ರಾಮನಗರ: ರಾಜಪ್ರಭುತ್ವದ ಆಡಳಿತದಲ್ಲಿ ಪ್ರಥಮ ಬಾರಿಗೆ ದಲಿತರಿಗೆ ಅವಕಾಶ ಮಾಡಿಕೊಟ್ಟಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಹೇಳಿದರು.
ನಗರದ ಸ್ಫೂರ್ತಿ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿಯಲ್ಲಿ ಮಾತನಾಡಿದರು.
ನಾಲ್ವಡಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ದೀನ- ದಲಿತರು, ಮಹಿಳೆಯರ ಏಳಿಗೆಗೆ ಶ್ರಮಿಸಿದ್ದ ಧೀಮಂತ ಆಡಳಿತಗಾರ ಎಂದರು.
ಸಾಮಾಜಿಕ ಕಳಕಳಿ ಆಶಯ ಮೈಗೂಡಿಸಿಕೊಂಡಿದ್ದ ಕೃಷ್ಣರಾಜ ಒಡೆಯರ್ ಮೇಲ್ವರ್ಗದ ವಿರೋಧ ಕಟ್ಟಿಕೊಂಡು ದಲಿತರು ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು ಎಂದರು. ಶಿಕ್ಷಣ, ಮತದಾನದ ಹಕ್ಕು, ಮಹಿಳೆಯರಿಗೆ ತಂದೆ ಆಸ್ತಿಯಲ್ಲಿ ಪಾಲು ಮುಂತಾದ ಕಾನೂನು ಜಾರಿ ಮಾಡಿದ್ದರು. ಮೈಸೂರು ವಿವಿ ಸ್ಥಾಪನೆ, ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ, ಧೂಮಪಾನ ನಿಷೇಧ ಕಾಯ್ದೆ ಜಾರಿ, ಹತ್ತನೇ ತರಗತಿಗೆ ಬೋರ್ಡ್ ಪರೀಕ್ಷೆ ಹೀಗೆ ಅನೇಕ ಸುಧಾರ ಕಾರಣರಾಗಿದ್ದರು ಎಂದು ವಿವರಿಸಿದರು.
ಹಲವಾರು ಸುಧಾರಣೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ , ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಮೂಲಸೌಕರ್ಯಗಳೂ ಸುಧಾರಣೆಗೊಂಡವು, ಗ್ರಾಮ ನೈರ್ಮಲ್ಯೀಕರಣ, ನೀರು ಸರಬರಾಜು ವ್ಯವಸ್ಥೆ, ಪ್ರಯಾಣ ಸೌಲಭ್ಯ, ವೈದ್ಯಕೀಯ ಸಹಾಯ ಹೀಗೆ ಹಲವಾರು ಸುಧಾರಣೆಗಳು ಜಾರಿಯಾಗಿದ್ದರಿಂದ ಮೈಸೂರು ಸಂಸ್ಥಾನ ಅಭಿವೃದ್ಧಿಯಾಗಿದೆ ಎಂದರು. ಶಿವನಸಮುದ್ರದ ಬಳಿ ಜಲ ವಿದ್ಯುತ್ ಕೇಂದ್ರ, ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ನಿರ್ಮಾಣ, ದೇವದಾಸಿ ಪದ್ಧತಿ ನಿಷೇಧ, ವಿಧವೆಯರಿಗೆ ಮರು ವಿವಾಹ ಮಾಡಿಕೊಳ್ಳುವ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಹೀಗೆ ಹಲವಾರು ಕಾಯ್ದೆ ಜಾರಿಗೆ ತಂದಿದ್ದರು. ಸಾಬೂನು ಕಾರ್ಖಾನೆ, ಕಬ್ಬಿಣದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಪೇಪರ್ ಮಿಲ್ಸ್ ಸ್ಥಾಪನೆಗೂ ನಾಲ್ವಡಿ ಅವರೇ ಕಾರಣ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾ ಧ್ಯಕ್ಷ ಎಚ್.ಪಿ.ನಂಜೇಗೌಡ ಮತ್ತು ನಿವೃತ್ತ ಪ್ರಾಂಶು ಪಾಲ ಎಸ್.ಎಲ್.ವನರಾಜು ಮಾತನಾಡಿದರು. ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಗೌರವ ಕಾರ್ಯದರ್ಶಿಗಳಾದ ಡಾ.ರವೀಂದ್ರ ಹುಲುವಾಡಿ, ಎಚ್.ಎಸ್.ರೂಪೇಶ್ ಕುಮಾರ್, ಗಾಯಕರಾದ ಚೌ.ಪು.ಸ್ವಾಮಿ, ವಿನಯ್ ಕುಮಾರ್, ರಾಮನಗರ ತಾಲೂಕು ಕಸಾಪ ಅಧ್ಯಕ್ಷ ಬಿ.ಟಿ.ದಿನೇಶ್, ಚನ್ನಪಟ್ಟಣದ ತಾಲೂಕು ಕಸಾಪ ಅಧ್ಯಕ್ಷ ಮತ್ತಿಕೆರೆ ಚಲುವರಾಜು, ಮಾಗಡಿ ತಾಲೂಕು ಕಸಾಪ ಅಧ್ಯಕ್ಷ ಕಲ್ಪನಾ ಶಿವಣ್ಣ, ಪ್ರಮುಖರಾದ ಶೈಲಜಾ, ಸುಮಂಗಲ ಸಿದ್ಧರಾಜು, ಉಪನ್ಯಾಸ ಚಿಕ್ಕಚನ್ನಯ್ಯ ಮತ್ತಿತರರಿದ್ದರು.