Advertisement

ಮುಖ್ಯರಸ್ತೆ ದುರಸ್ತಿ ಕಾರ್ಯ ಕಳಪೆ-ವಾಹನ ಸವಾರರ ಆಕ್ರೋಶ

06:51 PM Nov 24, 2019 | Team Udayavani |

ನಾಲತವಾಡ: ಸಮೀಪದ ನಾರಾಯಣಪುರ ಚೆಕ್‌ಪೋಸ್ಟ್‌ನಿಂದ ನಾಲತವಾಡ ಪಟ್ಟಣದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಮುಖ್ಯರಸ್ತೆ ಪ್ಯಾಚ್‌ವರ್ಕ್‌ ಮಾಡಿ ದುರಸ್ತಿ ಪಡಿಸುವ ಕಾರ್ಯ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದ್ದು ಇದನ್ನು ತಡೆದು ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಮಾರ್ಗಮಧ್ಯೆ ಬರುವ ವೀರೇಶನಗರ, ನಾಗಬೇನಾಳ, ನಾಲತವಾಡ ಪಟ್ಟಣದ ವಾಹನ ಸವಾರರು ಒತ್ತಾಯಿಸಿದ್ದಾರೆ.

Advertisement

ಚೆಕ್‌ಪೋಸ್ಟ್‌ನಿಂದ ಢವಳಗಿವರೆಗೆ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳನ್ನು ಮುಚ್ಚಲು ಅಂದಾಜು 12 ಲಕ್ಷ ರೂ.ಗೆ ಟೆಂಡರ್‌ ನೀಡಲಾಗಿದೆ. ಮೊದಲು 21 ಲಕ್ಷ ರೂ.ಗೆ ಟೆಂಡರ್‌ನ ಅಂದಾಜು ಮೊತ್ತ ನಿಗದಿಪಡಿಸಲಾಗಿತ್ತು. ಆದರೆ ಅತಿ ಕಡಿಮೆ ಬಿಡ್‌ ಮಾಡಿದ್ದರಿಂದ 12 ಲಕ್ಷ ರೂ. ಬೇಡಿಕೆ ಇಟ್ಟವರಿಗೆ ಟೆಂಡರ್‌ ಮಂಜೂರಿ ಮಾಡಲಾಗಿದೆ. ಇದು ಮೂಲದಲ್ಲೇ ಕಳಪೆ ಕಾಮಗಾರಿ ನಡೆಸುವುದಕ್ಕೆ ಸಂಕೇತವಾಗಿದೆ.

ಆದರೂ ಅಷ್ಟೇ ಮೊತ್ತದಲ್ಲಿ ಗುಣಮಟ್ಟದ ಕಾಮಗಾರಿ ಮಾಡುವುದು ಸಾಧ್ಯವಿದ್ದರೂ ಪಿಡಬ್ಲೂಡಿ ಇಲಾಖೆಯವರು ಒಳ ಒಪ್ಪಂದ ಮಾಡಿಕೊಂಡು ನಿಷ್ಕಾಳಜಿ ವಹಿಸಿದ್ದರಿಂದ ಗುತ್ತಿಗೆದಾರರು ಕಳಪೆ ಗುಣಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಸ್ತೆ ಸಂಚಾರಕ್ಕೆ ತೀರ ಹದಗೆಟ್ಟಿದೆ. ಎಲ್ಲೆಲ್ಲಿ ರಸ್ತೆ ತೆಗ್ಗು ಬಿದ್ದಿದೆಯೋ ಅಲ್ಲೆಲ್ಲ ಸ್ಕ್ವೇರ್‌ ಕಟ್‌ ಮಾಡಬೇಕು. ಹಳೆ ಜಲ್ಲಿ ಬಳಸಬಾರದು. ಮೊದಲ ಹಂತದಲ್ಲಿ ಡಾಂಬರು ಹಾಕಿ ಮೇಲೆ ಹೊಸ ಜಲ್ಲಿ ಹಾಕಿ ರೋಲರ್‌ ಓಡಿಸಿ ಗಟ್ಟಿಗೊಳಿಸಿದ ಮೇಲೆ ಸಣ್ಣ ಜಲ್ಲಿ ಬಳಸಿ ಡಾಂಬರು ಹಾಕಿ ಮೇಲೆ ಮತ್ತೇ ರೋಲರ್‌ ಓಡಿಸಿ ಪ್ಯಾಚ್‌ ಗಟ್ಟಿಗೊಳಿಸಬೇಕು. ಇದು ನಿಯಮ.

ಆದರೆ ಇಲ್ಲಿ ಸ್ಕ್ವೇರ್‌ ಕಟ್‌ ಮಾಡಿದ ಮೇಲೆ ಹಳೆ ಜಲ್ಲಿಗಳನ್ನೇ ಡಾಂಬರು ಹಾಕದೆ ತುಂಬಿ, ಮೇಲೆ ಸಣ್ಣ ಜಲ್ಲಿ ಬಳಸಿ ಡಾಂಬರು ಹಾಕಿ ಮುಚ್ಚಲಾಗುತ್ತಿದೆ. ರೋಲರ್‌ ಬಳಕೆ ಮಾಡುತ್ತಿಲ್ಲ. ರಸ್ತೆಯಲ್ಲಿ ಓಡಾಡುವ ವಾಹನಗಳು ಇದರ ಮೇಲೆ ಸಂಚರಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಇದಲ್ಲದೆ ಪ್ಯಾಚ್‌ನ್ನು ಹಾಕುವಾಗ ರಸ್ತೆ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಇರುವಂತೆ ಮಾಡಬೇಕು.
ವಾಹನಗಳು ತಿರುಗಾಡಿ ಅದು ರಸ್ತೆ ಮಟ್ಟಕ್ಕೆ ಸರಿ ಹೋಗಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಆದರೆ ಗುತ್ತಿಗೆದಾರರು ನಿಯಮ ಕೈಬಿಟ್ಟು ತಮಗೆ ತೋಚಿದಂತೆ ಕಾಮಗಾರಿ ಮಾಡಿ ಮತ್ತೆ ಕೆಲ ದಿನಗಳಲ್ಲಿ ಪ್ಯಾಚ್‌ ಕಿತ್ತಿಹೋಗಲು ಅವಕಾಶ ಆಗುವಂತೆ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಪಿಡಬ್ಲೂಡಿ ಎಇಇ, ಆ ಭಾಗದ ಸೆಕ್ಷನ್‌ ಆಫೀಸರ್‌, ಎಂಜಿನಿಯರ್‌ ಅವರು
ಮೇಲಿಂದ ಮೇಲೆ ಸಂಚರಿಸಿ ಕಾಮಗಾರಿ ವೀಕ್ಷಿಸುತ್ತಿರುವುದು ನಾಮಕಾವಾಸ್ತೆ ಎನ್ನುವಂತಾಗಿದೆ. ಕಳಪೆ ಕಾಮಗಾರಿ ಗಮನಕ್ಕೆ ಬಂದರೂ ಇವರ್ಯಾರೂ ಗುತ್ತಿಗೆದಾರರಿಗೆ ಛಾಟಿ ಬೀಸಿ ಸರಿಪಡಿಸುವ ಪ್ರಯತ್ನಕ್ಕೆ ಕೈ ಹಾಕದಿರುವುದು ಹಲವಾರು ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಗುಣಮಟ್ಟದ ಪ್ಯಾಚ್‌ ವರ್ಕ್‌ ಕೆಲಸ ನಡೆಯಬೇಕಾದರೆ ಅಲ್ಲಿರುವ ಸೆಕ್ಷನ್‌ ಆಫೀಸರ್‌ನನ್ನು ಬದಲಾಯಿಸಬೇಕು. ಇಲ್ಲವಾದಲ್ಲಿ ಹಿಂದೊಮ್ಮೆ ಇದೇ ರಸ್ತೆ ಕಾಮಗಾರಿ ಪ್ರತಿಭಟಿಸಿ ಹೋರಾಟ ಹಮ್ಮಿಕೊಂಡಂತೆ ಈಗಲೂ ರಸ್ತೆ ತಡೆದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಯಾ ಗ್ರಾಮಗಳ ಯುವ ಸಂಘಟನೆ ಮುಖಂಡರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next