Advertisement

ಇಂದು ಗಣಿಯ ಬಿ.ಕಾಂ. ಫಲಿತಾಂಶ

09:47 AM Nov 16, 2019 | mahesh |

“ಇದು 101% ಇಷ್ಟ ಆಗುತ್ತೆ…’
-ಹೀಗೆ ತುಂಬಾ ವಿಶ್ವಾಸದಿಂದ ಹೇಳಿದ್ದು ಅಭಿಷೇಕ್‌ ಶೆಟ್ಟಿ. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ನಮ್‌ ಗಣಿ ಬಿ.ಕಾಂ.ಪಾಸ್‌’ ಬಗ್ಗೆ. ಹೌದು, ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಹೇಳಲೆಂದೇ ಪತ್ರಕರ್ತರನ್ನು ಆಹ್ವಾನಿಸಿದ್ದರು ನಿರ್ಮಾಪಕ ನಾಗೇಶ್‌ಕುಮಾರ್‌. ಮೊದಲು ಮಾತು ಶುರುಮಾಡಿದ್ದು, ನಿರ್ದೇಶಕ ಕಮ್‌ ಹೀರೋ ಅಭಿಷೇಕ್‌ ಶೆಟ್ಟಿ.

Advertisement

“ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾ ಇದು. ಹಾಗಾಗಿ, ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ. ಒಳ್ಳೆಯ ಸಿನಿಮಾವನ್ನು ಕನ್ನಡ ಪ್ರೇಕ್ಷಕ ಎಂದೂ ಕೈ ಬಿಟ್ಟಿಲ್ಲ ಎಂಬ ಆತ್ಮವಿಶ್ವಾಸ ನನಗಿದೆ. ಇದು ಕೇವಲ ಚಿತ್ರವಲ್ಲ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಜೀವನವಿದೆ. ತುಂಬ ಶ್ರಮಪಟ್ಟು ಚಿತ್ರ ಮಾಡಿದ್ದೇವೆ. ಇಲ್ಲಿ ನಾನು ಹೀರೋ ಅಲ್ಲ, ಬರೀ ಪಾತ್ರವಷ್ಟೇ. ಗಣಿ ಎಂಬ ಪಾತ್ರ ಸುತ್ತ ಸುತ್ತುವ ಕಥೆ ಇಲ್ಲಿದೆ. ಎರಡು ತಿಂಗಳ ಕಾಲ ಆ ಪಾತ್ರಕ್ಕಾಗಿ ತಯಾರಿ ನಡೆಸಿ, ಕ್ಯಾಮೆರಾ ಮುಂದೆ ನಿಂತಿದ್ದೇನೆ.

ಒಬ್ಬ ಸೋಮಾರಿ ಹುಡುಗನ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಸಾಕಷ್ಟು ವಿಷಯವಿದೆ. ಹಾಸ್ಯವೂ ಮೇಳೈಸಿದೆ. ಒಂದೊಳ್ಳೆಯ ಸಂದೇಶ ಇಲ್ಲಿ ಅಡಗಿದೆ’ ಎಂಬುದು ಅಭಿಷೇಕ್‌ ಶೆಟ್ಟಿ ಮಾತು.
ನಿರ್ಮಾಪಕ ನಾಗೇಶ್‌ ಕುಮಾರ್‌ ಅವರಿಗೆ ಇದು ಎರಡನೇ ಸಿನಿಮಾ. ಹಿಂದೆ “ಸೆಕೆಂಡ್‌ ಹಾಫ್’ ಚಿತ್ರ ಮಾಡಿದ್ದರು. ಆ ಬಳಿಕ ಸಿನಿಮಾ ಸಹವಾಸವೇ ಬೇಡ ಅಂತ ನಿರ್ಧರಿಸಿದ್ದರಂತೆ. “ಈ ಚಿತ್ರ ಆಗೋಕೆ ಕಾರಣ, ನನ್ನ ತಂಗಿ ಮಗಳು ಅಂತ’ ಮಾತಿಗಿಳಿದ ನಾಗೇಶ್‌ಕುಮಾರ್‌, “ನಿರ್ದೇಶಕ ಕಮ್‌ ಹೀರೋ ಅಭಿಷೇಕ್‌ ಶೆಟ್ಟಿ, ನನ್ನ ತಂಗಿ ಮಗಳು ಇಬ್ಬರೂ ಕಾಲೇಜ್‌ ಫ್ರೆಂಡ್ಸ್‌. ಹಾಗಾಗಿ, ಪ್ರತಿ ದಿನ ನನ್ನ ಬಳಿ ಬಂದು ಒಮ್ಮೆ ಅಭಿಷೇಕ್‌ನ ಮೀಟ್‌ ಮಾಡಿ ಮಾವ ಅನ್ನುತ್ತಿದ್ದಳು. ನನಗೋ ಸಿನಿಮಾ ಮಾಡೋದೇ ಬೇಡ ಎಂಬ ನಿರ್ಧಾರ. ಎರಡು ತಿಂಗಳು ಹೀಗೆ ಸತಾಯಿಸಿದ್ದಳು. ಕೊನೆಗೆ ಅವಳೇ, ಹೋಗಲಿ, ಸುಮ್ಮನೆ ಒಮ್ಮೆ ಮೀಟ್‌ ಮಾಡಿ ಕಳಿಸಿಬಿಡಿ ಮಾವ ಅಂದಳು. ಹಾಗೆ ಮಾಡೋಣ ಅಂತ ಅಭಿಷೇಕ್‌ ಅವರನ್ನು ಕರೆದು ಕಥೆ ಕೇಳಿದೆ. ಇಂಟ್ರೆಸ್ಟ್‌ ಎನಿಸಿತು. ಅಂದಿನಿಂದ ನಿತ್ಯವೂ ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌ ಮೆಸೇಜ್‌ ಕಳಿಸೋಕೆ ಶುರು ಮಾಡಿದ. ನಾನೂ ರಿಪ್ಲೆ ಮಾಡುತ್ತಿದ್ದೆ. ಕೊನೆಗೆ ಕಥೆಯನ್ನು ಸಾಕಷ್ಟು ಬಾರಿ ಕರೆದು ಕೇಳಿದ್ದೆ.

ಒಮ್ಮೆ, “ಸರ್‌, ಸಿನಿಮಾ ಕಥೆ ಕೇಳ್ಳೋದೇ ಆಯ್ತು. ಮಾಡ್ತೀರ ಅಥವಾ ಇಲ್ಲವೋ’ ಅಂದುಬಿಟ್ಟ. ನಾನು, ಅಕೌಂಟ್‌ ನಂಬರ್‌ ಕಳಿಸಪ್ಪ ಅಂತ ಹೇಳಿ 25 ಸಾವಿರ ಹಾಕಿ ಕೆಲಸ ಶುರು ಮಾಡು ಅಂದೆ. ಈಗ ಚಿತ್ರ ರೆಡಿಯಾಗಿ ಬಿಡುಗಡೆಯಾಗುತ್ತಿದೆ. ನಾನು ಮೊದಲ ಚಿತ್ರದಲ್ಲಿ ಎಲ್ಲಿ ಎಡವಿದೆ ಎಂಬುದನ್ನು ಅರಿತು ಚಿತ್ರ ಮಾಡಿದ್ದೇನೆ. ಒಳ್ಳೆಯ ತಂಡ ಜೊತೆಗಿದ್ದರಿಂದ ಸಿನಿಮಾ ಚೆನ್ನಾಗಿದೆ. ನಾವು ಮೊದಲೇ ದಿನಾಂಕ ಘೋಷಿಸಿದ್ದೆವು. ಆದರೆ, ಶಿವರಾಜ ಕುಮಾರ್‌ ಚಿತ್ರವೂ ಬಿಡುಗಡೆಯಾಗುತ್ತಿದೆ. ಆ ಚಿತ್ರ 100 ದಿನ ಕಾಣಲಿ. ನಮ್ಮ ಚಿತ್ರವನ್ನು ಎಲ್ಲರೂ ನೋಡಲಿ’ ಎಂದರು ನಾಗೇಶ್‌ ಕುಮಾರ್‌.
ಐಶಾನಿ ಶೆಟ್ಟಿ ಅವರಿಗೆ ಇಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ಎರಡು ಶೇಡ್‌ ಇಲ್ಲಿದ್ದು, ಒಂದು ಸ್ಕೂಲ್‌ ಹುಡುಗಿ ಪಾತ್ರವಾದರೆ, ಇನ್ನೊಂದು ಯೌವ್ವನದ ಪಾತ್ರವಂತೆ. ಇನ್ನು, ರಚನಾ ಎಂಬ ಮತ್ತೂಬ್ಬ ನಟಿ ಶ್ರುತಿ ಎಂಬ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ವಿಜೇತ್‌ ಸಂಕಲನ ಮಾಡಿದರೆ, ರಿತ್ವಿಕ್‌ ಮುರಳೀಧರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next