ದಾವಣಗೆರೆ: ಮುಂಬರುವ ಚುನಾವಣೆಯನ್ನು ಪಕ್ಷದ ಸರ್ಚೋಚ್ಛ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿಯೇ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಬೇಡ ಎಂಬುದಾಗಿ 70 ಶಾಸಕರು ಸಹಿ ಮಾಡಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಮುಂದಿನ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿಯೇ ಎದುರಿಸುತ್ತೇವೆ ಎಂದರು.
ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಏನು ಕಡಿಮೆ ಮಾಡಿದ್ದೇವೆ. ಅವರ ಎಲ್ಲರ ಜೊತೆ ನಾವು ಇದ್ದೇವೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಯಾರು ಯಾರು ಬರಲಿದ್ದಾರೆ ಎಂದು ಇನ್ನೂ ಸ್ಪಲ್ಪ ದಿನ ಕಾದು ನೋಡಿ. ಕಾಂಗ್ರೆಸ್ ಮನೆ ಖಾಲಿ ಆಗಲಿದೆ ಮಾತ್ರವಲ್ಲ ಬಾಗಿಲು ಮುಚ್ಚಿಕೊಂಡು ಹೋಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪಕ್ಷಾಂತರ, ವಲಸಿಗರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಸಿದ್ದರಾಮಯ್ಯ ಅವರೇ ವಲಸಿಗರು. ಅವರು ಎಲ್ಲಿಂದ ಕಾಂಗ್ರೆಸ್ ಗೆ ಬಂದಿದ್ದು ಎಂಬುದನ್ನ ಯೋಚನೆ ಮಾಡಲಿ. ಜೆಡಿಎಸ್ ಪಕ್ಷವನ್ನು ಮುಗಿಸಿ, ದೇವೇಗೌಡರಿಗೆ ದ್ರೋಹ ಮಾಡಿ ಬರಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ ಅವರು ಸಿದ್ದರಾಮಯ್ಯಗೆ ವಲಸಿಗರ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಹುಟ್ಟಿ ಹಾಕಿದ್ದೇ ಸಿದ್ದರಾಮಯ್ಯ. ದಲಿತ ಮುಖ್ಯಮಂತ್ರಿ ಎಂಬ ವಿಚಾರವನ್ನು ಮಟ್ಟ ಹಾಕಿ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಆಗದಂತೆ ನೋಡಿಕೊಂಡಿದ್ದು ಅದೇ ಸಿದ್ದರಾಮಯ್ಯ. ಡಾ.ಜಿ.ಪರಮೇಶ್ವರ್ ಸೋಲಿಸಿ ದಲಿತ ಮುಖ್ಯಮಂತ್ರಿ ಪಟ್ಟ ಸಿಗದಂತೆ ಮಾಡಿದವರು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.