ಬೆಂಗಳೂರು: ಕುಟುಂಬದ ಜತೆ ಲಂಡನ್‌ಗೆ ತೆರಳಿ, ಅಲ್ಲಿ ನೆಲೆಸಿರುವ ತನ್ನ ಸಹೋದರನನ್ನು ಭೇಟಿ ಮಾಡಬೇಕೆಂದಿದ್ದ ಮೊಹಮ್ಮದ್ ನಲಪಾಡ್ ಕನಸಿಗೆ ಹೈಕೋರ್ಟ್ ಸೋಮವಾರ ಬ್ರೇಕ್ ಹಾಕಿದೆ.
ಜಾಮೀನು ಷರತ್ತುಗಳನ್ನು ಸಡಿಲಿಸಿ ಲಂಡನ್ ಪ್ರವಾಸ ಕೈಗೊಳ್ಳಲು 15 ದಿನ ಅನುಮತಿ ನೀಡುವಂತೆ ಕೋರಿ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಈಗಾಗಲೇ ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಅರ್ಜಿದಾರರು ಜಾಮೀನು ಷರತ್ತುಗಳಿಂದ ವಿನಾಯಿತಿ ಕೋರಿ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.
ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ಫೆ.17ರಂದು ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮೊಹಮದ್ ನಲಪಾಡ್, 116 ದಿನಗಳ ಜೈಲು ವಾಸ ಅನುಭವಿಸಿದ್ದರು. ಬಳಿಕ ಜೂ.14ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.
ಈ ವೇಳೆ ಅಧೀನ ನ್ಯಾಯಾಲಯದ ಅನುಮತಿ ಇಲ್ಲದೆ ನಗರ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿತ್ತು. ಲಂಡನ್‌ನಲ್ಲಿರುವ ತನ್ನ ಸಹೋದರನನ್ನು, ಕುಟುಂಬದ ಜತೆ ಭೇಟಿ ಮಾಡುವ ಸಂಬಂಧ 15 ದಿನಗಳ ಕಾಲ ಜಾಮೀನು ಷರತ್ತು ಸಡಿಲಿಸಿ ಅನುಮತಿ ನೀಡುವಂತೆ ಕೋರಿ ನಲಪಾಡ್ ಅರ್ಜಿ ಸಲ್ಲಿಸಿದ್ದರು.