ಹೊಸದಿಲ್ಲಿ: ಶತಮಾನದ ಭೀಕರ ಬರದಿಂದಾಗಿ ಆಹಾರ ಕ್ಷಾಮಕ್ಕೆ ಸಿಲುಕಿರುವ ನಮೀಬಿಯಾ ತನ್ನ ನಾಗರಿಕರಿಗೆ ಆಹಾರ ಪೂರೈಸುವ ಉದ್ದೇಶದಿಂದ ಈಗ ಆನೆಗಳ ಸಹಿತ 700ಕ್ಕೂ ಅಧಿಕ ವನ್ಯಜೀವಿಗಳ ಹತ್ಯೆ ನಡೆಸಲು ಮುಂದಾಗಿದೆ!
ನಮೀಬಿಯಾದ ಶೇ. 84ರಷ್ಟು ಆಹಾರ ಸಂಗ್ರಹ ಮುಗಿದಿದ್ದು, 25 ಲಕ್ಷಕ್ಕೂ ಅಧಿಕ ಮಂದಿ ತೀವ್ರ ಹಸಿವಿನಿಂದ ದಿನ ದೂಡುವ ಸ್ಥಿತಿಗೆ ತಲುಪಿದ್ದಾರೆ. ಜತೆಗೆಶುದ್ಧ ನೀರಿನ ಕೊರತೆಯಿಂದಾಗಿ ಕಾಲಾರಾದಂತಹ ರೋಗಗಳು ಹರಡುತ್ತಿವೆ. ನೀರು ಸಂಗ್ರಹಿಸಲು ತೆರಳುವ ಮಹಿಳೆ ಯರ ಮೇಲೆ ದಾಳಿಗಳು ನಡೆಯುತ್ತಿವೆ.
ಹೀಗಾಗಿ ಬರ ಪರಿಸ್ಥಿಯನ್ನು ಎದುರಿಸಲು ಸರಕಾರವು ವನ್ಯಜೀವಿಗಳ ಮೇಲೆ ಕಣ್ಣಿರಿಸಿದೆ. ವನ್ಯಜೀವಿಗಳನ್ನು ಕೊಂದು, ಮಾಂಸವನ್ನು ಜನರಿಗೆ ಪೂರೈಸಿ ಹಸಿವು ತಣಿಸಲು ನಿರ್ಧರಿಸಿದೆ.
ಆಹಾರ ಪೂರೈಕೆಯಷ್ಟೇ ಅಲ್ಲದೆ ಮಾನವ-ವನ್ಯಜೀವಿ ಸಂಘರ್ಷಕ್ಕೂ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಸರಕಾರ ಇರಿಸಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ನಮೀಬಿಯಾದ ಪರಿಸರ ಸಚಿವಾಲಯ, ವನ್ಯಜೀವಿಗಳ ಪ್ರಮಾಣ ನಿಗದಿಗಿಂತ ಹೆಚ್ಚಿರುವಲ್ಲಿ ನೀರಾನೆ, ಕಾಡೆಮ್ಮೆ, ಜೀಬ್ರಾ, ಜಿಂಕೆ, ಆನೆಗಳ ಸಹಿತ 723 ಜಾತಿಯ ವನ್ಯ ಪ್ರಾಣಿಗಳನ್ನು ಕೊಲ್ಲುವುದಾಗಿ ತಿಳಿಸಿದೆ. ಈಗಾಗಲೇ ವನ್ಯಜೀವಿಗಳ ಬೇಟೆ ಆರಂಭಿಸಿರುವ ನಮೀಬಿಯಾ ಸರಕಾರವು 157 ಕಾಡುಪ್ರಾಣಿಗಳನ್ನು ಕೊಂದು 56,875 ಕೆ.ಜಿ. ಮಾಂಸವನ್ನು ತನ್ನ ಪರಿಹಾರ ಕಾರ್ಯಾಚರಣೆಗೆ ಸಂಗ್ರಹಿಸಿದೆ. ಸರಕಾರದ ವಿವಾದಾತ್ಮಕ ತೀರ್ಮಾನಕ್ಕೆ ವಿಶ್ವಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ ನಾವಿರುವ ಪರಿಸ್ಥಿತಿಯಲ್ಲಿ ಈ ತೀರ್ಮಾನ ತೆಗೆದುಕೊಳ್ಳದೆ ಬೇರೆ ವಿಧಿಯಿಲ್ಲ ಎಂದು ನಮೀಬಿಯಾ ಪ್ರತಿಕ್ರಿಯಿಸಿದೆ.
ಬೇರೆ ಯಾವ ರಾಷ್ಟ್ರಗಳಲ್ಲಿ?
ನಮೀಬಿಯಾದೊಂದಿಗೆ ಜಿಂಬಾಬ್ವೆ, ಮಲಾವಿ ಮತ್ತು ಜಾಂಬಿಯಾ ರಾಷ್ಟ್ರಗಳು ಕೂಡ ಭೀಕರ ಬರಕ್ಕೆ ತುತ್ತಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಿವೆ.
ಭೀಕರ ಬರಗಾಲಕ್ಕೆ
ಕಾರಣವೇನು?
ನಮೀಬಿಯಾ ಇರುವ ಆಫ್ರಿಕಾ ಖಂಡದ ದಕ್ಷಿಣ ಭಾಗವು ಬರಗಾಲಕ್ಕೆ ಹೆಚ್ಚು ತುತ್ತಾಗುವ ಪ್ರದೇಶ. ಈ ಮೊದಲು 2013, 2016 ಮತ್ತು 2019ರಲ್ಲಿ ಕೂಡ ತೀವ್ರ ಬರದಿಂದಾಗಿ ನಮೀಬಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಅ. 2023ರಿಂದ ನಮೀಬಿಯಾ ಎದುರಿಸುತ್ತಿರುವ ಬರಗಾಲ ಕಳೆದ ನೂರು ವರ್ಷಗಳಲ್ಲೇ ಅತ್ಯಂತ ಭೀಕರ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಭೀಕರ ಬರಕ್ಕೆ ಎಲ್‌ನಿನೋ ಕೂಡ ಕಾರಣವಾಗಿದ್ದು, ವಾಡಿಕೆ ಮಳೆಯ ಪೈಕಿ ಕೇವಲ ಶೇ. 20ರಷ್ಟು ಮಾತ್ರ ಸುರಿದಿದೆ.