ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿರುವ ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಚೀತಾಗಳಲ್ಲಿ ಒಂದಾದ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದ ಮೂರು ದಿನಗಳ ನಂತರ ಈ ಬೆಳವಣಿಗೆಯಾಗಿದೆ. ಮರಿಗಳ ಜನನದ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹಂಚಿಕೊಂಡಿದ್ದು, ಟ್ವಿಟರ್ನಲ್ಲಿ ಮರಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸಾಶಾ ಸೇರಿ ಇತರ ಏಳು ದೊಡ್ಡ ಚೀತಾಗಳೊಂದಿಗೆ ಆಫ್ರಿಕನ್ ದೇಶದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್ಪಿ) ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ ಮಧ್ಯದಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು ಶಿಯೋಪುರ ಜಿಲ್ಲೆಯ ಕೆಎನ್ಪಿಯಲ್ಲಿ ಇರಿಸಲಾಗಿತ್ತು.
Related Articles
ಉಳಿದ ಏಳು ಚೀತಾಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಏಳರಲ್ಲಿ, ಮೂರು ಗಂಡು ಮತ್ತು ಒಂದು ಹೆಣ್ಣನ್ನು ಉದ್ಯಾನವನದ ತೆರೆದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಅವು “ಸಂಪೂರ್ಣವಾಗಿ ಆರೋಗ್ಯಕರ, ಸಕ್ರಿಯ ಮತ್ತು ಸಾಮಾನ್ಯ ರೀತಿಯಲ್ಲಿ ಬೇಟೆಯಾಡುತ್ತಿವೆ” ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್-ವನ್ಯಜೀವಿ) ಜೆಎಸ್ ಚೌಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾದಿಂದ ಕೆಎನ್ಪಿಗೆ ತರಲಾದ 12 ಚೀತಾಗಳನ್ನು ಪ್ರಸ್ತುತ ಕ್ವಾರಂಟೈನ್ ಆವರಣದಲ್ಲಿ ಇರಿಸಲಾಗಿದೆ ಮತ್ತು ಅವು ಆರೋಗ್ಯಕರ ಮತ್ತು ಸಕ್ರಿಯವಾಗಿವೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಎಂಟು ನಮೀಬಿಯಾದ ಚೀತಾಗಳನ್ನು ಐದು ಹೆಣ್ಣು ಮತ್ತು ಮೂರು ಗಂಡು, ಸೆಪ್ಟೆಂಬರ್ 17 ರಂದು ಕೆಎನ್ಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಆವರಣಗಳಿಗೆ ಬಿಡುಗಡೆ ಮಾಡಲಾಗಿತ್ತು.
1947 ರಲ್ಲಿ ಇಂದಿನ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ಕೊನೆಯ ಚೀತಾ ಮರಣಹೊಂದಿತ್ತು, 1952 ರಲ್ಲಿ ದೇಶದಲ್ಲಿ ಅತಿವೇಗದಲ್ಲಿ ಕ್ರಮಿಸುವ ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಗಿತ್ತು.