Advertisement
ನಗರದ ಬಹುತೇಕ ರಸ್ತೆಗಳು ಅದರಲ್ಲೂ ಮೆಟ್ರೋ ಹಾದುಹೋಗುವ ಮಾರ್ಗಗಳು ಯಾವಾಗಲೂ ಹೊಳೆಯುತ್ತಿರುತ್ತವೆ. ಇದಕ್ಕೆ ಕಾರಣ ನಿಯಮಿತವಾಗಿ ಅವುಗಳ ದುರಸ್ತಿ ಕಾರ್ಯಕೈಗೆತ್ತಿಕೊಳ್ಳುವುದು. ಇದರಿಂದ ಪ್ರತಿ ವರ್ಷ ರಸ್ತೆಗಳು ಬೆಳೆವಣಿಗೆ (ಎತ್ತರದಲ್ಲಿ) ಹೊಂದುತ್ತಿವೆ. ಈ ಬೆಳವಣಿಗೆ ಇದೇ ರೀತಿ ಮುಂದುವರಿದರೆ, ಭವಿಷ್ಯದಲ್ಲಿ ಸರಕು ಹೊತ್ತ ವಾಹನಗಳು ಮೆಟ್ರೋ ನಿಲ್ದಾಣಗಳನ್ನು ದಾಟಲು ಸಮಸ್ಯೆ ಆಗಲಿದೆ.
Related Articles
Advertisement
ಇದರ ಜತೆಗೆ ರಸ್ತೆ ಸಾಂದ್ರತೆ ಹೆಚ್ಚುವುದರಿಂದ ಅಕ್ಕ-ಪಕ್ಕ ಇಳಿಜಾರು ಆಗುತ್ತದೆ. ಆಗ, ಅಲ್ಲಿದ್ದ ಮನೆ ಅಥವಾ ಮಳಿಗೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಜತೆಗೆ ಅನಗತ್ಯವಾಗಿ ರಸ್ತೆಗೆ ಅನುಗುಣವಾಗಿ ಫುಟ್‌ಪಾತ್‌ಗಳ ಮರುನಿರ್ಮಾಣ ಮಾಡುವ ಕಸರತ್ತೂ ತಪ್ಪುತ್ತದೆ.
ಸಮಸ್ಯೆ ಪ್ರಶ್ನೆ ಉದ್ಭವಿಸದು; ಬಿಬಿಎಂಪಿ: “ರಸ್ತೆಗಳ ಅಭಿವೃದ್ಧಿಯಿಂದ ಭವಿಷ್ಯದಲ್ಲಿ ಮೆಟ್ರೋಗೆ ಯಾವುದೇ ರೀತಿ ಸಮಸ್ಯೆ ಆಗದು. ಯಾಕೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ 25 ಮಿ.ಮೀ. ರಸ್ತೆಗಳ ಡಾಂಬರೀಕರಣ ಮಾಡಿದರೆ, 3 ವರ್ಷಗಳು ಅದಕ್ಕೆ ಮತ್ತೆ ಟಾರು ಹಾಕುವುದಿಲ್ಲ. ಅದೇ ರೀತಿ, 70 ಮಿ.ಮೀ. ನಷ್ಟು ಡಾಂಬರೀಕರಣ ಮಾಡಿದರೆ, 5 ವರ್ಷ ಅದರ ಅವಧಿ ಇರುತ್ತದೆ. ಹಾಗಾಗಿ, ಅರ್ಧ ಮೀ.ಎತ್ತರ ಆಗಬೇಕಾದರೂ ದಶಕಗಳೇ ಹಿಡಿಯುತ್ತದೆ. ಈಗ ನಗರದಲ್ಲಿರುವ ರಸ್ತೆಗಳನ್ನೇ ತೆಗೆದುಕೊಂಡರೆ 70-80ರ ದಶಕದಲ್ಲಿ ನಿರ್ಮಿಸಲ್ಪಟ್ಟಿವೆ. ಇನ್ನು ಮುಂದಿನ ದಿನಗಳಲ್ಲಂತೂ ಡಾಂಬರೀಕರಣ ಹೋಗಿ, ವೈಟ್‌ಟಾಪಿಂಗ್ ಎಂಬ ಶಾಶ್ವತ ವ್ಯವಸ್ಥೆ ಬರುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸುತ್ತಾರೆ.
2017ರಲ್ಲೇ ಟಾರು ಕಂಡಿತ್ತು :
ಈಚೆಗೆ ಟ್ರಿನಿಟಿ ವೃತ್ತದ ಮೆಟ್ರೋ ನಿಲ್ದಾಣದಲ್ಲಿ ಸರಕು ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿಕೊಂಡಿತ್ತು. ಆದರೆ, ಆ ರಸ್ತೆ ಡಾಂಬರೀಕರಣಗೊಂಡಿದ್ದು 2017ರಲ್ಲಿ. ಹಾಗಾಗಿ, ಇದಕ್ಕೆ ರಸ್ತೆಗಳ ಸಾಂದ್ರತೆ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಪಡಿಸುತ್ತಾರೆ.
ಮರುಬಳಕೆಗೆ ಬೇಕಿದೆ ತಂತ್ರಜ್ಞಾನ : ನಗರದಲ್ಲಿ ನಿತ್ಯ ನೂರಾರು ಕಟ್ಟಡಗಳ ನೆಲಸಮ ಹಾಗೂ ನಿರ್ಮಾಣ ಕಾರ್ಯ ನಡೆಯುತ್ತದೆ. ಕಟ್ಟಡಗಳಿಗೆ ಬಳಕೆಯಾಗುವ ಕಚ್ಚಾವಸ್ತುಗಳಲ್ಲಿ ಶೇ. 50ರಷ್ಟಾದರೂ ಮರುಬಳಕೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಪರಿಚಯಿಸಬೇಕಿದೆ. ಇದು ಸಾಧ್ಯವಾದರೆ, ತಕ್ಕಮಟ್ಟಿಗಾದರೂ ಕ್ವಾರಿ ಸೇರಿದಂತೆ ಪರಿಸರದ ಮೇಲೆ ಹೊರೆ ಕಡಿಮೆ ಆಗಲಿದೆ.
–ವಿಜಯಕುಮಾರ್ ಚಂದರಗಿ