ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಬರುವ ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ಸ್ಕ್ರೀನ್ ಡೋರ್‌ಗಳನ್ನು ಪರಿಚಯಿಸುವುದರ ಜತೆಗೆ ಸಿಬಿಟಿಸಿ ಸಿಗ್ನಲಿಂಗ್ ವ್ಯವಸ್ಥೆ ಪರಿಚಯಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಉದ್ದೇಶಿಸಿದ್ದು, ಈ ಸಂಬಂಧ ಸಮಾಲೋಚಕರ ನೇಮಕಕ್ಕೆ ಮುಂದಾಗಿದೆ.
ಜನರಲ್ ಕನ್ಸಲ್ಟಂಟ್ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಮೇ ಅಂತ್ಯಕ್ಕೆ ಇದು ಅಂತಿಮಗೊಳ್ಳುವ ನಿರೀಕ್ಷೆ ಇದೆ. ಆಯ್ಕೆಯಾಗುವ ಸಮಾಲೋಚನಾ ಕಂಪೆನಿಯು ಎರಡನೇ ಹಂತದಲ್ಲಿ ಬರುವ ಗುಲಾಬಿ ಮತ್ತು ತಿಳಿನೀಲಿ ಮಾರ್ಗಗಳಲ್ಲಿನ 318 ಬೋಗಿಗಳು, ಸುಧಾರಿತ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಸಿಗ್ನಲಿಂಗ್ ಮತ್ತು ಪ್ಲಾಟ್‌ಫಾರಂ ಸ್ಕ್ರೀನ್‌ಡೋರ್ ವ್ಯವಸ್ಥೆ ನಿರ್ವಹಣೆ ಮಾಡಲಿದೆ.
ನೆಲದಡಿ ನಿಲ್ದಾಣಗಳ ಪ್ಲಾಟ್‌ಫಾರಂಗಳಿಗೆ ಸ್ಕ್ರೀನ್ ಡೋರ್‌ಗಳನ್ನು (ಪಿಎಸ್‌ಡಿ) ಅಳವಡಿಸಲು ಉದ್ದೇಶಿಸಲಾಗಿದೆ. ಅದರಂತೆ ಡೇರಿ ವೃತ್ತದಿಂದ ನಾಗವಾರದವರೆಗಿನ 12 ನಿಲ್ದಾಣಗಳು ಕೆ.ಆರ್. ಪುರ- ವಿಮಾನ ನಿಲ್ದಾಣ ಮಾರ್ಗದಲ್ಲಿನ ಎರಡು ನೆಲದಡಿಯ ನಿಲ್ದಾಣಗಳಲ್ಲಿ ಈ ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಹಳಿ ಮತ್ತು ಪ್ಲಾಟ್‌ಫಾರಂ ನಡುವೆ ಇವುಗಳನ್ನು ಅಳವಡಿಸುವುದರಿಂದ ಅಹಿತಕರ ಘಟನೆಗಳನ್ನು ತಡೆಯಲು ಅನುಕೂಲ ಆಗುತ್ತದೆ. ರೈಲುಗಳು ಬಂದಾಗ ಮಾತ್ರ ಈ ಡೋರ್‌ಗಳು ಅಟೋಮೆಟಿಕ್ ಆಗಿ ತೆರೆದುಕೊಳ್ಳುತ್ತವೆ. ಮತ್ತೆ ರೈಲು ನಿರ್ಗಮಿಸುತ್ತಿದ್ದಂತೆ ಮುಚ್ಚಿಕೊಳ್ಳುತ್ತವೆ. ದೆಹಲಿ ಮತ್ತು ಚೆನ್ನೈನ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಇವುಗಳನ್ನು ಪರಿಚಯಿಸಲಾಗಿದೆ.
ಇನ್ನು ಚಾಲಕರಹಿತ ಮೆಟ್ರೋ ರೈಲುಗಳ ಸಂಚಾರ ವ್ಯವಸ್ಥೆಗೆ ಪೂರಕವಾಗಿ ಸಂವಹನ ಆಧಾರಿತ ಸುಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗುತ್ತದೆ. ಇದರಿಂದ ಅತ್ಯಂತ ಕನಿಷ್ಠ ಅಂದರೆ ಎರಡು ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯಾಚರಣೆ ಮಾಡಲು ಸಾಧ್ಯವಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲೂ ಜನರಲ್ ಕನ್ಸಲ್ಟಂಟ್ ನೇಮಕ ನಡೆಯಲಿದೆ. ಅದೇ ರೀತಿ, ಕಾಳೇನ ಅಗ್ರಹಾರ- ಗೊಟ್ಟಿಗೆರೆ ನಡುವೆ ಸಂಚರಿಸಲಿರುವ ಆರು ಬೋಗಿಗಳ 16 ಕಾರು (96 ಬೋಗಿ) ಹಾಗೂ ಸಿಲ್ಜ್ ಬೋರ್ಡ್- ಕೆ.ಆರ್. ಪುರ- ವಿಮಾನ ನಿಲ್ದಾಣದಲ್ಲಿ ಮಾರ್ಗಗಳ ಆರು ಬೋಗಿಗಳ 21 ರೈಲು (126 ಬೋಗಿ)ಗಳನ್ನು ಖರೀದಿಸಲಾಗುತ್ತಿದೆ.
ಯಾವ ಮಾರ್ಗಕ್ಕೆ ಸಾಲ? :
ಎರಡನೇ ಹಂತದ ಯೋಜನಾ ಅನುಷ್ಠಾನಕ್ಕೆ ಜಪಾನ್ ಅಂತಾ ರಾಷ್ಟ್ರೀಯ ಸಹಕಾರ ಏಜೆನ್ಸಿ (ಜೈಕಾ) ಜತೆಗೆ ಕೇಂದ್ರ ಸರ್ಕಾರ 3,717 ಕೋಟಿ ರೂ. ಆರ್ಥಿಕ ನೆರವಿನ ಒಪ್ಪಂದಕ್ಕೆ ಅತ್ತ ಒಡಂಬಡಿಕೆ ಮಾಡಿಕೊಂಡ ಬೆನ್ನಲ್ಲೇ ಇತ್ತ ನಿಗಮವು ಜನರಲ್ ಕನ್ಸಲ್ಟಂಟ್ ನೇಮಕಕ್ಕೆ ಮುಂದಾಗಿದೆ. ನಾಗವಾರದಿಂದ ಗೊಟ್ಟಿಗೆರೆವರೆಗಿನ 22 ಕಿ.ಮೀ. ಹಾಗೂ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ- ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಸುಮಾರು 58 ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಜೈಕಾ ಆರ್ಥಿಕ ನೆರವು ನೀಡಲಿದೆ.