Advertisement

ಪಕ್ಷ ಸಂಘಟನೆ-ಪ್ರಾದೇಶಿಕ ಅಭಿವೃದ್ಧಿ ನಮ್ಮ ಗುರಿ: ರಾಜ್ಯಾಧ್ಯಕ್ಷ ನಳಿನ್‌

11:44 AM Nov 04, 2020 | sudhir |

ಮಂಗಳೂರು : ತಳಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸುವುದು ಮತ್ತು ಪ್ರಾದೇಶಿಕವಾಗಿ ಅಭಿವೃದ್ಧಿ ಪರ ಯೋಜನೆಗಳಿಗೆ ಒತ್ತು ನೀಡುವುದು ರಾಜ್ಯ ಕಾರ್ಯಕಾರಿಣಿಯನ್ನು ಜಿಲ್ಲಾ ಕೇಂದ್ರಗಳಲ್ಲಿ ನಡೆಸುವುದರ ಹಿಂದಿನ ಉದ್ದೇಶವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ತಮ್ಮ ತವರು ಜಿಲ್ಲೆಯಲ್ಲೇ ನಡೆ ಯುವ ಕಾರ್ಯಕಾರಿಣಿ ಸಭೆ ಕುರಿತಂತೆ ನಳಿನ್‌ ಅವರು “ಉದಯವಾಣಿ’ ಜತೆ ಮಾತನಾಡಿದ್ದಾರೆ.
“ಪಕ್ಷದ ವಿಶೇಷ ರಾಜ್ಯ ಕಾರ್ಯಕಾರಿಣಿಯನ್ನು ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕಾರ್ಯಕಾರಿಣಿ ಸದಸ್ಯರು ಆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲು ಅವಕಾಶವಾಗುತ್ತದೆ. ಇದರ ಜತೆ ಸಿಎಂ, ಸಚಿವರು ಇಲ್ಲಿಗೆ ಬರುವುದರಿಂದ ಆ ಜಿಲ್ಲೆಗಳ ಸಮಸ್ಯೆಗಳು, ಅಭಿವೃದ್ಧಿ ಕಾರ್ಯ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಿ ಪೂರಕ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆಯುವ ಪ್ರಥಮ ಕಾರ್ಯಕಾರಿಣಿ ಸಭೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳು, ಕುಮ್ಕಿ ಹಕ್ಕು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ವಿವರಿಸಿದರು.

ವಿವಿಧ ವಿಚಾರಗಳ ಬಗ್ಗೆ ಚರ್ಚೆ
“ಸಭೆಯಲ್ಲಿ ಸಂಘಟನಾತ್ಮಕ ವಿಚಾರ ಗಳು ಹಾಗೂ ಚುನಾವಣೆಗಳು, ಮುಂದಿನ ಕಾರ್ಯಯೋಜನೆ, ಅಭಿ ವೃದ್ಧಿಗೆ ಸಂಬಂಧಪಟ್ಟ ವಿಚಾರಗಳ ಚರ್ಚೆ ನಡೆಯಲಿದೆ. ಹಿಂದಿನ ಚುನಾವಣೆಗಳಲ್ಲಿ ಪಕ್ಷದ ನಿರ್ವಹಣೆ ಅವಲೋಕನ ಜತೆಗೆ ಮುಂಬರುವ ವಿವಿಧ ಮಟ್ಟಗಳ ಚುನಾವಣೆಗಳ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಸರಕಾರದ ಎಪಿಎಂಸಿ,ರೈತ ಮಸೂದೆ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ನಿರ್ಣಯಗಳನ್ನು ಕೂಡ ಸಭೆಯಲ್ಲಿ ಕೈಗೊಳ್ಳ ಲಾಗುವುದು’ ಎಂದು ನಳಿನ್‌ ತಿಳಿಸಿದರು.

ಜಿಲ್ಲೆಯ ಮಾದರಿ
ಹಿಂದೆ ಜಿಲ್ಲೆಯಲ್ಲಿ ಪಕ್ಷದ ಸಂಘಟನ ಕಾರ್ಯದರ್ಶಿಯಾಗಿದ್ದ ವೇಳೆ ಈ ಕಾರ್ಯತಂತ್ರದಂತೆ ಪ್ರತಿ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಇದನ್ನು ಪ್ರತಿಯೊಂದು ಮಂಡಲ ಮಟ್ಟದಲ್ಲಿ ನಡೆಸುವಂತೆ ನೋಡಿಕೊಳ್ಳಲಾಗಿತ್ತು. ಈ ಕ್ರಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಉತ್ತಮ ಪರಿಣಾಮಗಳನ್ನುಂಟು ಮಾಡಿತ್ತು. ಇದನ್ನು ಇದೀಗ ರಾಜ್ಯಮಟ್ಟ ದಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.

ಪಕ್ಷ ಸಂಘಟನೆಗೆ ಪ್ರಾಶಸ್ತ್ಯ
“ರಾಜ್ಯದಲ್ಲಿ ಆಡಳಿತಾತ್ಮಕವಾಗಿ 30 ಜಿಲ್ಲೆಗಳಿವೆ. ಬಿಜೆಪಿಯಲ್ಲಿ ಸಂಘ ಟನಾತ್ಮಕವಾಗಿ 37 ಜಿಲ್ಲೆಗಳಿವೆ. 311 ಮಂಡಲಗಳು, ಪ್ರತಿಯೊಂದು ಜಿ. ಪಂ. ಕ್ಷೇತ್ರ ಮಟ್ಟದಲ್ಲಿ ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ್‌ ಸಮಿತಿಗಳಿವೆ. ಪೇಜ್‌ ಪ್ರಮುಖರ ನಿಯುಕ್ತಿ ಕಾರ್ಯ ಶೇ.80ರಷ್ಟು ಮುಗಿದಿದೆ. ಪ್ರತಿಯೊಂದು ಪಂಚಾಯತ್‌ ಮಟ್ಟದಲ್ಲಿ ಕುಟುಂಬ ಸಮ್ಮಿಲನಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

Advertisement

ಹೊಸತನಗಳ ಚಿಂತನೆ
“ಪಕ್ಷದ ನೂತನ ಪದಾಧಿಕಾರಿಗಳ ಪೂರ್ಣ ಪ್ರಮಾಣದ ಆಯ್ಕೆಯಾದ ಬಳಿಕ ಇದೀಗ ಸಂಘಟನೆಯಲ್ಲಿ ಕೆಲವು ಹೊಸತನಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ 7 ದಿನಗಳಿಗೊಮ್ಮೆ ಕೇಂದ್ರ ಮಟ್ಟದಲ್ಲಿ ಅಧ್ಯಕ್ಷರು, ಪ್ರ. ಕಾರ್ಯದರ್ಶಿಗಳ ಸಭೆ, 15 ದಿನಗಳಿಗೊಮ್ಮೆ ಒಂದೊಂದು ಜಿಲ್ಲೆಯಲ್ಲಿ 50 ಸದಸ್ಯರನ್ನೊಳಗೊಂಡ ಪದಾಧಿಕಾರಿಗಳ ಸಭೆ ಹಾಗೂ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ವಿಶೇಷ ಕಾರ್ಯಕಾರಿಣಿ ಸಭೆ, 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿದೆ ಎಂದು ನಳಿನ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next