Advertisement
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪ್ರಚಾರದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ, ಅವರು ತಮ್ಮ 23 ನಿಮಿಷಗಳ ಭಾಷಣದಲ್ಲಿ ಎಲ್ಲಿಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆ ನಾಮ್‌ಧಾರ್ ಎಂದೇ ಪರೋಕ್ಷವಾಗಿ ತಿವಿದರು.
Related Articles
Advertisement
ಇಂದು ಲಾತೂರ್‌ನಿಂದ ಆರಂಭಿಸಿ ಕರ್ನಾಟಕದ ಚಿತ್ರದುರ್ಗ, ಮೈಸೂರಿಗೆ ಬಂದಿದ್ದೇನೆ. ಎಲ್ಲೆಲ್ಲೂ ಜನರ ಉತ್ಸಾಹ ಅಭೂತಪೂರ್ವವಾಗಿ ಕಂಡುಬರುತ್ತಿದೆ. ನಿಮ್ಮ ಸೇವೆ ಮಾಡುವ ಅವಕಾಶವನ್ನು ಮತ್ತೂಮ್ಮೆ ನಮಗೆ ಕೊಡಿ ಎಂದು ಮನವಿ ಮಾಡಿದರು.
ಮೈಸೂರು ವಿಕಾಸ: ಮೈಸೂರು ಭಾರತದ ಸಮೃದ್ಧ ಸಂಸ್ಕೃತಿಯ ಪ್ರತೀಕ. ನಮ್ಮ ಸರ್ಕಾರ ಮೈಸೂರು -ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮೈಸೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಉತ್ತಮಗೊಂಡು ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಿದ್ದೇವೆ. ಮೈಸೂರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಿದ್ದೇವೆ. ಚೌಕಿದಾರ್‌ನ ಸರ್ಕಾರದ ಈ ಕೆಲಸಕ್ಕೆ ನಿಮ್ಮ ಸಹಮತವಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಸಿಂಹ, ಪ್ರಸಾದ್ ಹೆಸರೇಳಲಿಲ್ಲ: ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹೆಸರು ಪ್ರಸ್ತಾಪಿಸಿದ ಮೋದಿ ಅವರು, ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಚಾಮರಾಜ ನಗರ ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಹೆಸರೇಳದೆ ನಮ್ಮ ಉಮೇದುವಾರರು ಎಂದಷ್ಟೇ ಪ್ರಸ್ತಾಪಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಅನುವಾದ ಬೇಡ: ಮೋದಿಯವರು ಭಾಷಣಕ್ಕೆ ನಿಂತಾಗ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಲು ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್ ಮೈಕ್ ಹಿಡಿದು ಪಕ್ಕಕ್ಕೆ ಬಂದು ನಿಂತರು. ಆಗ ಮೋದಿ, ನನ್ನ ಹಿಂದಿ ಭಾಷಣ ನಿಮಗೆ ಅರ್ಥ ವಾಗುತ್ತದೆಯೇ? ಅನುವಾದ ಬೇಕೆ? ಎಂದು ಪ್ರಶ್ನಿಸಿದರು. ಸಭಿಕರು ಅನುವಾದ ಬೇಡ ಎಂದಿದ್ದರಿಂದ ಮಧುಸೂದನ್ ವಾಪಸ್ ಹೋದರು.
ಕನ್ನಡದಲ್ಲಿ ಭಾಷಣ ಆರಂಭ: ಸಂಜೆ 5.13ಕ್ಕೆ ವೇದಿಕೆಗೆ ಆಗಮಿಸಿದ ಮೋದಿ ಅವರು 5.17ಕ್ಕೆ ಭಾಷಣ ಆರಂಭಿಸಿದರು. ಕನ್ನಡದಲ್ಲಿ ಭಾಷಣ ಆರಂಭಿಸಿ, ಮೈಸೂರು-ಚಾಮರಾಜ ನಗರ-ಮಂಡ್ಯ-ಹಾಸನ ಜನತೆಗೆ ನಿಮ್ಮ ಚೌಕಿದಾರ್ ನರೇಂದ್ರಮೋದಿ ಮಾಡುವ ನಮಸ್ಕಾರಗಳು. ಚಾಮುಂಡೇಶ್ವರಿ ದೇವಿಯ ಈ ನೆಲದಲ್ಲಿ ನಿಂತು ಸರ್ ಎಂ.ವಿಶ್ವೇಶ್ವರಯ್ಯರಂತಹ ನಾಯಕ ಸೇರಿದಂತೆ ಎಲ್ಲರಿಗೆ ನಮಿಸುವೆ. 21ನೇ ಶತಮಾನದಲ್ಲಿ ಭಾರತವನ್ನು ಸದೃಢಗೊಳಿಸಲು ಈ ಚೌಕಿದಾರ್‌ನಿಗೆ ನಿಮ್ಮ ಸಹಕಾರವಿರಲಿ ಎಂದು ಕೋರಿದರು.
ಸುಮಲತಾ ಹೆಸರು ಪ್ರಸ್ತಾಪ: ತಮ್ಮ ಭಾಷಣದಲ್ಲಿ ಸುಮಲತಾ ಅವರ ಹೆಸರು ಪ್ರಸ್ತಾಪಿಸಿದ ಮೋದಿ, ಅಂಬರೀಶ್ ಉತ್ತಮ ನಾಯಕರಾಗಿದ್ದರು. ಅಂಬರೀಶ್ ಮತ್ತು ಸುಮಲತಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸೇವೆ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರನ್ನು ಆಶೀರ್ವದಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು.