ಸಾಗರ: ಮಾ. 4, 5 ಮತ್ತು 6ರಂದು ವರದಹಳ್ಳಿಯ ಶ್ರೀಧರ ಯಾಗಶಾಲೆಯಲ್ಲಿ ಶ್ರೀಧರಸ್ವಾಮಿಗಳ ಮೂಲಮಂತ್ರ ‘ನಮಃ ಶಾಂತಾಯ ಹವನ’ಕಾರ್ಯಕ್ರಮ ನಡೆಯಲಿದೆ ಎಂದು ಮಹರ್ಷಿ ಅನವರತ ಪ್ರತಿಷ್ಠಾನದ ಡಾ. ಪ್ರಭಾಕರ್ ಕೆ. ಕಶ್ಯಪ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಃ ಶಾಂತಾಯ 1.08 ಲಕ್ಷ ಹವನ ವಿಶೇಷ ಕಾರ್ಯಕ್ರಮ ಲೋಕಲ್ಯಾಣಾರ್ಥವಾಗಿ ಪ್ರಥಮ ಬಾರಿಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮಾ. 4ರಂದು ಬೆಳಿಗ್ಗೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಯಾಗಶಾಲೆ ಪ್ರವೇಶ ನಡೆಯಲಿದೆ. ಮೂರೂ ದಿನ ಸಂಜೆ 7ಕ್ಕೆ ಶಿರಳಗಿಯ ಸ್ವಾಮಿ ಬ್ರಹ್ಮಾನಂದ ಭಾರತಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
5ರಂದು ಬೆಳಿಗ್ಗೆ ಶ್ರೀಧರ ಮೂಲಮಂತ್ರ ಯಜ್ಞ ಪ್ರಾರಂಭಗೊಳ್ಳಲಿದೆ. ಸಂಜೆ ಶಾಂತಿಪಾಠ, ಅಷ್ಟಾವಧಾನ ಸೇವೆ ನಡೆಯಲಿದ್ದು, ಮೋಕ್ಷಸಾಧನೆಯ ಮಜಲುಗಳು ವಿಷಯ ಕುರಿತು ವಿಶೇಷ ಉಪನ್ಯಾಸ ಇರುತ್ತದೆ. 6ರಂದು ಬೆಳಿಗ್ಗೆ ಮೂಲಮಂತ್ರ ಯಜ್ಞ ಸಂಪತ್ತಿ, ಪೂರ್ಣಾಹುತಿ, ಪಾದುಕಾ ಪೂಜೆ, ಬ್ರಹ್ಮಕಲಶಾಭಿಷೇಕ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಸಂಜೆ ಶಿವಮೊಗ್ಗದ ಗುರುಗುಹ ಸಂಗೀತ ವಿದ್ಯಾಲಯದಿಂದ ಗಾಯನ ಕಾರ್ಯಕ್ರಮ ಮತ್ತು ಡಾ. ಎ.ಜೆ.ಗೋಪಾಲಕೃಷ್ಣ ಕೊಳ್ಳಾಯ ಅವರಿಂದ ವ್ಯಾಖ್ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಲಿಖಿತವಾಗಿ 1.80 ಕೋಟಿ, ವಾಚಕ ಜಪ 10.80 ಲಕ್ಷ ನಡೆಯಲಿದ್ದು, 1.08 ಲಕ್ಷ ಮೂಲಮಂತ್ರ ಹವನ ಕಾರ್ಯ ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿಗಳು ೩ ಸಾವಿರ ಕೆಜಿ ಬೆಲ್ಲವನ್ನು ದ್ರವರೂಪದಲ್ಲಿ ಆಶೀರ್ವಾದ ನೀಡಿದ್ದಾರೆ ಎಂದರು.
ಶ್ರೀಧರ ಸ್ವಾಮಿಗಳ ಪ್ರೇರಣೆಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಶ್ರೀಧರ ಸ್ವಾಮಿಗಳ ಮೂಲಮಂತ್ರ ಇರುವ 5 ಸಾವಿರ ಪುಸ್ತಿಕೆಗಳನ್ನು ಮುದ್ರಿಸಿ ವಿತರಣೆ ಮಾಡಲಾಗಿದ್ದು, ದೇಶವ್ಯಾಪ್ತಿ ಭಕ್ತರು ಶ್ರೀಧರರ ಮೂಲಮಂತ್ರವನ್ನು ಬರೆದು ಕಳುಹಿಸಿದ್ದಾರೆ. ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಜನರಿಂದ ನಾವು ದ್ರವ್ಯ ಸ್ವೀಕರಿಸುತ್ತೇವೆಯೇ ಹಣವನ್ನು ಪಡೆಯುವುದಿಲ್ಲ. ಎಲ್ಲ ಜಾತಿಧರ್ಮದವರು ಶ್ರೀಧರಸ್ವಾಮಿಗಳ ಮೂಲಮಂತ್ರ ನಮಃ ಶಾಂತಾಯ ಹವನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
14 ವರ್ಷಗಳ ಹಿಂದೆ ವರದಪುರಕ್ಕೆ ಆಗಮಿಸಿದ ನಾನು ಮಳೆ ನೀರಿನಲ್ಲಿ ಜಾರುವ, ಅಭಿವೃದ್ಧಿ ಕಂಡಿರದ ದುರ್ಗಾಂಬಾ ದೇವಸ್ಥಾನವನ್ನು ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇಲ್ಲಿಯೇ ಸಹಸ್ರ ಚಂಡಿಕಾ ಹವನ, ರಾಮತಾರಕದಂತಹ ಮೂರು ಹೋಮಗಳು ನಡೆದಿವೆ. ಕಳೆದ ವರ್ಷವೇ ನಡೆಯಬೇಕಿದ್ದ ಈ ಹವನ ಈಗ ನಡೆಯುತ್ತಿದೆ. ಶ್ರೀಧರ ಸ್ವಾಮಿಗಳು ಬಂದು ನೆಲೆಸಿದ ಮೂಲ ತಾಣವಾದ ಇಲ್ಲಿ ಶ್ರೀಧರಾಶ್ರಮದಿಂದ ಮೆರವಣಿಗೆ ಮೂಲಕ ಶ್ರೀಧರರ ಕೆತ್ತನೆಯ ವಿಗ್ರಹವನ್ನು ಇದೇ ವೇಳೆ ಪ್ರತಿಷ್ಠಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ನಾಗಮಂಗಲದ ಕೋದಂಡರಾಮ ದೇವಸ್ಥಾನದ ಅಭಿವೃದ್ಧಿಯ ಕಡೆಗೆ ಗಮನ ಕೊಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗಿರಿಬಾಪಟ್, ಮ.ಸ.ನಂಜುಂಡಸ್ವಾಮಿ ಹಾಜರಿದ್ದರು.