Advertisement

Nalvadi Krishna Raja Wadiyar: ಧರೆ ಮೆಚ್ಚಿದ ದೊರೆ; ನಾಲ್ವಡಿ ಎಂಬ ಕರುಣೆಯ ಕಡಲು

01:03 PM Oct 15, 2023 | Team Udayavani |

ಮೈಸೂರು ಅಂದಾಕ್ಷಣ ಅರಮನೆಯ ಜೊತೆಜೊತೆಗೇ ನೆನಪಾಗುವವರು ಅಲ್ಲಿನ ದೊರೆಗಳು. ಅದರಲ್ಲೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಮರೆಯಲು ಸಾಧ್ಯವೇ ಇಲ್ಲ. “ರಾಜಾ ಪ್ರತ್ಯಕ್ಷ ದೇವತಃ’ ಅನ್ನಿಸಿಕೊಂಡ ಅಪೂರ್ವ ವ್ಯಕ್ತಿತ್ವ ಅವರದು. ಗಾಂಧೀಜಿಯವರಿಂದ “ರಾಜರ್ಷಿ’ ಎಂದೂ ಕರೆಸಿಕೊಂಡಿದ್ದು ಅವರ ಹೆಗ್ಗಳಿಕೆ.  ಅವರ ದೂರದೃಷ್ಟಿ, ಪ್ರಜಾವಾತ್ಸಲ್ಯ, ಕ್ಷಮಾಗುಣದ ಕುರಿತು ಕತೆಗಳೇ ಇವೆ. ಈಗಲೂ ಅವರನ್ನು “ದೇವರು’ ಎಂದು ಪೂಜಿಸುವ ಜನ ಇದ್ದಾರೆ. ಇಲ್ಲಿ ಸಾಲು ದೀಪಗಳಂತೆ ಬೆಳಗಿರುವ ಘಟನೆಗಳು,  “ಆ ದಿನಗಳ’ ಸುಮನೊಹರ ಕ್ಷಣಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ದಸರೆಯ ಸಂಭ್ರಮಕ್ಕೆ ನಾಡು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ನಾಡ ಚರಿತೆ ನೆನಪಿಸುವ ಪುಟ್ಟ ಪ್ರಯತ್ನ ನಮ್ಮದು…

Advertisement

ಬಿಸಿಲಲ್ಲಿದ್ದ ಮಕ್ಕಳನ್ನು

ಕಂಡು ಹನಿಗಣ್ಣಾದರು…

ನಾ ಲ್ವಡಿ ಮಹಾಸ್ವಾಮಿಯವರಿಗೆ ಮಕ್ಕಳಲ್ಲಿ ಬಹು ಪ್ರೀತಿ. ಮೃಗಯಾ ವಿನೋದಕ್ಕಾಗಿ ಕಾಡಿಗೆ ಹೋದಾಗಲೆಲ್ಲ ಕಾಡು ಕುರುಬರ ಮಕ್ಕಳಿಗೆ ಬಗೆಬಗೆಯ ಆಟದ ಸಾಮಾನುಗಳನ್ನೂ, ಲಾಡು ಜಿಲೇಬಿ ಮುಂತಾದುವುಗಳನ್ನೂ ತಮ್ಮ ಕೈಯಿಂದಲೇ ಕೊಟ್ಟು, ಅವುಗಳ ಕೈಯಲ್ಲಿ ಮಾತನಾಡಿ, ಅವುಗಳ ಲಲ್ಲೆಯನ್ನು ಕೇಳಿ ಹರ್ಷಿಸುತ್ತಿದ್ದರು. ಅವರು ಮಕ್ಕಳನ್ನು ಪ್ರೀತಿಸುತ್ತಿದ್ದ ಬಗೆಯನ್ನು ಕಂಡು, ಆ ಮಕ್ಕಳ ಹೆತ್ತವರು ಅನೇಕ ಸಲ ಮಹಾಪ್ರಭುಗಳ­ವರಿಗೆ ಅಡ್ಡಬಿದ್ದು ಆನಂದಬಾಷ್ಪ ಸುರಿಸಿದ್ದಾರೆ. ಒಂದು ಸಲ ದಸರಾ ಮೆರವಣಿಗೆ ಹೊರಟಾಗ, ಮಕ್ಕಳನ್ನೆತ್ತಿಕೊಂಡು ಪ್ರಭು ದರ್ಶನಕ್ಕಾಗಿ ಕಿಕ್ಕಿರಿದಿದ್ದ ಹೆಂಗಸರನ್ನೂ, ಮಕ್ಕಳ ಮುಖದ ಮೇಲೆ ಬಿಸಿಲು ಬಿದ್ದು ಅವುಗಳ ಮುಖಗಳು ಕೆಂಪೇರಿದ್ದುದನ್ನೂ ಅಂಬಾರಿಯ ಮೇಲಿನಿಂದಲೇ ಪರಿಶೀಲಿಸಿ ಮಹಾಪ್ರಭುಗಳು ಮನನೊಂದರು. “”ಹೆಂಗಸರೂ ಮಕ್ಕಳೂ ಬಿಸಿಲಿನಲ್ಲಿದ್ದರೆ ನಾವು ಆನೆಯ ಮೇಲೆ ಹೋಗಲಾರೆವು” ಎಂದರು. ಮುಂದಿನ ಸಲದ ದಸರಾ ಮೆರವಣಿಗೆಯ ಕಾಲದಿಂದಲೇ ಬಿಸಿಲು ಮಳೆಗಳ ಬಾಧೆಯಿಲ್ಲದೆ ಹೆಂಗಸರು ಮಕ್ಕಳು ಸೇರಬಹುದಾದ ಸೌಕರ್ಯಗಳನ್ನು ಒದಗಿಸಲಾಯಿತು.

***

Advertisement

ಪ್ರಜೆಗಳಿಗೆ ಕಷ್ಟಕೊಟ್ಟು ತೀರ್ಥಸ್ನಾನ ಮಾಡುವುದಾ?

ಅದೊಂದು ಸಲ ಮಹಾಪ್ರಭುಗಳವರು ತಿರುಮಕೂಡಲು ನರಸೀಪುರಕ್ಕೆ ತೀರ್ಥಸ್ನಾನಕ್ಕಾಗಿ ದಯಮಾಡಲಿಚ್ಛಿಸಿದರು. ಪಂಡಿತರತ್ನಂ ಕಾನಕಾನಹಳ್ಳಿ ನಾರಾಯಣಶಾಸಿŒಗಳೊಡನೆ 100 ರೂಪಾಯಿಗಳನ್ನು ಕೆಲವು ದಿನಗಳ ಮೊದಲೇ ಕೊಟ್ಟು ಸ್ನಾನಕ್ಕೆ ತಕ್ಕ ಏರ್ಪಾಡು ಮಾಡಿಸಬೇಕೆಂದೂ, ತಾವು ಬರುವ ಸಂಗತಿಯನ್ನು ರಹಸ್ಯವಾಗಿಡಬೇಕೆಂದೂ ಅಪ್ಪಣೆಯಾಯಿತು. ಸ್ನಾನದ ಏರ್ಪಾಡಾಗುತಿದ್ದುದನ್ನು ಕಂಡು ಅಮಲ್ದಾರರೇ ಮುಂತಾದವರು ಪ್ರಶ್ನೆ ಮಾಡಿದರೆ ತಾವೇನು ಹೇಳಬೇಕೆಂದು ಶಾಸ್ತ್ರಿಗಳು ಕೇಳಿದಾಗ, ಮಹಾಪ್ರಭುಗಳು ನಕ್ಕು “”ಯಾರೋ ಅರಸಿನವರು ಸ್ನಾನಕ್ಕೆ ಬರುತ್ತಾರಂತೆ ಎಂದು ಹೇಳಿಬಿಡಿ” ಎಂದರು. ಮಹಾರಾಜರು ತೀರ್ಥಸ್ನಾನಕ್ಕೆ ಹೋಗಿ ಬಂದ ವಿಷಯವನ್ನು ಗುಟ್ಟಾಗಿಟ್ಟು ತಮಗೆ ಪ್ರಭುದರ್ಶನ ತಪ್ಪಿಸಿದರೆಂದು ಅನೇಕರು ಶಾಸಿŒಗಳನ್ನು ಆಕ್ಷೇಪಿಸಿದರು. ಅವರು ಅದನ್ನು ಅರಿಕೆ ಮಾಡಿದಾಗ ಮಹಾಪ್ರಭುಗಳು ನಕ್ಕು, “ಶಾಸ್ತ್ರಿಗಳೇ, ನಾವು ಹೋದದ್ದು ತೀರ್ಥಸ್ನಾನ ಮಾಡಿ ಕೃತಾರ್ಥರಾಗುವುದಕ್ಕೆ. ಆದರೆ ಮೊದಲೇ ತಿಳಿಸಿದ್ದರೆ, ಎಷ್ಟ ಅಡಕೆ ಮರಗಳುರುಳಿ, ಎಷ್ಟೋ ಚಪ್ಪರಗಳಾಗಿ, ಸಭೆ ಸತ್ಕಾರಗಳಿಗಾಗಿ ಸಾವಿರಾರು ರೂಪಾಯಿಗಳು ಪ್ರಜೆಗಳಿಗೆ ನಷ್ಟವಾಗುತ್ತಿದ್ದುವು. ನಾವು ಹೋಗಿದ್ದುದು ತೀರ್ಥಸ್ನಾನಕ್ಕೆ, ರಾಜಕಾರ್ಯಕ್ಕಲ್ಲ. ನಾವು ಪ್ರಜೆಗಳಿಗೆ ಕಷ್ಟವನ್ನುಂಟು ಮಾಡಿ ತೀರ್ಥಸ್ನಾನ ಮಾಡುವುದೆ?’ಎಂದರು.

ಮಕ್ಕಳ ಫೋಟೋ ತೆಗೆಸಿ ಅರಮನೆಯಲ್ಲಿಟ್ಟರು!

ಹೊಸ ಕಟ್ಟಡ ಮುಂತಾದುವುಗಳ ಪ್ರವೇಶ ಮಹೋತ್ಸವ ಮುಂತಾದುವುಗಳನ್ನು ನೆರವೇರಿಸಲು ದಯಮಾಡುತ್ತಿದ್ದ ಊರುಗಳಲ್ಲೆಲ್ಲ, ಮಕ್ಕಳಿಗೆ ಲಾಡುಗಳೇ ಮುಂತಾದುವುಗಳನ್ನು ಹಂಚಲು ಮಹಾಪ್ರಭುಗಳವರು ಹಣವನ್ನು ದಯಪಾಲಿಸುತ್ತಿದ್ದರು. ಕೆಮ್ಮನಗಂಡಿಯ ಬಳಿಯಲ್ಲಿ, ಭದ್ರಾವತಿಯ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ಸಂಬಂಧದಲ್ಲಿ ಕೆಲಸ ಮಾಡುವ ಕೂಲಿಯವರ ಮಕ್ಕಳಿಗಾಗಿ ಜಾರುಗುಪ್ಪೆ ಮುಂತಾದುವುಗಳನ್ನು ಮಾಡಿಸಿಕೊಟ್ಟು, ಅವರು ಆಟವಾಡುವುದನ್ನು ನೋಡಿ ಹರ್ಷಿಸುತ್ತಿದ್ದರು. ಪ್ರಭುಗಳು ದಿವಂಗತರಾದುದಕ್ಕೆ ಮುಂಚೆ ಕೆಲವು ತಿಂಗಳುಗಳ ಹಿಂದೆ ಕೆಮ್ಮನಗಂಡಿಯಲ್ಲಿದ್ದಾಗ, ಕೂಲಿಯವರಿಗೂ ಮತ್ತು ಅವರ ಮಕ್ಕಳಿಗೂ ಸಂತರ್ಪಣೆ ಮಾಡಿಸಲು ಹಲವು ಸಾವಿರ ಲಾಡುಗಳನ್ನು ಮಾಡಿಸಿದರು; ಮಕ್ಕಳು ಲಾಡುಗಳನ್ನು ತಿಂದುದನ್ನು ನೋಡಿ ಹರ್ಷಿಸಿದರು. ಮಕ್ಕಳಿಗೆ ಜುಬ್ಬಗಳನ್ನು ಹಂಚಿಸಿದರು. ಆ ಮಕ್ಕಳ ಭಾವಚಿತ್ರವನ್ನು ತೆಗೆಯಿಸಿ ಅರಮನೆಯಲ್ಲಿಡಿಸಿದರು.

***

ದೊರೆಗಳೇ,

ಇವರ ಕಾಟ ತಪ್ಪಿಸಿ…

ಕೆಂಡಗಣ್ಣು ಸ್ವಾಮಿ ಗದ್ದುಗೆಯ ಬಳಿಯಲ್ಲಿರುವ ಒಂದು ಗ್ರಾಮ. ಅಲ್ಲೊಬ್ಬ ಲಂಬಾಣಿಗ ರಾಮನೆಂಬ ಬುದ್ಧಿ ಸ್ವಾಧೀನವಿಲ್ಲದ ಅರೆ ಹುಚ್ಚ ಮನುಷ್ಯ. ಅವನನ್ನು ಅಣ್ಣ ತಮ್ಮಂದಿರು ಮನೆಯಿಂದೋಡಿಸಿದ್ದರು. ಅವನಿಗಿದ್ದ ಅಕ್ಕನೂ ಅವನಿಂದ ತನ್ನ ಮಕ್ಕಳಿಗೆ ಅಪಾಯವಾದೀತೆಂದು ಭಾವಿಸಿ ಅವನನ್ನು ಮನೆಯಿಂದ ಓಡಿಸಿದ್ದಳು. ಒಂದು ದಿನ, ಸಮೀಪದ ಕಾಡಿಗೆ ದನಗಳನ್ನು ಹೊಡೆದುಕೊಂಡುಹೋಗಿದ್ದ ತುಂಟ ಹುಡುಗರು ಅವನನ್ನು ಪೀಡಿಸಿ ಕಲ್ಲು ಹೊಡೆಯುತ್ತಿದ್ದರು. ಆಗ ಅವನು, “ಬ್ಯಾಡಿ, ಬ್ಯಾಡಿ, ನಮ್ಮ ದೊರೆಗಳಿಗೆ ಹೇಳಿ ಕೊರಡೇಲಿ ಹೊಡೆಸ್ತೀನಿ. ದೊರೆಗಳೇ ಬನ್ನಿ ಬನ್ನಿ ನನ್ನೊಡೆಯಾ, ಇವರ ಕಾಟ ತಪ್ಪಿಸೀ ನನ್ನೊಡೆಯಾ’ ಎಂದು ಕೂಗುವ ವೇಳೆಗೂ, ಆ ಸುತ್ತಿನಲ್ಲಿ ಹುಲಿ ಬೇಟೆಯ ಏರ್ಪಾಡನ್ನು ನೋಡಲು ಬಂದಿದ್ದ ಮಹಾಪ್ರಭುಗಳವರು ಅಕಸ್ಮಾತ್ತಾಗಿ ಅಲ್ಲಿಗೆ ದಯಮಾಡುವ ವೇಳೆಗೂ ಸರಿಹೋಯಿತು. ಅವರು ವಿದ್ಯಮಾನಗಳನ್ನೆಲ್ಲ ವಿಚಾರಿಸಿ ಅವನಲ್ಲಿ ಕೃಪೆ ತೋರಿ, ಅವನನ್ನು ಮೈಸೂರಿಗೆ ಕರೆದುಕೊಂಡುಹೋಗಿ, ಅವನ ಪೋಷಣೆಗೆ ಉತ್ತಮವಾದ ಏರ್ಪಾಡನ್ನು ಮಾಡಿಸಿದರು.

***

ಮಹಾರಾಜರ ಕಡೆಯ ದಿನಗಳು

ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಸಂಪ್ರದಾಯಗಳನ್ನೆಲ್ಲ ಸುರಕ್ಷಿತವಾಗಿ ಕಾಪಾಡಿದ ಮಹಾಪ್ರಭುಗಳು ಕನ್ನಡದ ಮೇಲಿನ ಅಭಿಮಾನದಿಂದ ನುಡಿದ “ಸಿರಿಗನ್ನಡಂ ಗೆಲ್ಗೆ’ ಎಂಬ ಮಾತುಗಳೇ ಸಾರ್ವಜನಿಕ ಸಭೆಯಲ್ಲಿ ಅವರು ಆಡಿದ ಕಡೆಯ ಮಾತುಗಳು.

ಮಹಾಸ್ವಾಮಿಯವರು ಮತ್ತೆ ಬೆಂಗಳೂರು ನಗರಕ್ಕೆ ಬಂದ ಬಳಿಕ ಎರಡು ಮೂರು ದಿನಗಳು ಕಳೆದುವು. 1940ನೆಯ ಇಸವಿ ಜುಲೈ ತಿಂಗಳು 21ನೆಯ ತಾರೀಖು ಭಾನುವಾರದ ದಿನ ಅವರು ಕುದುರೆ ಸವಾರಿ ಹೊರಟರು. ಬಾಲ್ಯದಿಂದಲೂ ಅವರಿಗೆ ಕುದುರೆ ಸವಾರಿಯಲ್ಲಿ ಅತ್ಯಾದರ. ಅಂದು ಮೋಡವಾಗಿ ತಂಗಾಳಿ ಬೀಸುತ್ತ ವಾಯುಗುಣವು ಬಹಳ ಹಿತವಾಗಿದ್ದುದರಿಂದ ಮಹಾಪ್ರಭುಗಳವರು ಔತ್ಸುಕ್ಯದಿಂದ ಕುದುರೆ ಸವಾರಿ ಮಾಡಿ ಬಂದರು. ಕುದುರೆಯಿಂದಿಳಿದೊಡನೆಯೇ ಎದೆ ನೋವಿನಿಂದ ಸಂಕಟಪಟ್ಟರು. ವೈದ್ಯರು ಬಂದು ಪರೀಕ್ಷಿಸಿ, ಘೋರವಾದ ಹೃದ್ರೋಗವೆಂದು ನಿರ್ಧರಿಸಿದರು.

ನಂತರದ ಆರೇ ತಿಂಗಳುಗಳ ಅವಧಿಯಲ್ಲಿ ಶ್ರೀಮದ್ಯುವರಾಜರೂ, ಶ್ರೀಮನ್ಮಹಾರಾಜರೂ ಕಾಲ ವಶರಾದುದರಿಂದ ಪ್ರಜೆಗಳಿಗೆ ಉಂಟಾದ ದುಃಖ­ ವನ್ನೂ, ಅವರಿಬ್ಬರ ಸದ್ಗುಣ ಸೌಜನ್ಯಗಳ ಮತ್ತು ಕೃಪಾವಾತ್ಸಲ್ಯಗಳ ಪ್ರತ್ಯೇಕಾನುಭವವನ್ನು ಪಡೆದಿದ್ದವರ ಸಂತಾಪವನ್ನೂ, ಶೋಕವನ್ನೂ ವರ್ಣಿಸಲಸದಳ.

ಈ ಮಧ್ಯೆ ಸರ್ಕಾರದ ಆಜ್ಞೆಯಂತೆ ಬೆಂಗಳೂರು- ಮೈಸೂರು ನಗರಗಳಲ್ಲಿ ಮಹಾಪ್ರಭುಗಳ ಗೌರವಾರ್ಥವಾಗಿ ನಿಮಿಷಕ್ಕೊಂದರಂತೆ ಅವರ ವಯಸ್ಸಿನ ಸಂಖ್ಯೆಯನ್ನು ತೋಪುಗಳಾದುವು. 12ನೇ ದಿನದ ಕರ್ಮಗಳು ಮುಗಿಯುವವರೆಗೂ ಸಂಸ್ಥಾನದ ನಾನಾ ಸರ್ಕಾರಿ ಕಚೇರಿಗಳೇ ಮುಂತಾದ ಸಾರ್ವಜನಿಕ ಕಟ್ಟಡಗಳ ಮೇಲೆ ಧ್ವಜಗಳು ಧ್ವಜಸ್ತಂಭಗಳ ಮಧ್ಯಭಾಗದಲ್ಲಿ ಹಾರಾಡಬೇಕೆಂದೂ, ಮಹಾಪ್ರಭುಗಳ ಗೌರವಾರ್ಥವಾಗಿ ಆ ಸಂಸ್ಥೆಗಳೆಲ್ಲ 13 ದಿನಗಳ ಕಾಲ ಮುಚ್ಚಲ್ಪಡತಕ್ಕುದೆಂದೂ ಗೆಜೆಟ್ಟಿನ ವಿಶೇಷ ಪತ್ರಿಕೆಯ ಮೂಲಕ ಸರ್ಕಾರದ ಅಪ್ಪಣೆಯಾಯಿತು. 12ನೇ ದಿನ ಸಂಸ್ಥಾನದಲ್ಲೆಲ್ಲ ಅನ್ನದಾನ ವಸ್ತ್ರದಾನಗಳು ನಡೆದವು. ಬೆಂಗಳೂರು ನಗರದಲ್ಲಿ ದಿವಂಗತರ ದೊಡ್ಡದಾದ ಚಿತ್ರಪಟವೊಂದು ಅಂದವಾದ ರಥದಲ್ಲಿ ಮೆರೆವಣಿಗೆಯಾಯಿತು.

ನಿನ್ನ ದೊರೆ ನಾನೇ ಕಣಪ್ಪ… 

1915ನೆಯ ಇಸವಿಯಲ್ಲಿ ಅದೊಮ್ಮೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಜನರೆಲ್ಲರೂ ಪ್ರಭುಗಳನ್ನು ನೋಡುವ ಆಶೆಯಿಂದ ಮಾರ್ಗದ ಇಕ್ಕೆಲಗಳಲ್ಲಿಯೂ ತುಂಬಿದ್ದರು. ಕುರುಡನಾಗಿದ್ದ ಒಬ್ಬ ಮುದುಕನು, “ನಮ್ಮಪ್ಪ, ನಮ್ಮ ದೊರೇ ಬರ್ತಾರಂತೆ, ನಾನೂ ನೋಡ್ಬೇಕು’ಎಂದು ನುಗ್ಗುತ್ತಿದ್ದಾಗಲೇ ಮಹಾಪ್ರಭುಗಳು ಅಲ್ಲಿಗೆ ದಯಮಾಡಿದರು. ಅವನು ನುಗ್ಗುತ್ತಿದ್ದಾಗ ಇತರರು ಅಪಹಾಸ್ಯ ಮಾಡಿ ನಗುತ್ತ, “ಕಣ್ಣಿಲ್ಲದ ಕುರುಡ, ನೋಡ್ತಾನಂತೆ. ನೋಡ್ತಾನೆ. ದಾರಿ ಬುಡೋ, ದಾರಿ ಬುಡೋ’ ಎಂದು ಹೇಳಿ ಗಹಗಹಿಸಿ ನಕ್ಕರು. ಮಹಾಪ್ರಭುಗಳವರ ಮನಸ್ಸು ಅನುಕಂಪದಿಂದ ಕರಗಿ ಹೋಯಿತು. ಅವರು ಅವನಿದ್ದ ಸ್ಥಳಕ್ಕೆ ಹೋಗಿ, “ಪಾಪ! ಕಣ್ಣಿಲ್ಲ. ಹೇಗೆ ನೋಡುತ್ತೀಯಪ್ಪಾ?’ ಎಂದರು. ಅವನು, “ಕಣ್ಣನ್ನು ದೇವರು ಕಿತ್ಕಂಡವನೆ. ಕೈಯೂ ಕಿಡ್ಕೊಂಡವನಾ? ಕಣ್ಣಿಲೊªàನು, ಕೈಯಾಗೇ ಮುಟ್ಟಿ ನೋಡ್ತೀನಿ, ನಮ್ಮಪ್ಪನ್ನ, ನಮ್ಮ ದೊರೇನ’ ಎಂದನು. ಮಹಾಪ್ರಭುಗಳು ಕಷ್ಟದಿಂದ ಕಂಬನಿಯನ್ನು ತಡೆದು, ಆದರದಿಂದ ಅವನ ಕೈ ಹಿಡಿದುಕೊಂಡು, “ನೀನು ನೋಡಬಯಸುವ ದೊರೆ ನಾವೇ ಅಪ್ಪ; ಪಾಪ! ನಿನಗೆ ದೇವರು ಕಣ್ಣು ಕೊಡಲಿಲ್ಲ’ ಎಂದರು. ಅವನು, “ನೀವೇನಾ ನಮ್ಮ ದೊರೆ! ನೀವೇನಾ ನಮ್ಮಪ್ಪ, ನಮ್ಮ ದೊರೆ?’ ಎಂದು ಹೇಳಿ, ಮೈ ಕೈ ಮುಟ್ಟಿ ನೋಡಿ ಅಡ್ಡ ಬಿದ್ದು, “”ನೂರಾರು ಕಾಲ ಸುಖವಾಗಿ ಬಾಳಿ, ನನ್ನೊಡೆಯ”ಎಂದನು. ಮಹಾಪ್ರಭುಗಳು ಬಿಡಾರದಿಂದ ಅವನಿಗೆ ಹಣವನ್ನೂ, ಹಣ್ಣುಗಳನ್ನೂ ತರಿಸಿಕೊಟ್ಟು, ಅವನನ್ನು ಮೋಟಾರು ಬಂಡಿಯಲ್ಲಿ ಕುಳ್ಳಿರಿಸಿ ಅವನ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅವನ ಮನೆಗೆ ಬಿಟ್ಟು ಬರುವಂತೆ ಒಬ್ಬರು ಅಧಿಕಾರಿಗೆ ಅಪ್ಪಣೆ ಮಾಡಿದರು. ಅವನ ರಾಜಭಕ್ತಿ, ವಿಶ್ವಾಸಗಳನ್ನು ಕಂಡು, ಅವನ ಮಾತುಗಳನ್ನು ಕೇಳಿ, ಮಹಾಪ್ರಭುಗಳ ಮನಸ್ಸು ಕರಗಿ ಹೋಗಿ ಭಗವಂತ ಆತನಿಗೆ ಕಣ್ಣು ಕೊಟ್ಟಿಲ್ಲ. ಆತ ನಮ್ಮಲ್ಲಿ ತೋರಿಸಿದ ಪ್ರೀತಿಗೆ ಪ್ರತಿಯಾಗಿ ಏನನ್ನು ಕೊಟ್ಟರೆ ತಾನೆ ಅದಕ್ಕೆ ಸರಿದೂಗೀತು? ಆ ಪ್ರೀತಿಗೆ ಪ್ರತಿಯಾಗಿ ನಾವು ಏನನ್ನು ತಾನೆ ಕೊಡಬಲ್ಲೆವು ?’ಎಂದು ಆಪ್ತರೊಡನೆ ಹೇಳಿದರು. ಆತನು ಜೀವಂತನಾಗಿದ್ದವರೆಗೂ ಅವನ ಯೋಗಕ್ಷೇಮ ವಿಚಾರಿಸಿಕೊಂಡು ಅವನಿಗೂ, ಅವನ ಕುಟುಂಬದವರಿಗೂ, ಸುಖ ಜೀವನವಾಗುವಷ್ಟು ಧನ ಸಹಾಯ ಮಾಡುತ್ತಿದ್ದರು.

ಇನ್ನು ಮುಂದೆ ಎಚ್ಚರಿಕೆಯಿಂದಿರು…

ನೀಲಗಿರಿ ಅರಮನೆಯಲ್ಲಿ ಶಾಖವನ್ನುಂಟು ಮಾಡುವುದಕ್ಕಾಗಿ ವಿಶೇಷ ಬಗೆಯ ಬಲುºಗಳನ್ನು ತರಿಸಿ ಜೋಡಿಸಿದ್ದರು. ಅವುಗಳಲ್ಲಿ ಒಂದೊಂದಕ್ಕೂ ಬಹಳ ಬೆಲೆ. ಆದರೆ, ವಿದ್ಯುತ್ಛಕ್ತಿಯ ಶಕ್ತಿಯನ್ನು, ಎಂದರೆ ವೋಲ್ಟೆàಜ್‌ ಶಕ್ತಿಯನ್ನು ಕಡಿಮೆಮಾಡತಕ್ಕ ಯಂತ್ರ ಸಾಧನವು ಜೋಡಣೆಯಾದಮೇಲೆ ಸ್ವಿಚ್‌ ಹಾಕಬೇಕೆಂಬುದನ್ನು ಅರಿಯದೆ, ಊಳಿಗದವರೊಬ್ಬರು “ಸ್ವಿಚ್‌’ ಹಾಕಿಬಿಟ್ಟರು. ಬಲುºಗಳೆಲ್ಲ ಕೆಟ್ಟು ಹೋದುವು. ಅವರು ಭಯದಿಂದ ನಡುಗುತ್ತ ನಿಂತಿದ್ದರು. ಮಹಾಪ್ರಭುಗಳು ದೇವತಾರ್ಚನೆ ಮುಗಿಸಿ ಬಂದು-“ಏಕಯ್ಯ ಹೀಗಿದ್ದೀಯೆ?’ ಎಂದರು. ಆಗ ಅವರು,  “ಮಹಾಸ್ವಾಮಿ, ಸ್ವಿಚ್‌ ಹಾಕಿದೆ. ಹೀಗಾಯಿತು. ತಿಳಿಯದೆ ತಪ್ಪು ಮಾಡಿದೆ. ಮನ್ನಿಸಿ ಕಾಪಾಡಬೇಕು’ ಎಂದರು. ಮಹಾಪ್ರಭುಗಳು, “ತಿಳಿದು ಕೆಲಸ ಮಾಡಬೇಕಯ್ಯ, ಹೋಗಲಿ. ಸುಮ್ಮನಿರು. ಇನ್ನು ಮುಂದೆ ಎಚ್ಚರಿಕೆಯಿಂದಿರು’ ಎಂದು ಹೇಳಿ ನಕ್ಕರು. ತಪ್ಪು ಮಾಡಿದವರಿಗೆ ಅವರು ನಯವಾಗಿ ಬುದ್ಧಿ ಹೇಳುತ್ತಿದ್ದರೇ ಹೊರತು, ಬೈದು ಸಣ್ಣ ಮಾತುಗಳನ್ನಾಡುತ್ತಿರಲಿಲ್ಲ.

(ಆಕರಗ್ರಂಥ: “ಆಳಿದ ಮಹಾಸ್ವಾಮಿಯವರು, ದಿವಂಗತ ಶ್ರೀಮನ್ಮಹರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜೀವನ ಚರಿತ್ರೆ’ ಪುಸ್ತಕದಿಂದ ಆಯ್ದ ಘಟನೆಗಳು)

ಸಿ. ಕೆ. ವೆಂಕಟರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next