Advertisement

ನಿಗಮಗಳ ಅಧ್ಯಕ್ಷರ ಬದಲಾವಣೆಗೆ ಸಿದ್ಧತೆ? ಸಂಭಾವ್ಯರ ಪಟ್ಟಿ ಸಿದ್ಧಪಡಿಸಲು ನಳಿನ್‌ ಸೂಚನೆ

01:34 AM Jun 27, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೀವಂತವಾಗಿರುವಾಗಲೇ ಹಾಲಿ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

ಜೂ. 18ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಹಾಲಿ ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈಗಿರುವ ಅಧ್ಯಕ್ಷರನ್ನು ಬದಲಾಯಿಸಿ, ಪಕ್ಷಕ್ಕಾಗಿ ದುಡಿದಿರುವ ಇನ್ನಷ್ಟು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಅರುಣ್‌ ಸಿಂಗ್‌ ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು.

ಶನಿವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದ್ದು, ಅದು ಮುಕ್ತಾಯವಾದ ಅನಂತರ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ನಿಗಮ ಮಂಡಳಿಗಳಿಗೆ ಸಂಭಾವ್ಯರ ಪಟ್ಟಿಯನ್ನು ಪಕ್ಷದ ವತಿಯಿಂದ ಸಿದ್ಧಪಡಿಸುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿ ದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘಟನೆ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಕಾರ್ಯಕಾರಿಣಿಯಲ್ಲಿ ಪ್ರಸ್ತಾವಿಸದೆ ಬಳಿಕ ಪಟ್ಟಿ ಸಿದ್ಧಪಡಿಸುವಂತೆ ಪ್ರತ್ಯೇಕವಾಗಿ ಸೂಚನೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈಗ ಅಧ್ಯಕ್ಷರಾಗಿರುವವರಲ್ಲಿ ಬಹುತೇಕರು ಸಿಎಂ ಯಡಿಯೂರಪ್ಪ ಅವರ ಹಿಂಬಾಲಕರು ಎಂಬ ಆಕ್ಷೇಪ ಪಕ್ಷದ ವಲಯದಲ್ಲಿ ಇದೆ. ಇದೇ ಕಾರಣಕ್ಕೆ ಪಕ್ಷದ ನಿಜವಾದ ಕಾರ್ಯಕರ್ತರು, ಪಕ್ಷಕ್ಕಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ ಅವಕಾಶ ದೊರೆಯಬೇಕೆಂದು ಕೋರ್‌ ಕಮಿಟಿ ಸಭೆಯಲ್ಲಿ ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು.

Advertisement

ಈಗ ಪಕ್ಷದ ರಾಜ್ಯಾಧ್ಯಕ್ಷರು ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿರುವುದು ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಒಂದು ತಿಂಗಳಲ್ಲಿ ಹಾಲಿನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾ ಯಿಸಿ ಹೊಸಬರಿಗೆ ಅವಕಾಶ ಕಲ್ಪಿಸಲು ಪಕ್ಷ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಆದರೆ ಈಗ ಅಧಿಕಾರದಲ್ಲಿರುವ ಕೆಲವು ಅಧ್ಯಕ್ಷರು ಇನ್ನೂ ಎರಡು ವರ್ಷ ಪೂರ್ಣಗೊಳಿಸಿಲ್ಲ. ಕೆಲವರು ಒಂದು ವರ್ಷವನ್ನೂ ಪೂರೈಸಿಲ್ಲ. ಹೀಗಾಗಿ ಎಲ್ಲ ಅಧ್ಯಕ್ಷರನ್ನು ಬದಲಾಯಿಸಲು ಮುಂದಾದರೆ ಪಕ್ಷ ಮತ್ತು ಸರಕಾರದ ನಡುವೆ ಮತ್ತೆ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ಈಗಲೇ ಕೈ ಸಿಎಂ ವಿಚಾರ ಬೇಡ
ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾವಕ್ಕೆ ಅವಕಾಶ ಕೊಡದೆ ಪಕ್ಷ ಸಂಘಟನೆ ಮಾಡಲು ಒತ್ತು ನೀಡಿ ಎಂದು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತು ಮಾಜಿ ಸಚಿವೆ ಮೋಟಮ್ಮ ಪಕ್ಷದ ನಾಯಕರ ಸಮ್ಮುಖದಲ್ಲಿ ಹೇಳಿದ್ದಾರೆ. ಕೆಪಿಸಿಸಿ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಪಕ್ಷ ಉಳಿದರೆ ನಾವು. ಪಕ್ಷದ ಭವಿಷ್ಯ ಮುಖ್ಯ. ಹೀಗಾಗಿ ಯಾರೂ ಯಾವುದೇ ಗೊಂದಲಗಳಿಗೆ ಅವಕಾಶ ಕೊಡ ಬೇಡಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next