ಉಡುಪಿ: ಸಿದ್ದರಾಮಯ್ಯ ಅವರು ಅಹಿಂದ ಹೋರಾಟವನ್ನು ಮಾಡಿ ಸಿಎಂ ಪಟ್ಟಕ್ಕೇರಿದಾಗ ಅಹಿಂದವನ್ನು ಮರೆತು ಬಿಟ್ಟರು, ಅವರಿಂದ ಹಿಂದುಳಿದ ವರ್ಗಕ್ಕಾಗಿ ಏನು ಮಾಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು.
ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು ಸಿದ್ದರಾಮಯ್ಯ ಅಧಿಕಾರವನ್ನು ವಹಿಸಿಕೊಂಡ ಬಳಿಕ ಅಹಿಂದವನ್ನು ಮರೆತಿದ್ದಾರೆ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ರಾತ್ರಿ ಹಗಲು ಶ್ರಮವಹಿಸಿದ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಇತಿಹಾಸವಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಅಹಿಂದ ಹೆಸರನ್ನು ಉಲ್ಲೇಖ ಮಾಡುವುದು ಎಷ್ಟು ಸರಿಯೆಂಬುದು ಜನರಿಗೆ ಗೊತ್ತುಎಂದು ಚಾಟಿ ಬೀಸಿದರು.
ಇದನ್ನೂ ಓದಿ: ಉಕ್ಕಿದ ಬೆಣ್ಣೆಹಳ್ಳ; ಹೊಳೆಆಲೂರು- ಮೆಣಸಗಿ ಸಂಪರ್ಕ ಕಡಿತ
ಸಿದ್ದರಾಮಯ್ಯ ಅವರು ಬಿಜೆಪಿಗೆ ತಾಕತ್ತಿದ್ದರೆ ಅಹಿಂದ ಅಭ್ಯರ್ಥಿಯನ್ನು ನಿಲ್ಲಿಸಿ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಇದುವರೆಗೆ ಕಾಂಗ್ರಸ್ ನ ಹಾಗೆ ಸುದೀರ್ಘ ಅವಧಿಯ ಅಧಿಕಾರ ಸಿಕ್ಕಿಲ್ಲ. ಹಿಂದೆ ವಾಜಪೇಯಿ ಅವರ ಕಾಲದಲ್ಲಿ ಮುಸ್ಲಿಂ ವ್ಯಕ್ತಿ ಅಬ್ದುಲ್ ಕಲಾಂನಂಥವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಗೊತ್ತೇ ಇದೆ. ಈಗ ನರೇಂದ್ರ ಮೋದಿಯವರು ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಗೋವಿಂದ ಕಾರಂಜೋಳ ಅವರನ್ನು ಡಿಸಿಎಂಯನ್ನಾಗಿ ಮಾಡಿದ್ದಾರೆ. ಮೊನ್ನೆ ಕೇಂದ್ರದಲ್ಲಿ ನಾರಾಯಣ ಸ್ವಾಮಿ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ನಮ್ಮ ಪಕ್ಷ ದಲಿತರಿಗೆ ನ್ಯಾಯ ಹಾಗೂ ಸಮಾನ ಸ‍್ಥಾನಮಾನ ಕೊಟ್ಟಿದೆ ಎಂದರು.
ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿಗಳು ಆಯಾ ಕ್ಷೇತ್ರದ ಜನಪ್ರತಿನಿಧಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಇದುವರೆಗೆ ನನಗೆ ಮಾಹಿತಿಯಿಲ್ಲ. ಇದರ ಬಗ್ಗೆ ಏನನ್ನೂ ಹೇಳಲು ಇಷ್ಟವಿಲ್ಲ ಎಂದರು.
ಆಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ಕುರಿತು ದೂರು ಕೊಟ್ಟಿದ್ದೇವೆ. ತನಿಖೆ ನಡೆಯುತ್ತಿದೆ ಎಂದರು.