1. ರಹದಾರಿ ಪತ್ರ (ಪಾಸ್‌ಪೋರ್ಟ್)
2. ಬ್ಯಾಂಕ್ ಖಾತೆಗಳು (ಸಾಲದ ಖಾತೆಯೂ ಸೇರಿದಂತೆ)
3. ಪಡಿತರ ಚೀಟಿ (ರೇಷನ್ ಕಾರ್ಡ್)
4. ವಾಹನ ಚಾಲನೆ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಮತ್ತು ನೋಂದಣಿ ಪ್ರಮಾಣ ಪತ್ರ (ಆರ್.ಸಿ ಪುಸ್ತಕ)
5. ಮತದಾರರ ಪಟ್ಟಿ
6. ವಿಮಾ ಪಾಲಿಸಿಗಳು, ಭವಿಷ್ಯ ನಿಧಿ ಖಾತೆ ಹಾಗೂ ಸೇವಾ ದಾಖಲೆ (ಸರ್ವೀಸ್ ರಿಜಿಸ್ಟರ್)
7. ಷೇರುಗಳು, ಡಿಬೆಂಚರುಗಳು, ಯುನಿಟ್‌ಗಳು ಇತ್ಯಾದಿ
8. ಇತರ ಮುಖ್ಯವಾದ ದಾಖಲೆಗಳು
Advertisement
ಹೆಸರು ಬದಲಾಯಿಸುವುದಕ್ಕೆ ಮುಂಚೆಯೇ ನಿಮ್ಮಲ್ಲಿರುವ ಡಿಗ್ರಿ ಸರ್ಟಿಫಿಕೇಟುಗಳು, ಅಂಕಪಟ್ಟಿಗಳು, ಯೋಗ್ಯತಾ ಪತ್ರಗಳು, ಸನ್ನಡತೆಯ ಪ್ರಮಾಣ ಪತ್ರಗಳು, ಹಕ್ಕು ಪತ್ರಗಳು ಇತ್ಯಾದಿಗಳಲ್ಲಿ ಹೆಸರು ತಿದ್ದುಪಡಿ ಮಾಡಿಸಬೇಕಾದ ಅವಶ್ಯಕತೆ ಇಲ್ಲ. ಯಾರಾದರೂ ಈ ಮೇಲ್ಕಂಡ ದಾಖಲೆಗಳ ಬಗ್ಗೆ ಸಮಜಾಯಿಷಿ ಕೇಳಿದರೆ, ಆ ದಾಖಲೆ ಪತ್ರಗಳೊಂದಿಗೆ, ನೀವು ಹೆಸರು ಬದಲಾಯಿಸಿಕೊಂಡ ಪ್ರಮಾಣಿತ ಘೋಷಣೆಯ ಅಧಿಕೃತ ಪ್ರತಿಯೊಂದನ್ನು, ಲಗತ್ತಿಸಿದರೆ ಸಾಕು. ಇನ್ನುಮುಂದೆ ಪಡೆದುಕೊಳ್ಳುವ ಎಲ್ಲಾ ದಾಖಲೆಗಳನ್ನು ಮಾತ್ರ ನೀವು ಹೊಸ ಹೆಸರಿನಲ್ಲಿ ಪಡೆದುಕೊಳ್ಳಿ. ನಿಮ್ಮ ಹೊಸ ಹೆಸರಿನಲ್ಲಿ ಸಹಿ ಹಾಕುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡ ನಂತರವೇ ಹೆಸರು ಬದಲಾಯಿಸಿಕೊಳ್ಳಿ! ಇಲ್ಲದಿದ್ದರೆ, ನಿಮ್ಮ ಸಹಿಗಳಲ್ಲಿ ವ್ಯತ್ಯಾಸ ಕಂಡುಬಂದು, ನೀವು ತೊಂದರೆಗೆ ಒಳಗಾಗಬಹುದು. ಬ್ಯಾಂಕ್ ಖಾತೆಗಳ ಮಟ್ಟಿಗೆ ಹೇಳುವುದಾದರೆ, ಹಳೆಯ ಹೆಸರಿನ ಖಾತೆಗಳನ್ನು ಮುಚ್ಚಿ, ಹೊಸ ಹೆಸರಿನಲ್ಲಿ ಖಾತೆಗಳನ್ನು ತೆರೆದರೆ ಕಿರಿಕಿರಿ ಇರುವುದಿಲ್ಲ.
ಸರ್ಕಾರಿ ನೌಕರ, ವೃತ್ತಿನಿರತ ವಕೀಲ, ಪ್ರೌಢಶಾಲೆಯ ವಿದ್ಯಾರ್ಥಿ ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಸಾಮಾನ್ಯ ಪೌರನೊಬ್ಬ ಹೆಸರು ಬದಲಾಯಿಸಲು ಯಾವ ಕಾನೂನೂ ಇಲ್ಲ. ಯಾವ ನಿಯಮಗಳೂ ಇಲ್ಲ. ವಿವಿಧ ವರ್ಗಗಳಿಗೆ ಅನ್ವಯವಾಗುವ ಕ್ರಮಗಳು ಹೀಗಿವೆ:
1. ಸಾಮಾನ್ಯ ಪೌರ
ನೀವು ಮಾಡಬೇಕಾದುದು ಇಷ್ಟು. ಇಪ್ಪತ್ತು ರು. ಛಾಪಾ ಕಾಗದವನ್ನು ನಿಮ್ಮ ಹಳೆಯ ಹೆಸರಿನಲ್ಲಿ ತೆಗೆದುಕೊಂಡು ಅದರಲ್ಲಿ ಪ್ರಮಾಣಿತ ಘೋಷಣೆಯನ್ನು ಬರೆದು, ಹಳೆಯ ಮತ್ತು ಹೊಸ ಹೆಸರಿನಲ್ಲಿ ಸಹಿಗಳನ್ನು ಮಾಡಿ, ವಕೀಲರೊಬ್ಬರಿಂದ ಗುರುತಿನ ಸಹಿ ಹಾಕಿಸಿ, ನೋಟರಿಯ ಮುಂದೆ ಪ್ರಮಾಣ ಮಾಡಬೇಕು (ನಿಮ್ಮ ಊರಿನಲ್ಲಿ ನೋಟರಿ ಇಲ್ಲದಿದ್ದರೆ ಮ್ಯಾಜಿಸ್ಟ್ರೇಟರ ಮುಂದೆ ಪ್ರಮಾಣ ಮಾಡಬೇಕು). ಅವರು ಆ ಪತ್ರಕ್ಕೆ ನೊಟೇರಿಯಲ್ ಸ್ಟಾಂಪ್, ಅವರ ಮೊಹರು ಹಾಗೂ ಸಹಿಯನ್ನು ಹಾಕುತ್ತಾರೆ. ಆ ಪತ್ರದ ಹತ್ತು ಹದಿನೈದು ಜೆರಾಕ್ಸ್ ಪ್ರತಿಗಳನ್ನು ಮಾಡಿಸಿ, ಆ ಪತ್ರಗಳೆಲ್ಲವಕ್ಕೂ ಅದೇ ನೋಟರಿಯ ಹತ್ತಿರ (ಅವರು ಸಿಗದಿದ್ದರೆ ಇನ್ನೊಬ್ಬರು ನೋಟರಿಯ ಹತ್ತಿರ) “ನಿಜಪ್ರತಿ’ ಎಂದು ಸಹಿ ಹಾಕಿಸಿಟ್ಟುಕೊಳ್ಳಿ. ಅವಶ್ಯಕತೆ ಬಿದ್ದಾಗ ಈ ನಕಲನ್ನು ಮಾತ್ರ ಕೊಡಿ. ಮೂಲ ಪತ್ರವನ್ನು ಫೈಲ್ ಮಾಡಿ ಇಟ್ಟುಕೊಳ್ಳಿ. ನೀವು ಮೈನರ್ ಆಗಿದ್ದರೆ ನಿಮ್ಮ ಪರವಾಗಿ ನಿಮ್ಮ ತಂದೆ/ ತಾಯಿ/ ಪೋಷಕರು ಹೆಸರು ಬದಲಾವಣೆ ಕುರಿತು ಸ್ಪಷ್ಟನೆ ನೀಡಬೇಕು. -ಎಸ್.ಆರ್. ಗೌತಮ್ (ಕೃಪೆ: ನವ ಕರ್ನಾಟಕ ಪ್ರಕಾಶನ)