ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಲಾಗಿದೆ.
ಸತತ ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷದಲ್ಲಿ ರಾಜ್ಯಾಧ್ಯಕ್ಷದಂತಹ ಮಹತ್ವದ ಹುದ್ದೆ ಸಿಗುತ್ತಿರುವುದು ಇದೇ ಮೊದಲು.
ಸಾಮಾನ್ಯ ಕಾರ್ಯಕರ್ತನಿಂದ ಸಂಸದರಾಗಿ ಸತತ ಮೂರು ಸಲ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಲಿದುಬಂದಿದ್ದು ಮುಂಬರುವ ದಿನಗಳಲ್ಲಿ ಪಕ್ಷವನ್ನು ರಾಜ್ಯಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ಈ ಯುವ ಸಂಸದರ ಹೆಗಲಿಗೆ ಬಿದ್ದಿದೆ.
ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸೈಂಟ್ ಫಿಲೋಮಿನಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದ ನಳಿನ್ ಆ ಕಾಲದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ಆಕರ್ಷಿತರಾಗಿ ತಮ್ಮ 18ನೇ ವಯಸ್ಸಿನಲ್ಲೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಹೀಗೆ 12 ವರ್ಷಗಳ ಕಾಲ ಆರ್.ಎಸ್.ಎಸ್. ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು.
2004ರಲ್ಲಿ ಜಿಲ್ಲಾ ಬಿಜೆಪಿಯ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಳಿನ್ ಕುಮಾರ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದರು. 2014ರಲ್ಲಿ ಪುನರಾಯ್ಕೆಯಾದರು. ಮತ್ತೆ 2019ರಲ್ಲಿ ಮೂರನೇ ಬಾರಿಗೆ ಭರ್ಜರಿ ಅಂತರದಲ್ಲಿ ಗೆದ್ದು ‘ಹ್ಯಾಟ್ರಿಕ್ ಸರದಾರ’ ಎನಿಸಿಕೊಂಡರು.
ಕೇಂದ್ರ ಸರಕಾರದ ಕೃಷಿ ಸ್ಥಾಯೀ ಸಮಿತಿ, ತೆಂಗು ಅಭಿವೃದ್ಧಿ ಮಂಡಳಿ, ನೆಹರೂ ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್ ಮಂಡಳಿ, ಬಂದರು ಮಂಡಳಿ ಸಹಿತ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.