ಪುತ್ತೂರು: ರಾಜ್ಯದಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಬದ್ಧವಾಗಿದೆ. ಈಗಿನ ವಿಧಾನಸಭಾ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮಂಡನೆಯಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ, ಲವ್ ಜೆಹಾದ್ ನಿಷೇಧ ಬಗ್ಗೆ ಬಿಜೆಪಿ ಕಾರ್ಯಾಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಜಾರಿಗೊಳಿಸಲು ನಾವು ಬದ್ಧ ಎಂದರು.
ಗ್ರಾಮ ಸ್ವರಾಜ್ಯ ಪರಿಕಲ್ಪನೆ
ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ನಿರ್ವಹಿಸಲಿದ್ದಾರೆ. ಕೇಂದ್ರ ಸರಕಾರವು ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದು, ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪಕ್ಷ ಆದ್ಯತೆ ನೀಡಲಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವ ಬಗ್ಗೆ ಅನೇಕ ಮನವಿ ಬಂದಿದೆ. ಈಗಾಗಲೇ ಗ್ರಾ.ಪಂ., ಜಿ.ಪಂ. ಮೂಲಕ ಎನ್ಓಸಿ ಪಡೆದು ರಾಜ್ಯ ಸರಕಾರಕ್ಕೆ ಕಳುಹಿಸಿದ್ದು ಅಲ್ಲಿಂದ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಹಿಂದೆ ತಾಂತ್ರಿಕ ಕಾರಣದಿಂದ ಹೆಸರಿಡಲು ಸಮಸ್ಯೆ ಉಂಟಾಗಿತ್ತು. ಅದನ್ನು ಸರಿಪಡಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಜತೆಗೆ ಸಂಬಂಧಿಸಿದ ಸಚಿವರ ಜತೆಯು ಚರ್ಚಿಸಲಾಗುವುದು ಎಂದರು