ಬೀದರ್: ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಬಿಜೆಪಿ ಕಲ್ಬುರ್ಗಿ ವಿಭಾಗ ಸಂಘಟನಾ ಕಾರ್ಯದರ್ಶಿ, ಆರ್‌ಎಸ್‌ಎಸ್ ಪ್ರಮುಖ ದತ್ತು ತುಗಾಂವಕರ್ ಅವರ ನಿವಾಸಕ್ಕೆ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಲ್ಬುರ್ಗಿಯಿಂದ ನೇರವಾಗಿ ಭಾಲ್ಕಿಗೆ ಆಗಮಿಸಿದ ಕಟೀಲ್ ಅವರು ತುಗಾಂವಕರ್ ಅವರ ಮನೆಗೆ ತೆರಳಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬಿಜೆಪಿ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಸಂಘಟಕ ದತ್ತು ತುಗಾಂವಕರ್ ಅವರು ಕೋವಿಡ್ ಸೋಂಕಿನಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿಯಾಗಿದೆ, ಇವರನ್ನು ಕಳೆದುಕೊಂಡ ನಮ್ಮ ಪಕ್ಷವು ಬಹಳ ಬಡವಾಗಿದೆ ಎಂದು ಕಂಬನಿ ಮಿಡಿದರು.
ಇದನ್ನೂ ಓದಿ:ಸೋಂಕಿತರ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಉಪಕ್ರಮಕ್ಕೆ ಪ್ರಧಾನಿ ಶ್ಲಾಘನೆ
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾನ್, ವಿಭಾಗ ಪ್ರಭಾರಿಗಳಾದ ಶಾಸಕ ರಾಜಕುಮಾರ ಪಾಟೀಲ ತೇಲ್ಕುರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ, ಶಾಸಕ ರಾಜಕುಮಾರ ಪಾಟೀಲ ಸೇಡಂ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ತಾಲೂಕು ಅಧ್ಯಕ್ಷ ಪಂಡಿತ ಶಿರೋಳೆ, ಮುಖಂಡ ಡಿ.ಕೆ ಸಿದ್ರಾಮ ಮತ್ತಿತರರು ಇದ್ದರು.