ಬೆಂಗಳೂರು: ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಳಿ ತಪ್ಪಿಸಲಾಗುತ್ತಿದೆ. ಇದು ವಿದೇಶಿ ಕೈವಾಡದಿಂದ ಪ್ರಚೋದಿತ ದೇಶ ವಿರೋಧಿ ಕೃತ್ಯವಾಗಿದೆ. ಇದರಲ್ಲಿ ಎಡಪಂಥೀಯ ದಲ್ಲಾಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರದ ವೇಳೆ ಶಾಂತಿಯುತವಾಗಿಯೇ ವರ್ತಿಸುತ್ತಿದ್ದ ಮಹಿಳಾ ಪೊಲೀಸರು ಸೇರಿ ನೂರಾರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಇರಿದು ಗಾಯಗೊಳಿಸಲಾಗಿದೆ.
ಕೇಂದ್ರ ಸರಕಾರವು ಕೃಷಿ ಸುಧಾರಣಾ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಉತ್ಪನ್ನಗಳಿಗೆ ಹೆಚ್ಚು ದರ ನೀಡುವಂತೆ ನೋಡಿಕೊಂಡಿದೆ. ಸುಸ್ಥಿರ ಕೃಷಿಗೂ ಅದು ಅವಕಾಶ ಮಾಡಿಕೊಡುತ್ತಿದೆ. ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸಿದ ಕೇಂದ್ರ ಸರಕಾರವು ಹನ್ನೊಂದು ಸುತ್ತಿನ ಮಾತುಕತೆಗಳನ್ನೂ ನಡೆಸಿದೆ ಹಾಗೂ ಕಾಯಿದೆಗಳನ್ನು ತಡೆಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡಲು ಕ್ರಮ: ಕೆ.ಎಸ್. ಈಶ್ವರಪ್ಪ
ಪ್ರತಿಭಟನೆಯನ್ನು ಸ್ಥಾಪಿತ ಹಿತಾಸಕ್ತಿಗಳು ಪ್ರಚೋದಿಸುತ್ತಿವೆ. ಈ ಪ್ರಚೋದನೆಯಿಂದ ವಿಶ್ವದ ಕೆಲವೆಡೆ ಮಹಾತ್ಮ ಗಾಂಧಿ ಅವರ ಪ್ರತಿಮೆಗಳನ್ನು ಅಪವಿತ್ರಗೊಳಿಸಲಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಜೊತೆ 11 ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿರುವ ಸಂದರ್ಭದಲ್ಲೇ ಪ್ರತಿಭಟನಾಕಾರರನ್ನು ಕೆಲವು ಚಿತ್ರನಟರು, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದಿಸುವುದು ಸರಿಯಲ್ಲ. ಇದು ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.