Advertisement

NALWADI Krishnaraja Wadiyar: ನಾಲ್ವಡಿ ದೊರೆಯನ್ನು ನಾರಾಯಣನೂ ಮೆಚ್ಚಿದ!

11:53 AM Aug 27, 2023 | Team Udayavani |

ಮೊನ್ನೆ ಗೆಳೆಯ ಜಯರಾಜ್‌ ಅಣ್ಣ ಇಲ್ನೋಡಿ, ಮಡೇನೂರು ಡ್ಯಾಂ.. ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಗಿ ಈಗ ಗೋಚರವಾಗ್ತಿದೆ. ಇದರ ಬಗ್ಗೆ ಏನಾದರೂ ಬರೆಯಬಹುದಾ? ಅಂತ ಕೇಳಿದ. ಕುತೂಹಲದಿಂದಲೇ ಇದರ ಕುರಿತು ಮಾಹಿತಿ ಕಲೆ ಹಾಕಲು ತೊಡಗಿದಾಗ ಅದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕನಸಿನ ಕೂಸು ಎಂದು ಗೊತ್ತಾಯಿತು. ಮೈಸೂರಿನ ಅರಸರು ಶಿವಮೊಗ್ಗ ಸೀಮೆಯಲ್ಲೂ ಅಣೆಕಟ್ಟೆ ನಿರ್ಮಿಸಿದರು ಅನ್ನುವ ವಿಷಯವೇ ಹೆಚ್ಚಿನ ಆಸಕ್ತಿ ಮೂಡಿಸಿತು. ಈ ಜಲಾಶಯವನ್ನು ಒಮ್ಮೆ ನೋಡಿ ಬರುವ ಉದ್ದೇಶದಿಂದ ಗೆಳೆಯರಾದ ಜಯರಾಜ್‌ ಮತ್ತು ನಾಸಿರ್‌ ಜೊತೆ ಹೊರಟೆ.

Advertisement

ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ ಸಿಗಂದೂರಿಗೆ ತೆರಳುವ ಹೊಳೆಬಾಗಿಲಿನಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿದೆ ಮಡೆನೂರು. ಈ ಊರಿಗೆ ಮೊದಲ ಸಂಪರ್ಕ ಸೇತುವಾಗಿ, ಶರಾವತಿ ವಿದ್ಯುದಾಗಾರದ ಮೊದಲ ಅಣೆಕಟ್ಟಾಗಿ ಇಲ್ಲಿ ಹಿರೇಭಾಸ್ಕರ ಡ್ಯಾಂ (ಇದು ಮಡೆನೂರು ಡ್ಯಾಂ ನ ಮತ್ತೂಂದು ಹೆಸರು) ನಿರ್ಮಾಣ ಮಾಡಲಾಗಿತ್ತು. 1939ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಜೋಗದಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು.

ಈ ಡ್ಯಾಮ್‌ ನಿರ್ಮಾಣಕ್ಕೆ ಸುಣ್ಣ, ಬೆಲ್ಲ ಹಾಗೂ ಇಟ್ಟಿಗೆ ಚೂರುಗಳ ಮಿಶ್ರಣವಾದ ಸುರ್ಕಿ ಗಾರೆಯನ್ನು ಬಳಸಲಾಗಿದೆ. ಆ ಮಣ್ಣಿನ ಗಾರೆ ಇಂದಿಗೂ ಗಟ್ಟಿಮುಟ್ಟಾಗಿ ಇದೆ. ಗುಮ್ಮಟದಂತೆ ಕಾಣುವ ಸೈಫ‌ನ್‌ಗಳನ್ನ ನಿರ್ಮಿಸಿ ಸ್ವಯಂಚಾಲಿತವಾಗಿ ನೀರು ಹೊರಹಾಕುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಬಳಸಿ ಸುಮಾರು 120 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿತ್ತು. ಈ ಜಲಾಶಯ, ನಿರ್ಮಾಣಗೊಂಡ ನಂತರದ 16 ವರ್ಷದಲ್ಲಿ ಮುಳುಗಿ ಹೋಗುವಂತಾದದ್ದು ವಿಪರ್ಯಾಸ. 1956 ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ರಾಜ್ಯದಲ್ಲಿ ವಿದ್ಯುತ್‌ ಕೊರತೆ ತೀವ್ರವಾಯಿತು. ಆಗ ಸರ್ಕಾರ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ನಿರ್ಧರಿಸಿದ್ದರಿಂದ ಲಿಂಗನಮಕ್ಕಿಯಲ್ಲಿ ಹೊಸ ಆಣೆಕಟ್ಟು ಕಟ್ಟುವ ಪ್ಲ್ರಾನ್‌ ತಯಾರಾಯಿತು. ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣವಾದಾಗ ಹಿರೇಭಾಸ್ಕರ ಡ್ಯಾಮ್‌ ಅದರಲ್ಲಿ ಮುಳುಗಡೆಯಾಯಿತು! ಈಗ ಶರಾವತಿಯ ಒಡಲು ಬರಿದಾದಾಗ ಮಾತ್ರ ಅಲ್ಲಿ ಅಸ್ಥಿಪಂಜರದಂತೆ ಇರುವ ಮಡೇನೂರು ಡ್ಯಾಂ ಗೋಚರವಾಗುತ್ತದೆ.

ಕನ್ನಂಬಾಡಿ ಕಟ್ಟೆ: 

 ಎಲ್ಲಿದೆ?: ಕೆಆರ್‌ಎಸ್‌, ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ.
 ಉಪಯೋಗ: ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯಲು
ಮತ್ತು ಕೃಷಿ ಚಟುವಟಿಕೆಗೆ ನೀರು ಸಿಗುವುದು ಇಲ್ಲಿಂದಲೇ.

Advertisement

ಮೈಸೂರಿನ ಅರಸರ ಕುರಿತು ಹೆಚ್ಚು ಮಾಹಿತಿ ಹೊಂದಿರುವ ಪ್ರೊಫೆಸರ್‌ ನಂಜರಾಜ ಅರಸು ಅವರ – “ನಾನು ಕನ್ನಂಬಾಡಿ ಕಟ್ಟೆ’ ಕೃತಿಯಲ್ಲಿ ಒಂದು ಪ್ರಸಂಗ ಹೀಗಿದೆ:

ಒಮ್ಮೆ ನಾಲ್ವಡಿಯವರು ವೇಷ ಮರೆಸಿಕೊಂಡು ಮಂಡ್ಯ ಸೀಮೆಯ ವೀಕ್ಷಣೆಗೆ ಕುದುರೆ ಸವಾರಿ ಹೊರಟಿದ್ದರು. ಹಳ್ಳಿಗಳಲ್ಲಿ ಜನ ಹೇಗಿದ್ದಾರೆ, ಅವರ ಬದುಕು, ಬವಣೆ ಏನು? ಅವರ ಕೃಷಿ ಬದುಕು ಹೇಗಿದೆ? ಎಂಬುದನ್ನು ಒಬ್ಬ ರಾಜನಾಗಿ ಹೋಗಿ ನೋಡುವುದಕ್ಕಿಂತ, ವೇಷ ಮರೆಸಿಕೊಂಡು ಹೋದಾಗ ನಿಜಸ್ಥಿತಿ ಅರಿಯಬಹುದು ಎಂಬುದು ಅವರ ನಿಲುವಾಗಿತ್ತು. ಆಗ ಮಹಾರಾಜರಿಗೆ ಕಂಡದ್ದು- ಮರದ ನೆರಳೇ ಇಲ್ಲದ ಹೊಲ, ಒಬ್ಬ ರೈತ ಅದನ್ನು ಉಳುತ್ತಿದ್ದಾನೆ. ಮಂಡಿಯವರೆಗೆ ತುಂಡು ಪಂಚೆ, ಅಂಗಿ ಇಲ್ಲ, ಬರೀ ಮೈ! ಎಣಿಸಲು ಆಗುವಷ್ಟು ಮೂಳೆಗಳು ಕಾಣಿಸುತ್ತಿದ್ದವು!

ಒಡೆಯರು ದೂರದಲ್ಲೇ ನಿಂತು ನೋಡಿದರು. ಕುದುರೆಯನ್ನ ಮರಕ್ಕೆ ಕಟ್ಟಿ ರೈತನ ಬಳಿ ಬಂದರು. ಅಷ್ಟೊತ್ತಿಗೆ ಹೆಂಗಸೊಬ್ಬಳು ಊಟದ ಕುಕ್ಕೆ ಹೊತ್ತು ಬಂದಳು. ರಾಜರು ರೈತನೊಂದಿಗೆ ಮಾತು ಶುರು ಮಾಡಿದರು. ಬೆಂಗಾಡು, ಬಿಸಿಲು, ಬೆವರು.. ರೈತ ಏನು ತಾನೇ ಹೇಳಬಲ್ಲ? “ನೀವ್ಯಾರು ಸ್ವಾಮಿ?’- ಎಂದ. ರಾಜರು – “ಹೀಗೇ ಒಬ್ಬ ದಾರಿಹೋಕ, ಹೋಗ್ತಾ ಇದ್ನಲ್ಲ… ನಿಮ್ಮನ್ನ ಕಂಡೆ..ನಿಮ್ಮ ಜೊತೆ ಮಾತಾಡೋಣ ಅಂತ ಬಂದೆ’ ಅಂದರು.

ಆಗ ರೈತ ಮತ್ತು ಹೆಣ್ಣು ಮಗಳು ಒಡೆಯರ ಹತ್ರ ತಮ್ಮ ಕಷ್ಟ ಹಂಚಿಕೊಂಡಿದ್ದು ಹೀಗೆ: “ಮಾರಾಜ್ರು ಮೈಸೂರು ಅರಮನೇಲಿ ತಂಪಾಗಿ ದಿಮ್ರಂಗ ಅಂತಾ ಕುಂತಿರ್ತಾರೆ. ನಂ ಕಷ್ಟ ಅವರ್ಗೆಲ್ಲಿ ಅರ್ಥ ಆಗುತ್ತೆ? ಮಳೆ ಬಂದರೆ ಉಂಟು, ಇಲ್ಲಾಂದ್ರೆ ಇಲ್ಲ. ಆ ಕಾವೇರಿ ಅದೆಲ್ಲೋ ಹರಿತಾಳೆ, ಅದ್ಕೊಂದು ಕಟ್ಟೇನೊ, ನಾಲೇನೋ ಏನೋ ಒಂದು ಮಾಡಿ ನಮ್ಮ ಹೊಲಕ್ಕೆ ಒಂದಷ್ಟು ನೀರಾದ್ರೂ ಹರಿಸಿದ್ರೆ… ನಾವು ಹೆಂಗೊ ಬದುಕ್ಬುಹುದು.. ಅಲ್ವಾ ಸ್ವಾಮಿ? ನಮ್ಮಪ್ಪ.. ಬಯ್ಕೋಬ್ಯಾಡ ಸ್ವಾಮಿ.. ನಾನು ಹಿಂಗಂದೆ ಅಂತ… ನಂ ಹೊಟ್ಟೆ ಸಂಕಟ ಹಂಗನ್ನಿಸ್ತದೆ… ನಿಮಗೆ ಇಷ್ಟವಾದ್ಹೋ ಇಲ್ವೋ ಗೊತ್ತಿಲ್ಲ.. ಈ ಮುದ್ದೆ ನಾಲ್ಕು ಗುಳುಕು ನುಂಗಿ… ತಂಬ್ಗೇಲಿ ನೀರದೆ..ಕುಡೀರಂತೆ…’

ರೈತ ನೀಡಿದ ಅನ್ನ ಹೊಟ್ಟೆ ಸೇರುವ ಮುನ್ನವೇ, ಅವನಾಡಿದ್ದ ಮಾತುಗಳು ಮಹಾರಾಜರ ಎದೆಗಿಳಿದು, ಕಣ್ಣು ತೆರೆಸಿದ್ದವು. ಅರಮನೆಗೆ ಬಂದವರು ಮಾಡಿದ ಮೊದಲ ಕೆಲಸ- ಕನ್ನಂಬಾಡಿ ಕಟ್ಟೆ ನಿರ್ಮಾಣದ ಕುರಿತು ಚರ್ಚಿಸಿದ್ದು. ಆನಂತರ ನಡೆದದ್ದು ಇತಿಹಾಸ.

ಸುರಂಗ ಕೊರೆದು ನೀರು ಹರಿಸಿದರು!:

ನಾಲ್ವಡಿಯವರ ಕಾಲದಲ್ಲಿ ನಡೆದ ನೀರಾವರಿ ಯೋಜನೆಗಳೆಲ್ಲಾ ವಿಶಿಷ್ಟವಾದುದು ಹುಲಿಕೆರೆ ಸುರಂಗ ನಿರ್ಮಾಣದ ಕಾರ್ಯ. ಈ ಸುರಂಗ, ಇಂದಿನ ಅತ್ಯಾಧುನಿಕ ತಂತ್ರಜ್ಞಾನಕ್ಕೂ ಸವಾಲಾಗುವಂಥ ಗುಣಮಟ್ಟ ಹೊಂದಿದೆ. ಈ ಸುರಂಗ ನಿರ್ಮಾಣ ಕಾರ್ಯದಲ್ಲಿ ರಾಜರ ಬೆನ್ನಿಗಿದ್ದ ದಿವಾನರು, ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಶ್ರಮ ದೊಡ್ಡದು. 15 ಅಡಿ ಅಗಲ, 20 ಅಡಿ ಎತ್ತರ ಮತ್ತು ಕಮಾನಿನ ಮೇಲ್ಛಾವಣಿ ಹೊಂದಿರುವ ಈ ಸುರಂಗವನ್ನು 3 ಕಿ. ಮೀ. ದೂರದವರೆಗೆ ಭೂಮಿಯ ಒಳಗೆ ಬಂಡೆಯನ್ನ ಕೊರೆದು ನಿರ್ಮಿಸಲಾಗಿದೆ. ಈ ಸುರಂಗವು ವಿಶ್ವೇಶ್ವರಯ್ಯ ಕಾಲುವೆಯ ಭಾಗವಾಗಿದೆ.

ತಾಯಿ ಕರುಳು  ಮಗನೂ ಮಿಗಿಲು!:

ವಾಣಿವಿಲಾಸ ಸಾಗರ, ಹಿರಿಯೂರು

ಎಲ್ಲಿದೆ?: ಹಿರಿಯೂರಿನ ಸಮೀಪ, ಚಿತ್ರದುರ್ಗ ಜಿಲ್ಲೆ

ಉಪಯೋಗ: ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಿಗೆ ನೀರು ಒದಗಿಸಲಾಗುತ್ತದೆ.

1894ರಲ್ಲಿ ಚಾಮರಾಜೇಂದ್ರ ಒಡೆಯರ್‌, ಕೋಲ್ಕತ್ತಾ ಪ್ರವಾಸ ಹೋಗಿದ್ದಾಗ ಡಿಪ್ತೀರಿಯಾ ಕಾಯಿಲೆಗೆ ತುತ್ತಾಗಿ ನಿಧನರಾದರು. ಆಗ ನಾಲ್ವಡಿಯವರು ಬರೀ ಹತ್ತು ವರ್ಷದ ಬಾಲಕ. ಪಟ್ಟಾಭಿಷೇಕವಾದರೂ, 18 ತುಂಬುವವರೆಗೆ ಆಡಳಿತ ನಡೆಸುವ ಹಾಗಿರಲಿಲ್ಲ. ಹಾಗಾಗಿ ನಾಲ್ವಡಿಯವರ ತಾಯಿ ವಾಣಿವಿಲಾಸ ಮಹಾರಾಣಿಯವರೇ ಎಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ಆಳ್ವಿಕೆ ನಡೆಸುತ್ತಾರೆ. 1898 ರಲ್ಲಿ ಚಿತ್ರದುರ್ಗದ ವೇದಾವತಿ ನದಿಗೆ ಮಾರಿಕಣಿವೆ ಎಂಬಲ್ಲಿ ಅಣೆಕಟ್ಟು ಕಟ್ಟಲು ಆರಂಭಿಸುತ್ತಾರೆ. ಶಿಲಾನ್ಯಾಸ ಮಾಡುವಾಗ “ಕೃಷ್ಣರಾಜೇಂದ್ರ ಸಮುದ್ರ’ ಎಂದು ಹೆಸರಿಡುತ್ತಾರೆ. 1907ರಲ್ಲಿ ಜಲಾಶಯ ನಿರ್ಮಾಣ ಕಾರ್ಯ ಮುಗಿದು ಲೋಕಾರ್ಪಣೆಯಾಗುವಾಗ ನಾಲ್ವಡಿಯವರು ಅಧಿಕಾರಕ್ಕೆ ಬಂದಿದ್ದರು. ಜಲಾಶಯ ನಿರ್ಮಾಣದಲ್ಲಿ ತಮ್ಮ ತಾಯಿ ತೊಡಗಿಸಿಕೊಂಡಿದ್ದ ರೀತಿಯನ್ನು ಪ್ರತ್ಯಕ್ಷ ಕಂಡಿದ್ದ ಮಹಾರಾಜರು, ಅಣೆಕಟ್ಟೆಗೆ ತಮ್ಮ ಹೆಸರಿನ ಬದಲು ಅಮ್ಮನ ಹೆಸರನ್ನೇ ಇಡಲು ನಿರ್ಧರಿಸಿದರು. ಪರಿಣಾಮ, ನೂತನ ಜಲಾಶಯದ ಹೆಸರು “ವಾಣಿವಿಲಾಸ ಸಾಗರ’ ಎಂದಾಯಿತು.

ಮಾರ್ಕೋನಹಳ್ಳಿ ಆಣೆಕಟ್ಟು:

  • ಎಲ್ಲಿದೆ?: ನಾಗಮಂಗಲ-ಕುಣಿಗಲ್‌ ಸಮೀಪ
  • ಉಪಯೋಗ: ಕುಣಿಗಲ್, ನಾಗಮಂಗಲ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ

ಶಿಂಷಾ, ಕಾವೇರಿ ನದಿಯ ಉಪನದಿ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದಲ್ಲಿ ಹುಟ್ಟುವ ಈ ನದಿ 221 ಕಿ.ಮೀ. ದೂರ ಕ್ರಮಿಸಿ ಕಾವೇರಿ ನದಿಯನ್ನು ಸೇರುತ್ತದೆ. ಮಂಡ್ಯ ಜಿಲ್ಲೆ ನಾಗಮಂಗಲ ಮತ್ತು ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿಗೆ ಸಮಾನ ದೂರದಲ್ಲಿರುವ ಮಾರ್ಕೋನಹಳ್ಳಿಯಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿದೆ. ಇದಕ್ಕೆ ಮಾರ್ಕೋನಹಳ್ಳಿ ಡ್ಯಾಮ್‌ ಎಂದೇ ಹೆಸರು. ಈ ಅಣೆಕಟ್ಟೆ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌. ಈ ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಹೊರಹಾಕಲು ಎರಡು ಸ್ವಯಂಚಾಲಿತ ಬಾಗಿಲುಗಳ ವ್ಯವಸ್ಥೆ ಮಾಡಲಾಗಿದೆ. ನೀರು ಗರಿಷ್ಠ ಮಟ್ಟ ಮುಟ್ಟಿದಾಗ ಸ್ವಯಂ ಚಾಲಿತ ಬಾಗಿಲುಗಳ ಮೂಲಕ ಹೊರಬರುವಂತೆ ಮಾಡುವುದು ಇದರ ವಿಶೇಷ.

-ಗಾನಾ ಸುಮಾ ಪಟ್ಟಸೋಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next