ಬೆಂಗಳೂರು: ಮೊಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಹೇಳಿಕೆಯನ್ನು ಕೊನೆಗೂ ಸಿಸಿಬಿ ಪೊಲೀಸರು ಶನಿವಾರ ಪಡೆದುಕೊಂಡಿದ್ದಾರೆ.
ಮೂರು ಬಾರಿ ಹೇಳಿಕೆ ಪಡೆಯಲು ಮುಂದಾಗಿದ್ದ ಸಿಸಿಬಿ ಪೊಲೀಸರು ಹೇಳಿಕೆ ಪಡೆಯಲು ಸಾಧ್ಯವಾಗದೇ ವಾಪಸ್ ಆಗಿದ್ದರು. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ತೆರಳಿದ ತನಿಖಾಧಿಕಾರಿ ಅಶ್ವತ್ಥ್ಗೌಡ ನೇತೃತ್ವದ ತಂಡ ಸುಮಾರು 3 ಗಂಟೆಗೂ ಅಧಿಕ ಕಾಲ ವಿದ್ವತ್‌ನಿಂದ ಹೇಳಿಕೆ ದಾಖಲಿಸಿಕೊಂಡಿದ್ದು, ಫೆ.17ರಂದು ರಾತ್ರಿ ಏನೆಲ್ಲ ನಡೆಯಿತು ಎಂಬುದನ್ನು ಸವಿಸ್ತಾರವಾಗಿ ವಿದ್ವತ್ ಹೇಳಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ವಿದ್ವತ್ ಹೇಳಿದ್ದೇನು?: ಫೆ.17ರಂದು ರಾತ್ರಿ 8 ಗಂಟೆ ಸುಮಾರಿಗೆ ಸ್ನೇಹಿತರಾದ ಕಿರಣ್, ಪ್ರವೀಣ್, ವಿಶಾಲ್ ಮತ್ತು ಸೂರ್ಯ ಸೇರಿ ಇನ್ನು ಕೆಲವರು ಫರ್ಜಿ ಕೆಫೆಗೆ ಊಟಕ್ಕೆಂದು ಹೋಗಿದ್ದೇವು. ಆಗ ನಾನು ಕಾಲು ಚಾಚಿಕೊಂಡು ಕುಳಿತಿದ್ದೆ. ಈ ವೇಳೆ ಮೊಹಮ್ಮದ್ ಸ್ನೇಹಿತನಿಗೆ ನನ್ನ ಕಾಲು ತಗುಲಿತು. ನಾನು ಕಾಲು ಫ್ಯಾ†ಕ್ಚರ್ ಆಗಿದ್ದರಿಂದ ತಪ್ಪಾಗಿದೆ ಕ್ಷಮಿಸಿ ಎಂದೆ.
ನಂತರ ಮೊಹಮ್ಮದ್ ತನ್ನ ಸ್ನೇಹಿತರ ಜತೆ ಆಗಮಿಸುತ್ತಾನೆ. ಆಗ ಕಾಲು ತಗುಲಿದಕ್ಕೆ ಕ್ಷಮೆ ಕೇಳುವಂತೆ ಮೊಹಮ್ಮದ್ ಹೇಳಿದ. ಕಾಲಿಗೆ ತಗುಲಿಸಿದ್ದು ನೀನು, ನೀನೆ ಕ್ಷಮೆ ಕೇಳಬೇಕು ಎಂದಿದ್ದೇ. ಇದಕ್ಕೆ ಕೋಪಗೊಂಡ ಮೊಹಮ್ಮದ್ ಹಲ್ಲೆ ನಡೆಸಿದ. ನಾನು ಮತ್ತೂಮ್ಮೆ ಕ್ಷಮೆ ಕೇಳುವಂತೆ ಕೇಳಿಕೊಂಡೆ. ಆಗ ಮೊಹಮ್ಮದ್ ಸಹಚರನೊಬ್ಬ ಅಣ್ಣನಿಗೇ ಸಾರಿ ಕೇಳು ಎಂದು ಹೇಳುತ್ತಿಯಾ ಎಂದು 8-10 ಮಂದಿ ಸೇರಿ ಹಲ್ಲೆ ನಡೆಸಿದರು.
ಪ್ರತಿರೋಧ ವ್ಯಕ್ತಪಡಿಸಿದಾಗ ನೆಲಕ್ಕೆ ಬೀಳಿಸಿಕೊಂಡು ಮತ್ತೂಮ್ಮೆ ಹಲ್ಲೆ ನಡೆಸಿದರು. ಈ ವೇಳೆ ಮೊಹಮ್ಮದ್ ಮತ್ತು ಸಹಚರರು ಬಿಯರ್ ಬಾಟಲಿ, ಐಸ್ ಮಗ್, ಗಾಜಿನ ಮಗ್‌ನಿಂದ ಹಲ್ಲೆ ನಡೆಸಿದರು. ಈ ವೇಳೆ ಯಾರೋ ಒಬ್ಬ ನಕ್ಕಲ್ ರಿಂಗ್‌ನಿಂದ ಮುಖಕ್ಕೆ ಪಂಚ್ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದಿದ್ದ ನನ್ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆಗ ಪಾರ್ಕಿಂಗ್ ಸ್ಥಳಕ್ಕೆ ಬಂದ ಆರೋಪಿಗಳು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ ಎಂದು ವಿದ್ವತ್ ಹೇಳಿದ್ದಾನೆ.
ಪರಿಚಯ ಸ್ನೇಹಿತನಲ್ಲ!: ಮೊಹಮ್ಮದ್ ನಲಪಾಡ್‌ನ ಮುಖಪರಿಚಯವಿದೆ. ಕೆಲ ಪಾರ್ಟಿಗಳಲ್ಲಿ ಪರಸ್ಪರ ಭೇಟಿಯಾಗಿದ್ದೇವು. ಆದರೆ, ಸ್ನೇಹಿತನಲ್ಲ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ವಿದ್ವತ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಚಿಕಿತ್ಸೆ ಮುಂದುವರಿಕೆ: ಮೊಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌ಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶನಿವಾರ ಕಣ್ಣಿನ ತಜ್ಞ ಡಾ.ಮುತ್ತಣ್ಣ ನೇತೃತ್ವದ ತಂಡದಿಂದ ವಿದ್ವತ್ ಕಣ್ಣಿನ ಸ್ಕ್ಯಾನಿಂಗ್ ಮಾಡಲಾಗಿತ್ತು. ವಿದ್ವತ್ ಮೇಲೆ ಹಲ್ಲೆ ನಡೆಸಿದ ಬಳಿಕ ಕಣ್ಣಿಗೆ ಗಂಭೀರ ಗಾಯಗಳಾಗಿತ್ತು. ಹಲ್ಲೆ ನಡೆದ ದಿನದಿಂದಲೂ ಕಣ್ಣಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕಣ್ಣಿನ ನೋವು ಮಾತ್ರ ಕಡಿಮೆ ಆಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಕಣ್ಣಿನ ಸ್ಕ್ಯಾನಿಂಗ್ ಮಾಡಿಸಲಾಗಿದೆ.