Advertisement

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ : ಡಿಸಿ, ಎಡಿಸಿಯಿಂದ ಸಮಗ್ರ ಮಾಹಿತಿ

03:50 AM Jul 09, 2017 | |

ಮಡಿಕೇರಿ: ಹದಿನೆಂಟು ವರ್ಷ ಪೂರ್ಣಗೊಂಡವ ರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಸಹಕರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರಲ್ಲಿ ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಕೋರಿದ್ದಾರೆ. 
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ವಿಶೇಷ ಅಭಿಯಾನದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

Advertisement

ಇದೇ ಜುಲೈ, 31ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆಸುವುದು ಮತ್ತಿತರ ಬಗ್ಗೆ ಅಭಿಯಾನ ನಡೆಯಲಿದೆ. ಹಾಗೆಯೇ ಜುಲೈ, 8 ಮತ್ತು 22 ರಂದು ವಿಶೇಷ ಅಭಿಯಾನವು ಬೂತ್‌ ಮಟ್ಟದಲ್ಲಿ ಜರಗಲಿದ್ದು, ಈ ಸಂಬಂಧ ಸಾರ್ವಜನಿಕರಿಗೆ, ಅರ್ಹ ಯುಜನರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.  
 
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ತೆಗೆಯು ವುದು ಅಥವಾ ವರ್ಗಾವಣೆ ಮಾಡುವುದು ನಿರಂತರ ಪ್ರಕ್ರಿಯೆ ಯಾಗಿದ್ದರೂ ಸಹ, ವಿಶೇಷ ಅಭಿಯಾನದ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರು ಸೇರ್ಪಡೆ ಮಾಡುವುದು, ಮೃತಪಟ್ಟವರ ಹೆಸರು ತೆಗೆಯುವುದು ಮತ್ತಿತರ ಬಗ್ಗೆ ಮಾಹಿತಿ ನೀಡುವ ವಿಶೇಷ ಅಭಿಯಾನಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದೆ ಬಿಟ್ಟು ಹೋಗಿರುವ ಮತ್ತು ಮೊದಲ ಬಾರಿಗೆ ಮತದಾರರ ಪಟ್ಟಿ ಯಲ್ಲಿ ಯುವ ಮತದಾರರನ್ನು (18-21) ನೋಂದಣಿ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಬೂತ್‌ ಮಟ್ಟದ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ತಿದ್ದುಪಡಿ ಮಾಡಲು ಮತ್ತು ಹೆಸರು ವರ್ಗಾಯಿಸಲು ನಮೂನೆ 6, 7, 8 ಮತ್ತು 8ಎಯನ್ನು ಸ್ವೀಕರಿಸಲಾಗುತ್ತದೆ. ಆದ್ದರಿಂದ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಮೃತ ಪಟ್ಟವರ ಹೆಸರು ತೆಗೆಯಲು, ವರ್ಗಾವಣೆ ಮಾಡಿಸಿಕೊಳ್ಳಲು ಬೂತ್‌ ಮಟ್ಟದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ವಿನಂತಿ
2017ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡಿರುವ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಾಂಶುಪಾಲರು ವಿಶೇಷ ಆಸಕ್ತಿ ವಹಿಸಬೇಕಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರಲ್ಲಿ ಕೋರಿದರು. 

Advertisement

ಜಿಲ್ಲೆಯ ಹಾಡಿಯ ಜನರು ಸೇರಿದಂತೆ ಪ್ರತಿಯೊಬ್ಬರಲ್ಲಿ ಅಭಿಯಾನದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರು ಸೇರ್ಪಡೆ ಮಾಡುವುದು, ಹೊಸ ಮತದಾರರ ನೋಂದಣಿ ಬಗ್ಗೆ ವಿಶೇಷ ಜಾಗೃತಿ ಮೂಡಿಸ ಬೇಕಿದೆ. ಹಾಡಿಗಳಲ್ಲಿ ವಿಶೇಷ ಒತ್ತು ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ಯಾರಿಂದಲೂ ಸಹ ಚುನಾವಣಾ ಗುರುತಿನ ಚೀಟಿ ಇಲ್ಲವೆಂದು ಕೇಳಿ ಬರಬಾರದು. ಚುನಾವಣಾ ಸಂದರ್ಭದಲ್ಲಿ ಗುರುತಿನ ಚೀಟಿ ಇಲ್ಲವೆಂದು ಮತದಾನ ಬಹಿಷ್ಕರಿಸುವುದಾಗಲಿ ಮತ್ತಿತರ ದೂರುಗಳು ಕೇಳಿ ಬರದಂತೆ ಈಗಿನಿಂದಲೇ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಅವರು ಮಾತನಾಡಿ ಜು. 31ರ ವರೆಗೆ ಬೂತ್‌ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇದ್ದರೆ, ಹೆಸರು ಸೇರ್ಪಡೆ ಮಾಡುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಿರುವ ಗುರುತಿನ ಚೀಟಿ ತಪ್ಪು ಆಗಿದ್ದಲ್ಲಿ ಸರಿಪಡಿಸಲು ನಮೂನೆ (8), ಸೇರ್ಪಡೆಯಾಗಿರುವ ಮತದಾರರು ಮರಣ ಅಥವಾ ಸ್ಥಳಾಂತರ ಅಥವಾ ಮತದಾರರು ಎರಡು ಬಾರಿ ನೋಂದಣಿಯಾಗಿದ್ದಲ್ಲಿ, ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ಸೇರ್ಪಡೆಯಾಗಿದ್ದಲ್ಲಿ, ನಮೂನೆ (7) ರಲ್ಲಿ ಮಾಹಿತಿ ನೀಡಬೇಕಿದೆ. ಹಾಗೆಯೇ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಬಯಸುವಲ್ಲಿ ಪೂರಕ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.  

ಸಹಭಾಗಿತ್ವ ಅಗತ್ಯ
ವಿವಿಧ ರಾಜಕೀಯ ಪಕ್ಷಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಹಕಾರ, ಸಹಭಾ ಗಿತ್ವ ಇದ್ದಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಾಧ್ಯ. ಆದ್ದರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಭಿಯಾನ ದಲ್ಲಿ ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಅವರು ಮನವಿ ಮಾಡಿದರು. 
 
ಭಾರತೀಯ ಜನತಾ ಪಕ್ಷದ ಪ್ರಮುಖ ಮುಖಂಡರಾದ ಮಹೇಶ್‌ ಜೈನಿ, ಅರುಣ್‌ ಕುಮಾರ್‌, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಖಂಡರಾದ ತೆನ್ನೀರ ಮೈನಾ, ಜಾತ್ಯತೀತ ಜನತಾ ದಳ (ಎಸ್‌) ಮುಖಂಡರಾದ ಯೋಗೇಶ್‌ ಕುಮಾರ್‌ ಅವರು ಮತದಾರರ ಪಟ್ಟಿಯ ಅಭಿಯಾನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು. 

ತಹಶೀಲ್ದಾರರಾದ ಕುಸುಮಾ, ಮಹೇಶ್‌, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ್‌ ಕುಂಜಮ್ಮ, ಸರಸ್ವತಿ ಡಿ.ಎಡ್‌. ಕಾಲೇಜಿನ ಪ್ರಾಂಶುಪಾಲ ಶ್ರೀಕುಮಾರ್‌, ಮೂರ್ನಾಡು ವಿದ್ಯಾಸಂಸ್ಥೆಯ ಪ್ರೊ| ಭಾಗೀರಥಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚೈತ್ರ, ಕೌಶಿಕ್‌ ಕುಮಾರ್‌, ಐಟಿಐ ಕಾಲೇಜಿನ ಪ್ರಾಂಶುಪಾಲ ಯೋಗೇಶ್‌ ಕುಮಾರ್‌, ಚೆರಿಯನ್‌, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಕಾರ್ಯಪ್ಪ ಇತರರು ಹಾಜರಿದ್ದರು.  

ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್‌/ಕಂದಾಯ ನಿರೀಕ್ಷಕರು/ಗ್ರಾಮ ಲೆಕ್ಕಿಗರ ಕಚೇರಿ, ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರ ಕಚೇರಿ (ಮಡಿಕೇರಿ ತಾಲೂಕು-08272-228396/ ಸೋಮವಾರ ಪೇಟೆ ತಾಲೂಕು-08276-284044/ ವಿರಾಜಪೇಟೆ ತಾಲೂಕು-08274-257328), ಉಪ ವಿಭಾಗಾಧಿಕಾರಿಗಳ ಕಚೇರಿ, ಮಡಿಕೇರಿ ಉಪ ವಿಭಾಗ, ಮಡಿಕೇರಿ, ದೂ.ಸಂ: 08272-225469, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ. ದೂ.ಸಂ: 08272-225932 ನ್ನು ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next