Advertisement

ಜಮೀನು ವಿವಾದ: ರೈತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

05:28 PM Nov 23, 2019 | Team Udayavani |

ನಾಲತವಾಡ: ಪೀರಾಪುರ ಏತ ನೀರಾವರಿ ಯೋಜನೆಯ ಪವರ್‌ ಸ್ಟೇಷನ್‌ಗಾಗಿ ನಮ್ಮ ಜಮೀನನ್ನು ಅಕ್ರಮವಾಗಿ ಬಳಕೆ ಮಾಡಲಾಗುತ್ತಿದ್ದು ಕೂಡಲೆ ಇದನ್ನು ತಡೆಯಬೇಕು. ಇಲ್ಲವಾದರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಬೆದರಿಕೆ ಹಾಕಿದ ಪ್ರಸಂಗ ನಾಗಬೇನಾಳ ತಾಂಡಾ ಬಳಿ ನಡೆದಿದೆ.

Advertisement

ನಾರಾಯಣಪುರ ಎಡದಂಡೆ ಪಕ್ಕದಲ್ಲಿ ಇರುವ 24.26 ಎಕರೆ ಜಮೀನು ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡಿದ್ದಲ್ಲದೆ ಈಗ ಅದರಲ್ಲಿ ವಿದ್ಯುತ್‌ ಘಟಕ ನಿರ್ಮಾಣ ಮಾಡುವುದಾಗಿ ಯುಕೆಪಿ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಇದನ್ನು ನಿರ್ಮಾಣ ಮಾಡಲು ನಾವು ಯಾವದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇದು ಯುಕೆಪಿ ಜಾಗ ಇರುವುದರಿಂದ ನೀವು ಯಾವದೇ ಕಾರಣಕ್ಕೂ ವಿದ್ಯುತ್‌ ಘಟಕ ಸ್ಥಾಪನೆಗೆ ಅಡ್ಡಿ ಪಡಿಸುವಂತಿಲ್ಲ, ಒಂದು ವೇಳೆ ಅಡ್ಡಿಪಡಿಸಿದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಏನಿದು ವಿವಾದ?: ಸಮೀಪದ ನಾಗಬೇನಾಳ ತಾಂಡಾ ನಿವಾಸಿಗಳಾದ ತುಳಜಪ್ಪ ರಾಮಪ್ಪ ಲಮಾಣಿ, ಯಮನಪ್ಪ ರಾಮಪ್ಪ ಲಮಾಣಿ, ತುಳಜಪ್ಪ ಮಂಗಲಪ್ಪ ಲಮಾಣಿ ಅವರ ಹೊಲ ಸರ್ವೇ ನಂ. 84 ರಲ್ಲಿ 24.26 ಎಕರೆ ಜಮೀನು ಟೆನೆನ್ಸಿ ಆ್ಯಕ್ಟನಲ್ಲಿ ಜಗದೇವರಾವ್‌ ದೇಶಮುಖ ಅವರು ನಾಯಕ ಕುಟುಂಬಕ್ಕೆ ನೀಡಿದ್ದರು. ಜಮೀನು ನೀಡಿದ ಕೆಲವು ದಿನಗಳ ನಂತರ 1974-75ರಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ನಿರ್ಮಾಣಕ್ಕೆ ಮೂಲ ಮಾಲೀಕರ ಪರವಾನಗಿ ಪಡೆಯದೆ ನಮ್ಮ ಜಮೀನಿನಲ್ಲಿ ಮಣ್ಣು ತೆಗೆದಿರುತ್ತಾರೆ.

ಮಣ್ಣು ತೆಗೆಯುವ ವೇಳೆ ನಿಮ್ಮ ಜಮೀನು ನಮಗೆ ಬೇಡ, ಕೇವಲ ಮಣ್ಣು ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ನಂತರ ಕೆಲ ದಿನಗಳ ನಂತರ ನಮಗೆ ತಿಳಿಯದೇ ಯುಕೆಪಿ ಹೆಸರಿನಲ್ಲಿ ಜಮೀನು ಅಕ್ವಾಯರ್‌ ಮಾಡಿಕೊಂಡಿದ್ದಾರೆ. ಆದರೆ 84 ಸರ್ವೇ ನಂಬರ್‌ನಲ್ಲಿ ಕೇವಲ 16 ಗುಂಟೆ
ಜಮೀನು ಮಾತ್ರ ಮುಳಗಡೆ ಆಗಿದೆ ಎಂದು ಅವಾರ್ಡ್‌ ಕೂಡ ಇದೆ.

16 ಗುಂಟೆ ಬದಲು ಯುಕೆಪಿ ಅವರು 24.26 ಎಕರೆ ಜಮೀನನ್ನು ಸ್ವಾಧೀನ ಪಡೆದುಕೊಂಡಿದ್ದಾರೆ. ಈಗ ಪೀರಾಪುರ ಏತ ನಿರಾವರಿಯ ವಿದ್ಯುತ್‌ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನು ನಾವು ವಿರೋಧ ಮಾಡಿದರು ಅಧಿಕಾರಿಗಳು ನಮ್ಮನ್ನು ಬೆದರಿಗೆ ಹಾಕುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ರೈತರು ಪಟ್ಟುಹಿಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next