ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಬಲವಾಗಿರುವ ನಡುವೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಗಂಭೀರ ಪ್ರಯತ್ನ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ದಿಲ್ಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮರಳಿರುವ ಸಚಿವ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು, ಆ ರೀತಿಯ ಯಾವುದೇ ಚರ್ಚೆ ಪಕ್ಷದಲ್ಲಿ ಈಗ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶ, ಕೊರೊನಾ ನಿಯಂತ್ರಣದಲ್ಲಿ ಸರಕಾರದ ವೈಫಲ್ಯ ಮತ್ತು ಜಿಂದಾಲ್ ಸಂಸ್ಥೆಗೆ ಕಡಿಮೆ ದರಕ್ಕೆ ಜಮೀನು ಮಾರಾಟ ತೀರ್ಮಾನಗಳ ಕುರಿತು ರಾಜ್ಯ ಬಿಜೆಪಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪಕ್ಷದ ಕೆಲವು ಶಾಸಕರು ವರಿಷ್ಠರು ಗಮನಕ್ಕೂ ತಂದಿ ದ್ದಾರೆ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ದಿಲ್ಲಿಗೆ ಭೇಟಿ ನೀಡಿ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸದ್ಯ ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ. ಈಗ ಪಕ್ಷ, ಶಾಸಕರು, ಸಚಿವರಿಗೆ ಒಂದೇ ಕೆಲಸ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒಂದೇ ಕೆಲಸ, ಒಂದೇ ಗುರಿ- ಜನರ ಪ್ರಾಣ ಉಳಿಸುವುದು ಎಂದು ಹೇಳಿದರು. ಸಿಎಂ ವಿರುದ್ಧ ಯಾವುದೇ ಶಾಸಕರು ಆರೋಪ ಮಾಡಿಲ್ಲ. ಆ ರೀತಿ ಮಾತನಾಡಿದ್ದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಸತ್ಯಕ್ಕೆ ದೂರವಾದದ್ದು. ರವಿವಾರ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೇನೆ. ರಾಜ್ಯದ ಕೋವಿಡ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಿರ್ವಹಣೆಯ ಬಗ್ಗೆ ಬಿಜೆಪಿ ವರಿಷ್ಠರು ಬೇಸರ ಗೊಂಡಿದ್ದಾರೆ ಎಂಬುದು ಸುಳ್ಳು. ಕೋವಿಡ್ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಸಮಂಜಸ ಅಲ್ಲ. ವರಿಷ್ಠರ ಭೇಟಿ ಸಂದರ್ಭದಲ್ಲಿ ಅಂಥ ಚರ್ಚೆಯಾಗಿಲ್ಲ. ಈಗ ಆ ರೀತಿ ಯೋಚನೆ ಮಾಡಲೇಬಾರದು. ದಿಲ್ಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ, ಯಾವುದೇ ಚರ್ಚೆ ಕೂಡ ಆಗಿಲ್ಲ ಎಂದರು.