Advertisement

ನಳಿನ್ ಕುಮಾರ್ ತಂಡಕ್ಕೆ ಮರ್ಮಾಘಾತ ನೀಡಿದ ಯಡಿಯೂರಪ್ಪ: ಕಾಂಗ್ರೆಸ್ ಟೀಕೆ

04:15 PM Aug 05, 2021 | Team Udayavani |

ಬೆಂಗಳೂರು: ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. 29 ಮಂದಿ ಶಾಸಕರು ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ರಚನೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಭಾವ ಬೀರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಯಡಿಯೂರಪ್ಪ ಅವರು ನಳಿನ್ ಕುಮಾರ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ ಎಂದಿದೆ.

Advertisement

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ, ತಮ್ಮ ವಿರುದ್ಧದ ಬಂಡಾಯಗಾರರನ್ನ ಸಂಪುಟದಿಂದ ದೂರವಿಡುವ ಮೂಲಕ ಮೀರ್‌ಸಾದಿಕ್ ನಳಿನ್ ಕುಮಾರ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ! ಕಟೀಲ್ ಕಾಮಿಡಿ ಮಾಡಲು ಮಾತ್ರ! ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ ಬಿಎಸ್ ವೈ ಅವರೇ ಹೈಕಮಾಂಡ್ ಆಗಿದ್ದಾರೆ ಎಂದಿದೆ.

ಮೊದಲೆಲ್ಲ ಕಾಂಗ್ರೆಸ್‌ಗೆ ‘ಹೈಕಮಾಂಡ್ ಸಂಸ್ಕೃತಿ’ ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ ‘ಬಲಿಷ್ಠ ಹೈಕಮಾಂಡ್’ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು! ಯಡಿಯೂರಪ್ಪ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದ ಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಳಿನ್ ಕುಮಾರ್ ಕಟೀಲ್ ಎಂಬ ಮೀರ್‌ಸಾದಿಕ್ ಅದೆಷ್ಟೇ ಷಡ್ಯಂತ್ರ ರೂಪಿಸಿದರೂ ಯಡಿಯೂರಪ್ಪನವರ ಕೈ ಮೇಲಾಗಿದೆ, ಮೂಲ ಬಿಜೆಪಿಗರು ಮೂಲೆ ಗುಂಪಾದರೂ ಏನೂ ಮಾಡಲಾಗದ ಕಟೀಲ್ ತನಗೆ ಬೆನ್ನೆಲುಬಿಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಿಜೆಪಿ ಈಗ ಬಿಜೆಪಿಯಾಗಿ ಉಳಿದಿಲ್ಲ, ವಿಜೆಪಿ ಆಗಿದೆ, ಅಂದರೆ ವಲಸಿಗರ ಜನತಾ ಪಾರ್ಟಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ:ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟ ನಿರಾಣಿ|ಸವದಿ-ದೊಡ್ಡನಗೌಡ-ಚರಂತಿಮಠ ಬೆಂಬಲಿಗರಲ್ಲಿ ನಿರಾಶೆ  

Advertisement

ದವಳಗಿರಿ ಸರ್ಕಾರದ ಸಂಪುಟದಲ್ಲಿ ದಲಿತರನ್ನ ಕಡೆಗಣಿಸಿ ಬಿಜೆಪಿ ತನ್ನ ದಲಿತ ವಿರೋಧಿ ನೀತಿಯನ್ನ ಮತ್ತೊಮ್ಮೆ ನಿರೂಪಿಸಿದೆ. ದಲಿತರನ್ನು ಸಿಎಂ ಮಾಡುವುದಿರಲಿ ಕೊನೆ ಪಕ್ಷ ಸಂಪುಟದಲ್ಲಿಯೂ ಪ್ರಾತಿನಿಧ್ಯ ನೀಡದ ಬಿಜೆಪಿ ಇತರ ಪಕ್ಷಗಳಿಗೆ ಆರೋಪಿಸುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ. ಮೊಟ್ಟೆ ಖರೀದಿ ಹಗರಣ ನಡೆಸಿದ ಶಶಿಕಲಾ ಜೊಲ್ಲೆಯವರನ್ನ ಝಿರೋ ಟ್ರಾಫಿಕ್‌ ರಾಜ ಮರ್ಯಾದೆಯಲ್ಲಿ ಕರೆತಂದು ದವಳಗಿರಿ ಸರ್ಕಾರ ದಲ್ಲಿ ಮಂತ್ರಿಗಿರಿ ಕೊಡುವ ಮೂಲಕ ಬಿಜೆಪಿ ಭ್ರಷ್ಟಾಚಾರವನ್ನು ತಮ್ಮ ‘ಮನೆದೇವರು’ ಎಂಬುದನ್ನ ಸಾರಿ ಹೇಳುತ್ತಿದೆ. ಬಡ ಮಕ್ಕಳ ಮೊಟ್ಟೆ ತಿಂದಿದ್ದನ್ನ ತನಿಖೆಗೆ ವಹಿಸದೆ ಸಿಎಂ ಸಮರ್ಥಿಸಿಕೊಳ್ಳುವುದು ನೈತಿಕ ಅಧಃಪತನ ಎಂದಿದೆ.

ವಲಸಿಗರಿಗೆ ಮಣೆ ಹಾಕುವ ಮೂಲಕ ತಮ್ಮ ವಿರುದ್ಧ ಕತ್ತಿ ಮಸೆದ ಅಸಲಿ ಬಿಜೆಪಿಗರನ್ನ ಯಡಿಯೂರಪ್ಪ ಮುಗಿಸಿ ಹಾಕುತ್ತಿದ್ದಾರೆ. ಸಿಎಂನಿಂದ ಹಿಡಿದು ಸಂಪುಟದವರೆಗೂ ಬಹುತೇಕರು ವಲಸೆ ಬಂದವರೇ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಬಿಜೆಪಿಗರೇ ಇಲ್ಲದಂತಾಗಿದೆ! ಇದನ್ನು ಬಿಜೆಪಿ ಸರ್ಕಾರ ಎನ್ನುವ ಬದಲು ದವಳಗಿರಿಸ ರ್ಕಾರ ಎನ್ನಬಹುದು ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next