್ರೋ ನಿಲ್ದಾಣಗಳು ತುಸು ದೂರದಲ್ಲಿ ಬರಲಿದ್ದು, ಪ್ರಯಾಣಿಕರು ಭವಿಷ್ಯದಲ್ಲಿ ಮಾರ್ಗಗಳ ಬದಲಾವಣೆಗೆ ಕನಿಷ್ಠ 400-500 ಮೀಟರ್‌ ನಡೆಯಬೇಕಾಗಬಹುದು ಎಂದು ನಿಗಮದ ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧ ಉತ್ತರಕ್ಕೆ ಮೆಟ್ರೋ ಮಾರ್ಗ: ಒಂದೇ ಮಾರ್ಗದಲ್ಲಿ 3 ಇಂಟರ್‌ಚೇಂಜ್‌ ನಿಲ್ದಾಣಗಳು ಬರಲಿರುವ ಸರ್ಜಾಪುರ- ಹೆಬ್ಟಾಳ ಮೆಟ್ರೋ ಯೋಜನೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ಮೆಟ್ರೋ ಜಾಲ ವಿಸ್ತರಣೆಯಾಗಿದ್ದರೂ, ವಿಧಾನಸೌಧದ ಉತ್ತರಕ್ಕೆ ಮೆಟ್ರೋ ಮಾರ್ಗದ ಕೊರತೆ ಎದ್ದುಕಾಣಿಸುತ್ತದೆ. ಆ ಕೊರತೆಯನ್ನು 3ನೇ ಹಂತ ನೀಗಿಸಲಿದೆ. ಆದರೆ, ಸೂಕ್ತ ಮತ್ತು ಸಮರ್ಪಕ ಇಂಟರ್‌ ಚೇಂಜ್‌ ನಿಲ್ದಾಣಕ್ಕೆ ಹಲವು ಅಡತಡೆಗಳು ಇವೆ. ಈ ನಿಟ್ಟಿನಲ್ಲಿ ಮುಖ್ಯವಾಗಿ ದೂರದೃಷ್ಟಿ ಕೊರತೆ ಇದೆ. ಮೊದಲೇ ಅಂದರೆ 1 ಅಥವಾ 2ನೇ ಹಂತದ ಮಾರ್ಗ ರೂಪಿಸುವಾಗಲೇ 3ನೇ ಹಂತದ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕಿತ್ತು. ಅದಕ್ಕೆ ಪೂರಕವಾಗಿ ಜಾಗ ಪಡೆಯಬಹುದಿತ್ತು. ಈಗ ಮೂರೂ ಕಡೆಗಳಲ್ಲಿ ನಿಲ್ದಾಣ ತಲೆಯೆತ್ತಿವೆ (ಕೆಲವೆಡೆ ನಿರ್ಮಾಣ ಹಂತದಲ್ಲಿವೆ). ಅವುಗಳ ಆಸುಪಾಸು ಜಾಗದ ಲಭ್ಯತೆ ಇರಬೇಕು. ಇದ್ದರೂ ಒಂದಕ್ಕೊಂದು ಪೂರಕವಾಗಿ ಇರಬೇಕಾಗುತ್ತದೆ. ವಿಶೇಷವಾಗಿ ಎತ್ತರಿಸಿದ ಮಾರ್ಗಕ್ಕಿಂತ ಸುರಂಗದಲ್ಲಿ ಇದು ಇನ್ನೂ ಕಷ್ಟಕರವಾಗಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

ಇದೇ ಸಮಸ್ಯೆ 2ನೇ ಹಂತದಲ್ಲಿ ಬರುವ ಎಂ.ಜಿ. ರಸ್ತೆ ಇಂಟರ್‌ಚೇಂಜ್‌ನಲ್ಲಿ ಕಾಣಬಹುದು. ಅಲ್ಲಿ ಭವಿಷ್ಯದಲ್ಲಿ ಮಾರ್ಗ ಬದಲಾವಣೆಗೆ ಪ್ರಯಾಣಿಕರು ತುಸು ನಡೆದುಕೊಂಡೇ ಹೋಗಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ನಡೆಯುವ ಅನಿವಾರ್ಯತೆ ಸೆಂಟ್ರಲ್‌ ಕಾಲೇಜಿನ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣದ ಇಂಟರ್‌ಚೇಂಜ್‌ನಲ್ಲಿ ಆಗಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

Advertisement

ಮೇಲ್ನೋಟಕ್ಕೆ ಅಷ್ಟೇನೂ ಸಮಸ್ಯೆ ಆಗದಿರಬಹುದು. ಆದರೆ, “ನಮ್ಮ ಮೆಟ್ರೋ’ ಕನಿಷ್ಠ 100 ವರ್ಷ ಸೇವೆ ನೀಡುವ ಯೋಜನೆಯಾಗಿದೆ. 400-500 ಮೀಟರ್‌ ನಡೆದು ಮಾರ್ಗ ಬದಲಾವಣೆ ಮಾಡಲು ಪ್ರಯಾಣಿಕರು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ. ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಂತೆಯೇ ಇರಬೇಕು ಎಂದು ಬಯಸುವುದು ಸಹಜ. ಆ ಮಾದರಿ ಮುಂದಿನ ಹಂತಗಳಲ್ಲಿ ಕಷ್ಟಸಾಧ್ಯವೇ ಎಂದು ನಗರ ತಜ್ಞರೊಬ್ಬರು ಅಭಿಪ್ರಾಯ ಪಡುತ್ತಾರೆ.

ಭವಿಷ್ಯದಲ್ಲಿ 1ಕಿ.ಮೀ. ಅಂತರದಲ್ಲಿ ಇಂಟರ್‌ಚೇಂಜ್‌: ಭವಿಷ್ಯದಲ್ಲಿ ಕೇವಲ ಒಂದು ಕಿ.ಮೀ. ಅಂತರದಲ್ಲಿ 2 ಇಂಟರ್‌ಚೇಂಜ್‌ ಮೆಟ್ರೋ ನಿಲ್ದಾಣಗಳು ನಗರದ ಪ್ರಯಾಣಿಕರಿಗೆ ಲಭ್ಯವಾಗಲಿವೆ. ಮೆಜೆಸ್ಟಿಕ್‌ನಲ್ಲಿ ನೇರಳೆ- ಹಸಿರು ಮಾರ್ಗಗಳ ನಡುವೆ ಬದಲಾವಣೆಗೆ ಅವಕಾಶ ಇದೆ. ಅದೇ ರೀತಿ, ಮೂರನೇ ಹಂತದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣದ ಬಳಿ ಮತ್ತೂಂದು ಇಂಟರ್‌ಚೇಂಜ್‌ ಬರಲಿದೆ. ಅದು ಸರ್ಜಾಪುರ ಮತ್ತು ಹೆಬ್ಟಾಳಕ್ಕೆ ಸಂಪರ್ಕ ಕಲ್ಪಿಸಲಿದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next