ಬೆಂಗಳೂರು: ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಜಾಮೀನು ಕೋರಿ ಹೈಕೋರ್ಟ್ ಮೊರೆಹೋಗಿದ್ದು, ಸೋಮವಾರ ಅಥವಾ ಮಂಗಳವಾರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಎರಡನೇ ಬಾರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನಗರದ 62ನೇ ಹೆಚ್ಚುವರಿ ಸೆಷನ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಲಪಾಡ್ ಶುಕ್ರವಾರ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಜಾಮೀನು ಕೋರಿ ಮೊಹಮದ್ ನಲಪಾಡ್ ಹ್ಯಾರಿಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಅಧೀನ ನ್ಯಾಯಾಲಯ ತನ್ನ ವಿವೇಚನೆ ಬಳಸಿಲ್ಲ. ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಮುಂದಿಟುಕೊಂಡು ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಆದರೆ, ಹಲ್ಲೆ ಪ್ರಕರಣದ ತನಿಖೆಯನ್ನು ಈಗಾಗಲೇ ಪೂರ್ಣಗೊಳಿಸಿರುವ ಪೊಲೀಸರು, ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಹೀಗಿರುವಾಗ ಅವರನ್ನು ನ್ಯಾಯಾಂಗ ವಶದಲ್ಲಿ ಇರಿಸುವ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಘಟನೆಯಲ್ಲಿ ವಿದ್ವತ್‌ಗೆ ಯಾವುದೇ ಮಾರಣಾಂತಿಕ ಗಾಯಗಳಾಗಿಲ್ಲ. ಯಾವುದೇ ಆಯುಧಗಳಿಂದ ಹಲ್ಲೆ ನಡೆಸಿಲ್ಲ. ವಿದ್ವತ್ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಹೀಗಿದ್ದರೂ ಅಧೀನ ನ್ಯಾಯಾಲಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿಲ್ಲ. ಒಂದೊಮ್ಮೆ ಜಾಮೀನು ಮಂಜೂರು ಮಾಡಿದರೆ, ಆರೋಪಿಯು ದೇಶ ಬಿಟ್ಟು ಹೋಗಬಹುದು ಎಂದು ಸೆಷನ್ಸ್ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಆದರೆ, ನ್ಯಾಯಾಲಯ ವಿಧಿಸುವ ಯಾವುದೇ ಜಾಮೀನು ಷರತ್ತಿಗೆ ಅರ್ಜಿದಾರರು ಬದ್ಧರಾಗಿರುತ್ತಾರೆ. ಒಬ್ಬ ಶಾಸಕರ ಪುತ್ರ ಎಂಬ ಏಕೈಕ ಕಾರಣಕ್ಕೆ ಈ ಪ್ರಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದೇ ಪ್ರಕರಣದಲ್ಲಿ ಮತ್ತೂಬ್ಬ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ, ನಲಪಾಡ್‌ಗೂ ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.