ಹುಣಸೂರು: ನಾಗರಹೊಳೆ ಉದ್ಯಾನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದ ಎರಡು ಮರಿ ಆನೆಗಳು ಉತ್ತರ ಪ್ರದೇಶದಕ್ಕೆ ಲಾರಿ ಮೂಲಕ ಪಯಣ ಬೆಳೆಸಿದವು. ಶಿಬಿರದ ಆರು ವರ್ಷದ ನಕುಲ ಹಾಗೂ ಏಳು ವರ್ಷದ ಕಬಿನಿ ಉತ್ತರ ಪ್ರದೇಶಕ್ಕೆ ರವಾನೆಯಾದ ಮರಿ ಆನೆಗಳು.
ಎತ್ತ ಪಯಣ: ಉತ್ತರ ಪ್ರದೇಶದ ಲುಕ್ಕಿಮ್ ಕೇರಿ ಜಿಲ್ಲೆಯ ಪಾಲಿಯಾ ತಾಲೂಕಿನ 875 ಹೆಕ್ಟೇರ್ ವಿಸ್ತೀರ್ಣದ ನೇಪಾಳದವರೆಗೂ ಚಾಚಿರುವ ದುದುವಾ ನ್ಯಾಷನಲ್ ಪಾರ್ಕ್‌ನತ್ತ ಎರಡು ಪ್ರತ್ಯೇಕ ಲಾರಿಗಳಿಗೆ ಶಿಬಿರದ ನಾಯಕನೆಂದೇ ಬಿಂಬಿತವಾದ ಅಭಿಮನ್ಯು, ಭೀಮ ಹಾಗೂ ಇತರೆ ಆನೆಗಳ ಸಹಕಾರದಿಂದ ಲಾರಿಗೇರಿಸಲಾಯಿತು.
ಮೈಡವಿದ ಕಾಡಕುಡಿಗಳು: ಇದಕ್ಕೂ ಮುನ್ನಾ ಎರಡೂ ಮರಿಗಳಿಗೂ ಮಾವುತರು ಜಳಕ ಮಾಡಿಸಿ, ಕುಸುರೆ ತಿನ್ನಿಸಿದರು. ಮಾವುತರ ಮಕ್ಕಳು ಮರಿಯಾನೆಗಳ ಮೈದಡವಿ ಮುದ್ದಾಡಿದರು. ಶಿಬಿರದ ಇತರೆ ಮಾವುತರು-ಕವಾಡಿಗಳು ಹಾಗೂ ಸಿಬ್ಬಂದಿ ಆನೆಗಳೊಂದಿಗೆ ಪೋಟೋ ತೆಗೆಸಿಕೊಂಡು ಬೀಳ್ಕೊಟ್ಟರು. ಡಾ.ಮುಜೀಬ್ ರೆಹಮಾನ್ ಹಲವಾರು ತಿಂಗಳಿನಿಂದ ಈ ಮರಿಗಳ ಆರೋಗ್ಯದ ಮೇಲೆ ನಿಗಾವಹಿಸಿದ್ದರು.
ಈ ಮರಿ ಆನೆಗಳೊಂದಿಗೆ ಇಲ್ಲಿನ ಮಾವುತರಾದ ಜೆ.ಕೆ.ರಾಮ ಹಾಗೂ ರಾಜು ತೆರಳಿದ್ದು, ಅಲ್ಲಿ ತಿಂಗಳ ಕಾಲ ಅಲ್ಲಿನ ಸಿಬ್ಬಂದಿಗೆ ತರಬೇತಿ ನೀಡಿ ವಾಪಾಸಾಗಲಿದ್ದಾರೆ. ಆನೆಗಳನ್ನು ಲಾರಿಗೆ ಹತ್ತಿಸುವ ವೇಳೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಆರ್.ರವಿಶಂಕರ್, ಎಸಿಎಫ್ ಪ್ರಸನ್ನ ಕುಮಾರ್, ಆರ್‌ಎಫ್ಒ ಕಿರಣ್‌ಕುಮಾರ್, ಡಾ.ಮುಜೀಬ್ ರೆಹಮಾನ್ ಹಾಗೂ ದುದುವಾ ಟೆಗರ್ ರಿಸರ್ವ್‌ನ ಡಿಸಿಎಫ್ ಮಹಾವೀರ್ ಹಾಜರಿದ್ದು ಬೀಳ್ಕೊಟ್ಟರು.
ಬಿಟ್ಟಿರಲು ಸಂಕಟ: ಇಷ್ಟು ದಿನ ಇಲ್ಲಿ ಮಕ್ಕಳಂತೆ ಸಾಕಿ, ಇವೆರಡು ಮರಿಯಾನೆಗಳೊಂದಿಗೆ ತುಂಟಾಟ ಆಡಿಕೊಂಡು ಕಾಡಿನೊಳಗೆ ಕಾರ್ಯನಿರ್ವಹಿಸುತ್ತಿರುವ ನಮಗೆ ಕಳುಹಿಸಲು ಕಣ್ಣಿರು ಬರುತ್ತಿದೆ. ಆದರೆ ಇಲಾಖೆ ಆದೇಶ ಪಾಲಿಸಬೇಕಾಗಿದೆ.
ಆದ್ದರಿಂದ ಇವುಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಲು, ಊಟ, ಸ್ನಾನ ಹಾಗೂ ಹೇಳಿದಂತೆ ಕೇಳಲು ಅಲ್ಲಿನ ಸಿಬ್ಬಂದಿಗೆ ತರಬೇತಿ ನೀಡಲು ಶಿಬಿರದ ನಮ್ಮ ಸಿಬ್ಬಂದಿಗಳನ್ನೇ ಕಳುಹಿಸುತ್ತಿರುವುದು ನೆಮ್ಮದಿ ತಂದಿದೆ ಎನ್ನುತ್ತಾರೆ ಆರ್‌ಎಫ್ಒ ಕಿರಣ್‌ಕುಮಾರ್.