Advertisement
ಮೊನ್ನೆ ನಾನು ಶಾರ್ಟ್ ಫಿಲಮ್ ಶೂಟಿಂಗ್ ಮುಗಿಸಿ ಮನೆಗೆ ಹಿಂತಿರುಗುವಾಗ ನನ್ನ ಗಾಡಿ ಕೈ ಕೊಟ್ಟಿತು ಹೇಗೂ ಲೇಟಾಗಿದೆಯಲ್ಲಾ ಇಲ್ಲೇ ಇರುವ ಗೆಳೆಯನ ರೂಮ್‌ಗೆ ಹೋಗಿ ಮರುದಿನ ಮನೆಗೆ ಹೋದರಾಯೆಂದು ಅವನ ರೂಮಿಗೆ ಹೋದೆ ಆದರೆ ಆ ದಿನ ಅವರ ರೂಮ್ ಬೇರೊಂದು ರೂಮಿಗೆ ಶಿಫ್ಟ್ ಮಾಡುವ ಬ್ಯುಸಿಯಾಗಿದ್ದರು. ಆ ದಿನ ನನ್ನ ಗೆಳೆಯ ಇರಲಿಲ್ಲ . ಬದಲಾಗಿ ಆತನ ಗೆಳೆಯರಿದ್ದರು. ಅವರು ನನ್ನಲ್ಲಿ ನೀನು ಇಲ್ಲೇ ಇರು, ನಾವು ಹೋಗಿ ಬರುವಾಗ ಲೇಟ್ ಆಗುತ್ತೆ. ಇವತ್ತು ರಾತ್ರಿ ಈ ರೂಮ್‌ನಲ್ಲೇ ನಾವು ಉಳಿದುಕೊಳ್ಳುತ್ತೇವೆ ಅಂದರು. ನಿನ್ನ ಊಟ ಆಯ್ತಾ ನಾನು ಹೂ ಆಯ್ತು ಅಂದೇ. ಆದರೆ ನನಗ್ಯಾಕೋ ಆ ದಿನ ಅವರಿಂದ ಊಟ ತರಿಸಲು ಸರಿ ಎನಿಸಲಿಲ್ಲ. ಅವರು ಹೋದರು ಇಲ್ಲಿ ನಾನೊಬ್ಬನೆ. ಹೊಟ್ಟೆ ಬೇರೆ ಚುರುಕ್ಕೆನ್ನಲು ಶುರುವಿಟ್ಟಿದೆ. ಹಣ ತಡಕಾಡಿದೆ ಪರ್ಸ್ ಮೂಲೆಯಲ್ಲಿ ಮೂವತ್ತು ರೂಪಾಯಿ ಬಿಟ್ಟರೆ ಬೇರೆನೂ ಇರಲಿಲ್ಲ. ದಾರಿ ಬದಿಯ ಫ್ರೈಡ್ ರೈಸ್ ಗತಿಯೆಂದು ಹುಡುಕುತ್ತಾ ಹೊರಟೆ. ಆದರೆ ಆ ದಿನ ರವಿವಾರ ಗಂಟೆ ಬೇರೆ ಹತ್ತಾಗಿದೆ. ಎಷ್ಟು ನಡೆದರೂ ಯಾವೊಂದು ಅಂಗಡಿಯೂ ಸಿಗುತ್ತಿಲ್ಲ . ಬಂಟ್ಸ್ ಹಾಸ್ಟೆಲ್‌ನಿಂದ ಪಿ.ವಿ.ಎಸ್. ಬಳಿ ತಲುಪಿದಾಗ ಅಲ್ಲೊಂದು ಚಿಮಣಿ ದೀಪ ಉರಿಯುವುದು ಕಂಡು ಬಂತು. ಹೆಜ್ಜೆಗಳು ಬಿರುಸುಗೊಂಡು ತಲುಪಿ ಕೇಳಿದೆ. ತಿನ್ನಲು ಫ್ರೈಡ್ ರೈಸ್ ಇದೆಯಾ ..? ಅವನು ಇಲ್ಲಾ ಮೊಟ್ಟೆ ಮಾತ್ರ ಉಳಿದಿರುವುದು ಅಂದ. ನಾನು ಒಲ್ಲದ ಮನಸ್ಸಿನಲ್ಲಿ ಸರಿ ಎಂದು ಕೊಡಲು ಹೇಳಿದೆ. ಮನಸ್ಸು ಕೇಳಲಿಲ್ಲ . ರೈಸ್ ಇದ್ಯಾ, ಸ್ವಲ್ಪ ಆದರೂ ಸರಿ ಕೊಡಿ. ಅಂದೆ ಆತ ಓಕೆ ಸರಿ ನೋಡುತ್ತೇನೆ ಎಂದ. ಆದರೆ ಅಲ್ಲಿ ನೋಡಿದಾಗ ಸಾಮಾನ್ಯ ಕೊಡೋ ಫ್ರೈಡ್ ರೈಸ್‌ಗಿಂತ ಹೆಚ್ಚಾಗೇ ಇದ್ದಿತು. ಅಂಗಡಿಯಾತ ನಗುತ್ತಾ ಒಂದು ಮಾತು ಹೇಳಿದ. ಅದನ್ನು ಸಾಮಾನ್ಯವಾಗಿ ಕೇಳುವಾಗ ಅಷ್ಟೊಂದು ವಿಶೇಷವೆನಿಸದು.
ಅನ್ನದ ಮೇಲೆ ಯಾರ ಹೆಸರು ಬರೆದಿರುತ್ತೋ ಅವರಿಗೆನೇ ಸೇರುತ್ತೆ ಅಂದಾಗ ಅದ್ಯಾಕೋ ಆ ಮಾತು ಸತ್ಯ ಅನ್ನಿಸಿತು.ಬದುಕಿಗೆ ಹೊಸ ಅನುಭವವನ್ನು ಕೈಯಲ್ಲಿದ್ದ ಮೂವತ್ತು ರೂಪಾಯಿ, ಹಸಿವಿನ ಹೊಟ್ಟೆ ಕಲಿಸಿಕೊಟ್ಟಿತು. -ವಿಶ್ವಾಸ್ ಅಡ್ಯಾರ್