Advertisement
ಸೋಮವಾರ ಬೆಳಗ್ಗೆ 10.45ರ ಸುಮಾರಿಗೆ ಆಟೋದಲ್ಲಿ ಪೊಲೀಸ್ ಠಾಣೆಗೆ ಬಂದ ಆರೋಪಿ ಮೊಹಮ್ಮದ್‌ನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಒಳಗೆ ಕರೆದೊಯ್ದರು. ಬೆನ್ನಲ್ಲೇ ಆರೋಪಿ ಮೊಹಮ್ಮದ್ ಹಾಗೂ ಇತರೆ ಆರು ಸಹಚರರನ್ನು ಸಂಜೆ 5 ಗಂಟೆಗೆ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ವಶಕ್ಕೆ ಪಡೆದಿದ್ದಾರೆ.
Related Articles
ಅಪರಾಹ್ನ 12 ಗಂಟೆ ವೇಳೆ ಕಬ್ಬನ್ ಪಾರ್ಕ್ ಠಾಣೆಗೆ ಆಗಮಿಸಿದ ಸಿಸಿಬಿ ಪೊಲೀಸರು ಮಧ್ಯಾಹ್ನ 3.45ರವರೆಗೆ ಎಲ್ಲ ಆರೋಪಿಗಳ ಬೆರಳಚ್ಚು ಹಾಗೂ ಹೇಳಿಕೆ ದಾಖಲಿಸಿಕೊಂಡರು. 4 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಎರಡು ದಿನ ವಶಕ್ಕೆ ಪಡೆದು ಕೊನೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲೇ ಆರೋಪಿಗಳನ್ನಿಟ್ಟು ವಿಚಾರಣೆ ಮುಂದುವರಿಸಿದ್ದಾರೆ.
Advertisement
10 ದಿನ ಕೇಳಿದ್ದಕ್ಕೆ 2 ದಿನ ಕೊಟ್ರಾಸರಿಯಾಗಿ 5 ಗಂಟೆಗೆ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಮೊಹಮ್ಮದ್ ಸೇರಿ ಆರು ಮಂದಿ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಈ ವೇಳೆ ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಕೊಲೆ ಯತ್ನ ಪ್ರಕರಣ ದಾಖಲಿಸಿಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ನ್ಯಾಯಾಧೀಶರು ಸಹಮತ ವ್ಯಕ್ತಪಡಿಸಿದರು. ಆನಂತರ ಪ್ರಕರಣ ಗಂಭೀರ ಸ್ವರೂಪದಾಗಿದ್ದು, 10 ದಿನ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ನಿರಾಕರಿಸಿ ಸರ್ಕಾರಿ ಅಭಿಯೋಜಕ ಅರುಣ್ ಕನಿಷ್ಠ 8 ದಿನಗಳಾದರೂ ವಶಕ್ಕೆ ನೀಡುವಂತೆ ಕೇಳಿಕೊಂಡರು. ಆಗ ನ್ಯಾಧೀಶಯರು, ಅಷ್ಟು ದಿನ ಏಕೆ ವಶಕ್ಕೆ ಬೇಕು, ರಿಕವರಿ ಏನಾದರೂ ಇದೆಯೇ ಬೇರೆ ಜಿಲ್ಲೆ ಅಥವಾ ಬೇರೆಡೆ ಹೋಗಬೇಕೇ ಎಂದು ಪ್ರಶ್ನಿಸಿದರು. ಇದಕ್ಕೆ ತನಿಖಾಧಿಕಾರಿಗಳು, ಘಟನಾ ಸ್ಥಳವನ್ನು ಪರಿಶೀಲಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಬೇಕು, ಬೇರೆಯವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಅಲ್ಲದೇ ಪ್ರಕರಣ ಸಾಕಷ್ಟು ಸೂಕ್ಷ್ಮವಾಗಿರುವುದರಿಂದ 8ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಈ ಮನವಿಗೆ ಒಪ್ಪದ ನ್ಯಾಯಾಧೀಶರು, ಕೇವಲ ವಿಚಾರಣೆಗೆ ಎರಡು ಮಾತ್ರ ನೀಡುವುದಾಗಿ ಆದೇಶ ಹೊರಡಿಸಿ, ಪ್ರಕರಣವನ್ನು ಫೆ.21ಕ್ಕೆ ವಿಚಾರಣೆ ಮುಂದೂಡಿದರು. ವಿದ್ವತ್ ಮೇಲೂ ಪ್ರಕರಣ
ಮೊಹಮ್ಮದ್ ವಿರುದ್ಧ ಕೊಲೆ ಯತ್ನ ಆರೋಪ ಪ್ರಕರಣದ ಬೆನ್ನಲ್ಲೇ ಆರೋಪಿ ಅರುಣ್‌ಬಾಬು ವಿದ್ವತ್ ವಿರುದ್ಧ ದೂರು ನೀಡಿದ್ದಾನೆ. ನಾನು ನನ್ನ ಸ್ನೇಹಿತರು ಯುಬಿ ಸಿಟಿಯ ಹೋಟೆಲ್‌ಗೆ ಹೋದಾಗ ವಿದ್ವತ್ ಕಾಲು ಮೊಹಮ್ಮದ್ ಸ್ನೇಹಿತನಿಗೆ ತಗುಲಿದೆ. ಇದೇ ವಿಚಾರವಾಗಿ ಜಗಳವಾಗಿದ್ದು, ವಿದ್ವತ್ ನಾನು ಯಾರು ಗೊತ್ತಾ..? ಯಾರ ಪುತ್ರ ಎಂದು ತಿಳಿದಿದೆಯಾ.. ಎಂದು ತಮ್ಮ ಮೇಲೆ ದಬ್ಟಾಳಿಕೆ ನಡೆಸಿ ಕೆನ್ನೆಗೆ ಹೊಡೆದಿದ್ದಾನೆ. ಬಳಿಕ ವಿದ್ವತ್ ಸ್ನೇಹಿತರೆಲ್ಲರೂ ನಮ್ಮ ಮೇಲೆ ಹಲ್ಲೆ ನಡೆಸಿದರು. ಆಗ ಕಂಠಪೂರ್ತಿ ಮದ್ಯ ಸೇವಿಸಿದ್ದ ವಿದ್ವತ್ ಕೆಳಗೆ ಬಿದ್ದು ಮುಖಕ್ಕೆ ಗಾಯಮಾಡಿಕೊಂಡಿದ್ದಾನೆ ಎಂದು ಅರುಣ್ ಬಾಬು ದೂರಿನಲ್ಲಿ ಆರೋಪಿಸಿದ್ದಾನೆ. ವಿದ್ವತ್ ವಿರುದ್ಧ ಐಪಿಸಿ ಸೆಕ್ಷನ್ 341, 323, 504 ಹಾಗೂ 34 ಅಡಿಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ಪ ಹೇಳಿದಕ್ಕೆ ಆರೋಪಿ ಶರಣು!
ಪ್ರಕರಣ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಶಾಸಕ ಹ್ಯಾರಿಸ್ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಹ್ಯಾರಿಸ್, ತಮ್ಮ ಪುತ್ರ ಮೊಹಮ್ಮದ್ ಮನೆಯಲ್ಲಿ ಇಲ್ಲ. ಆತನ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ. ನಾನೇ ಆತನಿಗೆ ಶರಣಾಗಲು ಸೂಚಿಸಿದ್ದೇನೆ ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ಇದಾದ ಕೇವಲ ಒಂದು ಗಂಟೆಯಲ್ಲೇ ಮೊಹಮ್ಮದ್ ಆಟೋದಲ್ಲಿ ಆಗಮಿಸಿ ಕಬ್ಬನ್ ಪಾರ್ಕ್ ಠಾಣೆಗೆ ಶರಣಾಗಿದ್ದಾನೆ. ಯುಬಿ ಸಿಟಿ ಪಕ್ಕದಲ್ಲೇ ಇದ್ದ ಆರೋಪಿ
ಶನಿವಾರ ರಾತ್ರಿ ವಿದ್ವತ್ ಸ್ನೇಹಿತ ವೆಂಕಟಾಚಲಯ್ಯ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡುತ್ತಿದ್ದಂತೆ ಆರೋಪಿ ಮೊಹಮ್ಮದ್ ನಲಪಾಡ್ ಹ್ಯಾರಿಸ್ ತಲೆಮರೆಸಿಕೊಂಡಿದ್ದ. ಇತ್ತ ಪೊಲೀಸರು ಆರೋಪಿಗೆ ಹುಡುಕಾಟ ನಡೆಸುತ್ತಿದ್ದರು. ಆದರೆ, ಆರೋಪಿ ಮೊಹಮ್ಮದ್ ಮನೆಗೆ ಹೋದರೆ ಪೊಲೀಸರು ಬಂಧಿಸುತ್ತಾರೆ ಎಂಬ ಆತಂಕದಲ್ಲಿ ಯುಬಿ ಸಿಟಿ ಪಕ್ಕದಲ್ಲಿರುವ 7 ಸ್ಟಾರ್ ಹೋಟೆಲ್‌ನ ಕೊಠಡಿಯೊಂದರಲ್ಲಿ ಸ್ನೇಹಿತರೊಂದಿಗೆ ನೆಲೆಸಿದ್ದ ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಗೆ ರಾಜಮರ್ಯಾದೆ
ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿದ್ದರೂ ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಇದರ ಹಿಂದಿನ ಉದ್ದೇಶ ಬೇರೆಯದ್ದೆ ಆಗಿದ್ದು, ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ಹ್ಯಾರಿಸ್ ಹೋಟೆಲ್‌ನಿಂದಲೇ ಆರೋಪಿಗಳಿಗೆ ಊಟ, ಟೀ, ಕಾಫಿ ಇತರೆ ಆಹಾರ ಪದಾರ್ಥ ಸರಬರಾಜು ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಲ್ಲಿಯೇ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೆಷನ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ
ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಿಸಿದ್ದರಿಂದ ಎಸಿಎಂಎಂ ಕೋರ್ಟ್‌ನಲ್ಲಿ ಜಾಮೀನು ದೊರೆಯುವುದಿಲ್ಲ. ಹೀಗಾಗಿ ಮಂಗಳವಾರ ಅಥವಾ ಬುಧವಾರ ಸೆಷನ್ಸ್ ಕೋರ್ಟ್‌ನಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.