Advertisement
ಇಂತಹದ್ದೊಂದು ರಂಗ ಪ್ರಯೋಗ ಕನ್ನಡ ರಂಗಭೂಮಿಯಲ್ಲಿ ವಿರಳ ಅಥವಾ ಇಲ್ಲವೆಂದರೂ ತಪ್ಪಾಗಲಾರದೇನೋ ಆ ರೀತಿಯ ಅಪೂರ್ವ ಅನುಭೂತಿಯನ್ನು ಕೊಡುವ ನಾಟಕ ದಶಾನನ ಸ್ವಪ್ನ ಸಿದ್ಧಿ. ಹಳೆಗನ್ನಡ ಕಲಿಕೆ ದೂರವಾಗುತ್ತಿರುವ ಈ ಕಾಲ ಘಟ್ಟದಲ್ಲೂ ಅದನ್ನು ನಾಟಕದಲ್ಲಿ ಪ್ರೇಕ್ಷಕರಿಗೆ ಎಲ್ಲೂ ಗೊಂದಲ ಬಾರದಂತೆ ತೆರೆದಿಡುವುದು ಮತ್ತು ಅರ್ಥೈಸುವುದು ನಿಜಕ್ಕೂ ಸವಾಲು. ಈ ಸವಾಲನ್ನು ಗೆದ್ದಿದೆ ಹೆಬ್ರಿ ತಾಲೂಕಿನ ಮುದ್ರಾಡಿಯ “ನಮ ತುಳುವೆರ್ ಕಲಾ ಸಂಘಟನೆ’.
Related Articles
Advertisement
ಇದು ಎಲ್ಲಾ ಕಾಲ, ದೇಶಗಳನ್ನು ಮೀರಿ ಮನುಷ್ಯ ಮನುಷ್ಯತ್ವ, ಮಾನವ ದೈವ, ಮಾನವೀಯ ಸಂಬಂಧಗಳ ವಿಶ್ಲೇಷಣೆಗೆ ತೊಡಗಿಸುವುದರ ಜೊತೆಗೆ ಆಧ್ಯಾತ್ಮದ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಮೊದಲಿಗೊಂದಿಷ್ಟು ಹೊತ್ತು ಪ್ರಾರ್ಥನೆ ನಡೆದಾಗ ಸಹೃದಯರು ಕೇವಲ ಕಣ್ಣರಳಿಸಿ ನೋಡಬೇಕಷ್ಟೇ. ಬಳಿಕ ತೆರೆದುಕೊಳ್ಳುತ್ತದೆ ನಾಟಕದ ಹೂರಣ, ರಾವಣನಾಗಿ ಇಡೀ ನಾಟಕದಲ್ಲಿ ಮನೋಜ್ಞ ಅಭಿನಯವನ್ನು ಹಳಗನ್ನಡ ಮತ್ತು ಹೊಸಗನ್ನಡದ ಶುದ್ಧತೆಯೊಂದಿಗೆ ನಾಟ್ಕ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ನೀಡುತ್ತಾರೆ. ಸುಧೀಂದ್ರ ಮೋಹನರ ವಿಶಿಷ್ಟ ರೂಪಿನ ಲಂಕಾಲಕ್ಷ್ಮಿಯ ಪ್ರವೇಶದೊಂದಿಗೆ ನಾಟಕ ರೋಚಕತೆಯ ಮಜಲಿಗೆ ಬರುತ್ತದೆ. ಮತ್ತಷ್ಟು ಆಸಕ್ತಿಯನ್ನು ಕೆರಳಿಸುತ್ತದೆ. ಕೌಪೀನಧಾರಿ ಮಾ| ತೇಜಸ್ವಿ ಮತ್ತು ಪುಟಾಣಿ ಶ್ಲೋಕ ಕೂಗಲಾಗದೆ ಕೂಗುವ ಅಮ್ಮಾ ಎಂಬ ಶಬ್ದಕ್ಕೆ ಸಹೃದಯ ಪ್ರೇಕ್ಷಕರ ಗಟ್ಟಿ ಚಪ್ಪಾಳೆ ಆನಂದಾತಿಶಯದ ಸಂಕೇತ. ಇದು ಎಲ್ಲಾ ಪ್ರಯೋಗಗಳಲ್ಲೂ ಪುನರಾವರ್ತನೆಯಾಗಿರುವುದು ವಿಶೇಷವೇ ಸರಿ. ಸೀತೆಯ ಪಾತ್ರದ ಪ್ರಜ್ಞಾ ನಾಯಕ್ ತನ್ನ ರೂಪಾತಿಶಯದೊಂದಿಗೆ ಪರಕಾಯ ಪ್ರವೇಶದಂತೆ ನಟಿಸುವುದು ಭರವಸೆಯನ್ನು ಹುಟ್ಟಿಸುವ ನಟನೆ.
ನಾಟಕದ ಬೇರೆ ಬೇರೆ ಹಂತಗಳಲ್ಲಿ ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ, ಆಕಾಶ ಕೋಟ್ಯಾನ್ ಮಿಯ್ನಾರ್, ಸಂದೇಶ್ ಕೋಟ್ಯಾನ್ ಪತ್ತೂಂಜಿಕಟ್ಟೆ, ಶ್ರೀಧರ್ ಕೋಟ್ಯಾನ್ ಬೈಡªಪು, ರಿತೇಶ್ ಪೂಜಾರಿ, ಚಂದನ್ ನಟನಾ ಕೌಶಲದಿಂದ ಪ್ರೇಕ್ಷಕರ ಮನಸ್ಸಿನ ಕದವನ್ನು ತಟ್ಟುತ್ತಾರೆ- ಮುಟ್ಟುತ್ತಾರೆ.
ನಿರ್ದೇಶನದೊಂದಿಗೆ ರಂಗಪಠ್ಯ – ಪರಿಕಲ್ಪನೆ ವಿನ್ಯಾಸಕರಾಗಿ ಮಂಜುನಾಥ ಎಲ್. ಬಡಿಗೇರ್ ಮತ್ತು ಹಿನ್ನೆಲೆ ಗಾಯಕರಾಗಿ ಆಶಿಕ್ ಕಾರ್ಕಳ, ತಬಲದಲ್ಲಿ ಕಾರ್ಕಳದ ಕೆ.ಶರಶ್ಚಂದ್ರ ಉಪಾಧ್ಯಾಯ ರಂಗ ಪರಿಕರದಲ್ಲಿ ಚಂದ್ರನಾಥ ಬಜಗೋಳಿ ತೊಡಗಿಸಿಕೊಂಡಿದ್ದಾರೆ.
ಲೌಕಿಕ ಚರಿತ್ರೆಯಲ್ಲಿ ಅಲೌಕಿಕವಾದ ಸತ್ಯದರ್ಶನವನ್ನು ತೆರೆದಿಡಬಲ್ಲ ಈ ವಿಶೇಷ ಪರಿಕಲ್ಪನೆಯ “ದಶಾನನ ಸ್ವಪ್ನ ಸಿದ್ಧಿ’ ತನ್ನೆಲ್ಲಾ ಪ್ರಯೋಗಗಳಲ್ಲಿ ಸಹೃದಯರನ್ನು ಚಿಂತನೆಗೆ ಹಚ್ಚುವಂತೆ ಮಾಡಿದೆ. ಇನ್ನೊಂದು ಪ್ರಯೋಗಕ್ಕೆ ರಜತ ಸಂಭ್ರಮವನ್ನು ಕಾಣಲಿದೆ. ಪಿ.ವಿ. ಆನಂದ್