ಸವಣೂರು: ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲು ಅವರು ಶುಕ್ರವಾರ ಪಾಲ್ತಾಡಿಯ ಕುಂಜಾಡಿಯ ಮನೆಗೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದುಕೊಂಡರು.
ವಿಜಯದ ಬಳಿಕ ಮೊದಲ ಬಾರಿಗೆ ಕುಂಜಾಡಿಗೆ ಆಗಮಿಸಿದ ನಳಿನ್ ಅವರನ್ನು ಆರತಿ ಎತ್ತಿ ಸ್ವಾಗತಿಸಲಾಯಿತು. ನನ್ನ ಸಾಧನೆ, ಬೆಳವಣಿಗೆಯ ಹಿಂದೆ ಇರುವ ತಾಯಿಯ ತ್ಯಾಗ ದೊಡ್ಡದು ಎಂದು ತಾಯಿ ಸುಶೀಲಾವತಿ ರೈ ಅವರ ಆಶೀರ್ವಾದ ಪಡೆದ ಬಳಿಕ ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಅವರ ಸಹೋದರ ನವೀನ್ ಕುಮಾರ್ ರೈ, ಅತ್ತಿಗೆ ಗೀತಾ, ಮನೋಹರ ರೈ ನರಿಮೊಗರು, ಪ್ರಮೋದ್ ಕೆ.ಆರ್. ಇದ್ದರು.
10 ವರ್ಷಗಳಿಂದ ಸಂಸದನಾಗಿ ಕ್ಷೇತ್ರ ಸಂಚಾರ, ಅಧಿವೇಶನಗಳ ಒತ್ತಡ ನಡುವೆಯೂ ನಿತ್ಯ ಫೋನ್ ಮೂಲಕ ಆರೋಗ್ಯವಿಚಾರಿಸುತ್ತಿರುತ್ತಾನೆ. ಏನೇ ಮಾಡುವುದಿದ್ದರೂ ನನಗೆ ತಿಳಿಸುತ್ತಾನೆ. ದೈವಭಕ್ತನಾಗಿರುವ ಮಗ ನಳಿನ್ ದೇವರ ಅನುಗ್ರಹ, ತನ್ನ ಶ್ರಮದಿಂದ ಎತ್ತರಕ್ಕೆ ಏರಿದ್ದಾನೆ. ಜನತೆಯ ಆಶೀರ್ವಾದದಿಂದ ಮತ್ತೆ ಮೋದಿಯವ ರಂತಹ ನಾಯಕರ ಜತೆ ಅವನು ಆಡಳಿತದ ಭಾಗವಾಗುತ್ತಿರುವುದು ಹೆಮ್ಮೆ ತಂದಿದೆ.
– ಸುಶೀಲಾವತಿ ರೈ, ನಳಿನ್ ತಾಯಿ