Advertisement

ಬಿಎಸ್‌ವೈ ವಿರುದ್ಧ ಈಶ್ವರಪ್ಪ ದೂರು ವಿಚಾರ ಇನ್ನೆರಡು ದಿನದಲ್ಲಿ ಸುಖಾಂತ್ಯ: ನಳಿನ್‌

12:41 AM Apr 03, 2021 | Team Udayavani |

ಮಂಗಳೂರು: ಹಿರಿಯ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ವರಿಷ್ಠರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಈಶ್ವರಪ್ಪ ಅವರ ಜತೆ ಮಾತುಕತೆ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಇದು ಸುಖಾಂತ್ಯ ಕಾಣಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಶಾಸಕ ಬಸವರಾಜ ಯತ್ನಾಳ್‌ ಮತ್ತು ಸಚಿವ ಈಶ್ವರಪ್ಪ ವಿಚಾರ ಭಿನ್ನವಾಗಿದೆ. ಯತ್ನಾಳ್‌ಗೆ ನೋಟಿಸ್‌ ನೀಡಲಾಗಿದ್ದು, ಅವರು ಉತ್ತರಿಸಲು ಬಾಕಿಯಿದೆ. ಈಶ್ವರಪ್ಪ ವಿರುದ್ಧ ಶಾಸಕರ ಸಹಿ ಸಂಗ್ರಹ ನನ್ನ ಗಮನಕ್ಕೆ ಬಂದಿಲ್ಲ. ನಾವು ಎಲ್ಲ ಶಾಸಕರ ಜತೆಗೂ ಮಾತನಾಡಿದ್ದೇವೆ. ಈಶ್ವರಪ್ಪ ಅವರೊಂದಿಗೆ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಕೂಡ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂದು ನಳಿನ್‌ ವಿವರಿಸಿದರು.

ಸಿದ್ದುಗೆ ತಿರುಗೇಟು
ಈಶ್ವರಪ್ಪ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮಾತನಾಡಲು ನೈತಿಕತೆ ಇಲ್ಲ. ಈ ಹಿಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ರಾಹುಲ್‌ ಗಾಂಧಿ ಅವರೇ ಪ್ರಧಾನಿ ನೋಟಿಸನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕಿದ್ದಾರೆ. ಅದಕ್ಕಿಂತ ಇದು ಅವಮಾನ ಅಲ್ಲ ಎಂಬುದನ್ನು ಸಿದ್ದರಾಮಯ್ಯ ಅರಿತುಕೊಳ್ಳಲಿ ಎಂದು ನಳಿನ್‌ ತಿರುಗೇಟು ನೀಡಿದರು.

ನೋ ಕಮೆಂಟ್‌
ಮಾಜಿ ಸಚಿವ ರಮೇಶ್‌ ಜಾರಕಿ ಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇದೆ. ಹಾಗಾಗಿ ಏನೂ ಮಾತನಾಡುವುದು ಸರಿಯಲ್ಲ. ಈ ಪ್ರಕರಣದಲ್ಲಿ ಡಿಕೆಶಿ ಹೆಸರು ಕೇಳಿ ಬಂದಿರುವ ಬಗ್ಗೆಯೂ ಏನೂ ಹೇಳುವುದಿಲ್ಲ. ಕೋರ್ಟ್‌ನಿಂದ ಬರುವುದೇ ಸತ್ಯ ಎಂದು ನಳಿನ್‌ ತಿಳಿಸಿದರು.

ಅವರದ್ದು ದೊಡ್ಡ ಬೆಂಕಿ, ನಮ್ಮದು ಸಣ್ಣ ಹೊಗೆ
ಕಾಂಗ್ರೆಸ್‌ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮಧ್ಯೆ ಜಗಳ ಜೋರಾಗಿಯೇ ನಡೆಯುತ್ತಿದೆ. ಮುಂದೆ ನಾನೇ ಸಿಎಂ ಎಂದು ಸಿದ್ದು ಟ್ವೀಟ್‌ ಮಾಡಿದರೆ, ಡಿಕೆಶಿ ಅದನ್ನು ನಿರಾಕರಿಸುತ್ತಿದ್ದಾರೆ. ಅವರದ್ದು ದೊಡ್ಡ ಬೆಂಕಿಯಾದರೆ, ನಮ್ಮದು ಸಣ್ಣ ಹೊಗೆ
ಅಷ್ಟೇ ಎಂದು ನಳಿನ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next