ವಾಡಿ: ಒಂದು ದಿನ ಕಠಿಣ ಉಪವಾಸ ಆಚರಿಸುವ ಮೂಲಕ ರಸ್ತೆ ಮೇಲೆಯೇ ಸಾಮೂಹಿಕ ನಮಾಜ್ ಕೈಗೊಂಡ ನೂರಾರು ಜನ ಮುಸ್ಲಿಂ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ದಿನದ ನಾಲ್ಕು ನಮಾಜ್‌ಗಳನ್ನು ರಸ್ತೆ ಮೇಲೆಯೇ ಕೈಗೊಂಡರು. ಒಟ್ಟು 3200 ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿ ಸಿಎಎ ಕಾಯ್ದೆ ವಿರೋಧಿ ಸಿ ಸುಪ್ರಿಂಕೋರ್ಟ್‌ಗೆ ದಾವೆ ದಾಖಲಿಸಿದರು. ಸಂಜೆ ನಡು ಬೀದಿಯಲ್ಲೇ ಸಾಲಾಗಿ ಕುಳಿತು ಹಣ್ಣುಗಳನ್ನು ಸೇವಿಸಿ ಇಫ್ತಿಯಾರ್ ಆಚರಿಸಿದರು.
ಹೀಗೆ ವಿನೂತನ ಪ್ರತಿಭಟನೆ ಕೈಗೊಂಡ ಸ್ಥಳೀಯ ಮುಸ್ಲಿಮರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಪೂರ್ಣಗೊಳಿಸಿದರು. ಈ ವೇಳೆ ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಜಾರಿಗೆ ತರುವ ಮೂಲಕ ಭಾರತೀಯರಲ್ಲಿ ಭಯ ಮೂಡಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಯಾರ ಮತ ಪಡೆದು ಅಧಿಕಾರಕ್ಕೆ ಬಂದಿದೆಯೋ ಅದೇ ಜನರ ಪೌರತ್ವ ಕೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದರು.
ಮುಸ್ಲಿಂ ಸಮಾಜದ ಮುಖಂಡರಾದ ಭಶೀರ ಖುರೇಶಿ, ಶಮಶೀರ ಅಹಮದ್ ಹಾಗೂ ಅಲ್ತಾಫ ಸೌಧಾಗರ ಮಾತನಾಡಿದರು. ಜಾಮಿಯಾ ಮಸೀದಿ ಅಧ್ಯಕ್ಷ ಮುಕ್ಬುಲ್ ಜಾನಿ, ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಶರಣು ನಾಟೀಕಾರ, ಮಹ್ಮದ್ ಗೌಸ್, ರಾಜಾ ಪಟೇಲ, ಪೃಥ್ವಿರಾಜ ಸೂರ್ಯವಂಶಿ, ಅಜೀಜ್ ತೇಲಿ, ಯುನ್ಯೂಸ್ ಪ್ಯಾರೆ, ಮುಕ್ರುಂ ಪಟೇಲ, ಸೈಯ್ಯದ್ ಹುಸೇನ ಬಳವಡಗಿ, ಡಾ| ಮಹೆಬೂಬ ಪಟೇಲ, ಬಾಷಾ ನಾಟೇಕರ, ನವಾಬ ಪಟೇಲ, ಶೇರ್ ಅಲಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.