Advertisement
ಸೋತು ಹೋದೆನೆಂದು ಮನದೊಳಗಿನ ಕಿಚ್ಚನ್ನು ಆರಲು ಬಿಡದೆ ಛಲ ಎನ್ನುವ ಬತ್ತಿಯನ್ನು ಉರಿಯುವಂತೆ ಮಾಡಲು ಸತತ ಪರಿಶ್ರಮ ಬೇಕು. ಇಲ್ಲಿ ಸೋಲದೆ ಗೆದ್ದವರು ಯಾರೂ ಇಲ್ಲ. ಪ್ರತೀ ಬಾರಿಯ ಸೋಲೇ ತನ್ನ ಸ್ಫೂರ್ತಿ ಎನ್ನುವ ಛಲಗಾರ ಹುಡುಗ ಪುತ್ತೂರು ತಾಲೂಕಿನ ನಮಿತ್ ಅವರು ರಿಲೇ ಆಟದಲ್ಲಿ ಹೆಚ್ಚಿನ ಸಾಧನೆ ಮಾಡಿ, ಉತ್ತುಂಗಕ್ಕೇರುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಅವರಿಗೆ ಆಗ ವಯಸ್ಸು ಕೇವಲ ಐದು. ಕಿರಿಯವನಾಗಿದ್ದರಿಂದ ಯಾವ ತಂಡಕ್ಕೂ ಇವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಬಾಲ್ಯದಲ್ಲಿ ಅರಳಿದ ಆಸೆಗೆ ಕನಸಿನ ರೆಕ್ಕೆ ಕಟ್ಟಿ ಪ್ರತಿನಿತ್ಯ ಅಭ್ಯಾಸದ ಮೂಲಕ ಅದನ್ನು ಇನ್ನಷ್ಟು ಬಿಗಿಮಾಡಿಕೊಂಡರು. ಶಾಲಾ ದಿನಗಳಲ್ಲಿ ದೀಕ್ಷಿತ್ ರೈ ಹಾಗೂ ಚಿತ್ರಾವತಿ ಅವರ ತರಬೇತಿಯ ಜತೆಗೆ ಕಠಿನ ಶ್ರಮವಹಿಸಿ ಹಲವು ಕಡೆ ರಿಲೇಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿಕೊಂಡರು.
Related Articles
ಆದರೆ, ಫಿಟ್‌ನೆಸ್ ಸಮಸ್ಯೆ ಅವರನ್ನು ಪದೇ ಪದೇ ಕಾಡಿತು. ಅಭ್ಯಾಸದ ವೇಳೆ ಆಗುತ್ತಿದ್ದ ಗಾಯಗಳು ಕಾಲಿನ ಶಕ್ತಿಯ ಮೇಲೆ ಪ್ರಭಾವ ಬೀರಿದ್ದರಿಂದ ವೈದ್ಯರ ಸಲಹೆಯಂತೆ ಒಂದು ವರ್ಷ, ಎರಡು ವರ್ಷಗಳ ಬಿಡುವು ಪಡೆಯಬೇಕಾಯಿತು. ಮೊದಲ ಬಾರಿ ಕಾಲಿನ ಮೂಳೆ ಮುರಿದು, ಒಂದು ವರ್ಷದ ಅವಧಿಯ ಸುದೀರ್ಘ ವಿಶ್ರಾಂತಿ ಪಡೆಯುವಂತಾಯಿತು. ಅನಂತರ ವಿದ್ಯಾಭಾರತಿ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ರಿಲೇ ಸ್ಪರ್ಧೆಯಲ್ಲಿ ತನ್ನ ಪ್ರತಿಭೆ ಮೆರೆದರು. ರಾಜ್ಯಮಟ್ಟದ ರಿಲೇಗೆ ಅರ್ಹತೆಯನ್ನು ಗಿಟ್ಟಿಸಿಕೊಂಡರು. ಇಲ್ಲೂ ತಂಡವನ್ನು ಗೆಲ್ಲಿಸಿ, ಸೌತ್ ಝೋನ್‌ಗೆ ಆಯ್ಕೆ ಯಾದರು. ಅದೇ ಹೊತ್ತಿಗೆ ಮತ್ತೂಮ್ಮೆ ಕಾಲಿನ ಮೂಳೆ ಮುರಿತ ಕಾಡಿದರೂ ಛಲ ಬಿಡದೆ ಗುರಿ ಸಾಧಿಸಿ, ದ್ವಿತೀಯ ಸ್ಥಾನ ಗಳಿಸಿದರು.
Advertisement
ನ್ಯಾಶನಲ್ ಮೀಟ್‌ಗೆ ಆಯ್ಕೆಕಾಲು ನೋವು ಗುಣವಾಗುತ್ತಿದ್ದಂತೆಯೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಅಲ್ಲೂ ಉತ್ತಮ ಪ್ರದರ್ಶನ ತೋರಿ ಬಂಗಾರದ ಪದಕಕ್ಕೆ ಕೊರಳೊಡ್ಡುವ ನಿರೀಕ್ಷೆ ಮೂಡಿಸಿದ್ದರು. ಆಗಲೂ ಅನಾರೋಗ್ಯ ಕಾಡಿ ಪದಕ ತಪ್ಪಿಸಿತು. 400 ಮೀ. ರಿಲೇಯಲ್ಲಿ ಎಸ್‌ಜಿಎಫ್ಐಗೆ ಅರ್ಹರಾದರು. ಗೆಲುವಿನತ್ತ ದಾಪುಗಾಲಿಡುತ್ತಿದ್ದ ಹೊತ್ತಿಗೆ ಮತ್ತೆ ಕಾಲು ನೋವು ಬಾಧಿಸಿತು. ಎರಡು ವರ್ಷಗಳ ಸುದೀರ್ಘ ವಿರಾಮ ಅನಿವಾರ್ಯವೆನಿಸಿತು. ಈ ಹಂತದಲ್ಲಿ ಮಾನಸಿಕವಾಗಿ ತಮ್ಮನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಬಂದರು. ಇದರ ಫಲವಾಗಿ ವಿಟಿಯು ಮಟ್ಟದ 400 ಮೀ. ರಿಲೇಯಲ್ಲಿ ಪದಕ ಗೆದ್ದರು. ಹೆತ್ತವರ ಪ್ರೋತ್ಸಾಹ
ಮಗನ ಸಾಧನೆಗೆ ತಂದೆ ನರೇಂದ್ರ, ತಾಯಿ ಮಿನಿ ಹಾಗೂ ತಂಗಿ ಅನ್ವಿತಾ ಅವರ
ಸಹಕಾರ ತುಂಬಾ ಇದೆ. ಭವಿಷ್ಯದಲ್ಲಿ ಗಾಯ ಹಾಗೂ ಆರೋಗ್ಯದ ಸಮಸ್ಯೆ ಕಾಡದಂತೆ ಗುರುಗಳ ಮಾರ್ಗದರ್ಶನದಲ್ಲಿ ನಮಿತ್ ಎಚ್ಚರಿಕೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಶೋಭಿತಾ ಮಿಂಚಿಪದವು