Advertisement

ನಾಲ್ವಡಿ ಒಡೆಯರ್‌ ದೀನ, ದಲಿತರ ಆಶಾಕಿರಣ: ಡಾ.ತಿಮ್ಮಯ್ಯ

06:31 PM Jun 23, 2022 | Team Udayavani |

ಮೈಸೂರು: ದೀನ, ದಲಿತರ ಹಾಗೂ ಹಿಂದುಳಿದವರ ಆಶಾಕಿರಣವಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನವನ್ನು ನಾಡಹಬ್ಬವಾಗಿ ಸರ್ಕಾರವು ಆಚರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಒತ್ತಾಯಿಸಿದರು.

Advertisement

ನಗರದ ಎಂಜಿನಿಯರ್ ಸಂಸ್ಥೆಯ ಸಭಾಂಗಣದಲ್ಲಿ ಅನ್ವೇಷಣಾ ಸೇವಾಟ್ರಸ್ಟ್‌ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಜಗನ್ನಾಥ ಶೆಟ್ಟಿ ರಚನೆಯ “ಕರ್ನಾಟಕ ಧ್ರುವತಾರೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯದ ಸಾಧನೆಗೆ ಅಡಿಪಾಯ: ನಾಲ್ವಡಿ ಕೃಷ್ಣ ರಾಜ ಒಡೆಯರ್‌, ಡಿ.ದೇವರಾಜ ಅರಸು ರಾಜ್ಯದ ಜನರಿಗೆ ದನಿಯಾದರು. ದಲಿತರು- ಹಿಂದುಳಿ ದವರ ಏಳಿಗೆಗೆ ಶ್ರಮಿಸಿದರು. ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಇಬ್ಬರೂ ನಿರಂತರ ದುಡಿದರು. ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಸಾಧನೆಗೆ ಅಡಿಪಾಯ ಹಾಕಿಕೊಟ್ಟರು ಎಂದು ಅಭಿಪ್ರಾಯ ಪಟ್ಟರು.

ನೊಂದವರಿಗೆ ಮಿಡಿದ ಒಡೆಯರ್‌: ದೇವರಾಜ ಅರಸು ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೊಳಿಸಿದ್ದಲ್ಲದೆ, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೊಳಿಸಿ ನೊಂದವರಿಗೆ ಮಿಡಿದರು. ಈ ನೆಲದ ಕಾನೂನುಗಳು ರಾಷ್ಟ್ರದಲ್ಲೂ ಜಾರಿಗೊಳ್ಳಲುಮೇಲ್ಪಂಕ್ತಿ ಹಾಕಿಕೊಟ್ಟರು ಎಂದರು.

ಅಧಿವೇಶನದಲ್ಲಿ ಪ್ರಸ್ತಾವನೆ: ಮೈಸೂರು ನಗರದಲ್ಲಿ ಅರಸು ಪ್ರತಿಮೆ ಸ್ಥಾಪಿಸುವ ಸಂಬಂಧ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು. ನಗರದ ಮುಖ್ಯಭಾಗದಲ್ಲಿ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಡಿ.ದೇವರಾಜ ಅರಸು ಅವರ ಕೊಡುಗೆಗಳನ್ನು ಸ್ಮರಿಸಿದರು.

Advertisement

ಇದೇ ವೇಳೆ ಜೆಎಸ್‌ಎಸ್‌ ಮಹಾ ವಿದ್ಯಾಪೀಠ ಕಾಲೇಜು ಶಿಕ್ಷಣ ಮತ್ತು ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಎಸ್‌ವಿಐಇ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಪ್ರಭಾಕರಶೆಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವಿಶ್ರಾಂತ ಜಿಲ್ಲಾ ವ್ಯವಸ್ಥಾಪಕರು ಜಯದೇವರಾಜೇ ಅರಸ್‌, ಉದ್ಯಮಿ ಕೊಳ್ಕಬೈಲ್‌ ಗಣೇಶ ನಾರಾಯಣ್‌ ಹೆಗ್ಡೆ, ಕಲಾವಿದೆ ಡಾ.ವಿ.ಮಾಲಿನಿ, ಎಲ್‌ಐಇಸಿ ಮಖ್ಯ ಸಂಘಟಕ ಎಸ್‌.ಎನ್‌.ಸತ್ಯಪ್ರಕಾಶ್‌ ಅರಸ್‌ ಅವರಿಗೆ “ಧ್ವನಿ
ಕೊಟ್ಟ ಧಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃತಿಯ ಲೇಖಕ ಜಗನ್ನಾಥ ಶೆಟ್ಟಿ, ಅಖಿಲ ಕರ್ನಾಟಕ ಕರಾವಳಿ ಒಕ್ಕೂಟದ ಅಧ್ಯಕ್ಷ ಡಾ.ಎಸ್‌. ಶ್ರೀನಿವಾಸ ಶೆಟ್ಟಿ, ತವರು ಅರಸು ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್‌, ಅನ್ವೇಷಣಾ ಟ್ರಸ್ಟ್‌ ಅಧ್ಯಕ್ಷ ಅಮರ್‌ನಾಥರಾಜೇ ಅರಸ್‌, ಅರಸು ಸಂಘದ ಅಧ್ಯಕ್ಷ ಎಚ್‌. ಎಂ.ಟಿ.ಲಿಂಗರಾಜೇ ಅರಸ್‌, ಡಾ.ಎಂ.ಜಿ.ಆರ್‌. ಅರಸ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next