ಬೆಂಗಳೂರು: ಫರ್ಜಿ ಕೆಫೆಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ತನ್ನ ಸಹಚರರೊಂದಿಗೆ ಸೇರಿ ವಿದ್ವತ್ ಮೇಲೆ ಹಲ್ಲೆ ನಡೆಸುವ ಜತೆಗೆ, ಕೆಲ ಪ್ರಭಾವಿ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳ ಪುತ್ರರ ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ 435 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.
ಸಂಸದ ಪಿ.ಸಿ.ಮೋಹನ್ ಪುತ್ರ ಪಿ.ಎಂ.ರಿತಿನ್, ಮುರುಗೇಶ್ ನಿರಾಣಿ ಪುತ್ರ ವಿಶಾಲ್ ನಿರಾಣಿ, ಹಿರಿಯ ನಟ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಮಾಜಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಹಾಗೂ ಆಸ್ಪತ್ರೆಗೆ ತೆರಳಿದ ಡಾ.ರಾಜ್‌ಕುಮಾರ್ ಮೊಮ್ಮಗ ಗುರುರಾಜ್‌ಗೂ ನಲಪಾಡ್ ಧಮ್ಕಿ ಹಾಕಿದ್ದಾನೆ.
“ನಲಪಾಡ್ ಹಾಗೂ ನಾನು ಬಾಲ್ಯದ ಸ್ನೇಹಿತರು. ಆತ ಶಾಂಪೇನ್ ಬಾಟಲಿ ಹಿಡಿದು, ನನ್ನ ಮುಖದ ಮೇಲೆ ಚಿಮ್ಮಿಸಲು ಬೆನ್ನಟ್ಟಿದ್ದ. ಈ ವೇಳೆ ನಲಪಾಡ್‌ನ ಕಾಲು ಅಲ್ಲಿಯೇ ಕುಳಿತಿದ್ದ ವಿದ್ವತ್‌ನ ಕಾಲಿಗೆ ಬಡಿಯಿತು. ಆಗ ವಿದ್ವತ್ ನೋಡಿಕೊಂಡು ಓಡಾಡಿ ಎಂದ.
ಆದರೆ, ನಲಪಾಡ್ ಎಲ್ಲರ ಎದುರು ಈ ರೀತಿ ಹೇಳಿದ ವಿದ್ವತ್‌ಗೆ, ನಾನು ಶಾಸಕರ ಪುತ್ರ. ನನ್ನ ಎದುರೇ ಈ ರೀತಿ ಮಾತನಾಡುತ್ತಿಯಾ. ಕ್ಷಮೆ ಕೇಳು. ನನ್ನ ಬೂಟನ್ನ ನೆಕ್ಕು ಎಂದ. ಅದಕ್ಕೆ ವಿದ್ವತ್ ನಿರಾಕರಿಸಿದಾಗ ನಲಪಾಡ್ ಹಾಗೂ ಸಹಚರರು ಹಲ್ಲೆ ನಡೆಸಿದರು,’ ಎಂದು ರಿತಿನ್ ಹೇಳಿಕೆ ದಾಖಲಿಸಿದ್ದಾನೆ.
“ಇದನ್ನು ತಡೆಯಲು ಹೋದ ನಮಗೆ ಇದಕ್ಕೂ ನಿಮಗೂ ಸಂಬಂಧವಿಲ್ಲದ. ಮಧ್ಯ ಪ್ರವೇಶಿಸಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ. ಅಲ್ಲದೇ, ನಾವು ಹೇಳುವ ಮಾತುಗಳನ್ನು ಆತ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ,’ ಎಂದು ನಟ ಅಬರೀಷ್ ಪುತ್ರ ಅಭಿಷೇಕ್ ಮತ್ತು ಸಂಸದ ಪಿ.ಸಿ.ಮೋಹನ್ ಪುತ್ರ ರಿತಿಶ್ ಹೇಳಿಕೆ ದಾಖಲಿಸಿದ್ದಾರೆ.