Advertisement

ಕಲ್ಲು ಬಂಡೆ ಮೇಲೆ ಭತ್ತದ ಕೃಷಿ ಮಾಡಿದ ನಕ್ರೆಯ ಕೃಷಿಕ

12:26 AM Aug 03, 2019 | Team Udayavani |

ವಿಶೇಷ ವರದಿ-ಕಾರ್ಕಳ: ಕೃಷಿ ಕಾರ್ಯ ಎನ್ನುವಾಗಲೇ ಮೂಗು ಮುರಿಯುವ ಮಂದಿ ಒಂದು ಕಡೆ. ಫ‌ಲವತ್ತಾದ ಕೃಷಿ ಭೂಮಿಯಿದ್ದರೂ ಕೃಷಿ ಮಾಡದೇ ಹಡೀಲು ಬಿಟ್ಟ ಬಳಗ ಇನ್ನೊಂದು ಕಡೆ. ಇಂಥವರ ಮಧ್ಯೆ ಇಲ್ಲೊಬ್ಬ ರೈತ ಬಂಡೆಯ ಮೇಲೆ ಭತ್ತದ ಕೃಷಿ ಮಾಡಿ ಗಮನ ಸೆಳೆದಿದ್ದಾರೆ.

Advertisement

ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಕ್ರೆ ನಿವಾಸಿ ಸಾಧು (55) ಇಂತಹ ಅಪರೂಪದ ಕೃಷಿಕ, ಸಾಧಕ. ತನ್ನಲ್ಲಿರುವ 1.80 ಎಕ್ರೆ ಭೂಮಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿರುವ ಇವರು ಬಂಡೆಕಲ್ಲು ಮೇಲೆಯೂ ಭತ್ತ ಬೇಸಾಯ ಮಾಡುತ್ತಿರುವುದೇ ವಿಶೇಷ. ಕಾರ್ಕಳದಲ್ಲಿ ಎತ್ತ ನೋಡಿದರತ್ತ ಕಾಣಸಿಗುವುದೇ ಹಾಸು ಬಂಡೆಕಲ್ಲುಗಳು. ಹಲವು ಪ್ರದೇಶಗಳು ಬಂಡೆಕಲ್ಲುಗಳಿಂದಲೇ ಆವೃತವಾಗಿದೆ. ಇಂತಹ ಬಂಡೆಕಲ್ಲು ಮೇಲೂ ಬೇಸಾಯ ಮಾಡಬಹುದೆಂದು ಸಾಧಿಸಿ ಸಾಧಿಸಿ ಕೃಷಿ ಕುರಿತು ನಿರಾಸಕ್ತಿ ಹೊಂದುವವರಿಗೆ ಇವರು ಪ್ರೇರಣೆಯಾಗಿದ್ದಾರೆ.

ಇತಿಹಾಸ ಪ್ರಸಿದ್ಧ ನಕ್ರೆಕಲ್ಲು ಬುಡಭಾಗದಲ್ಲಿರುವ ಒಂಟೆಚಾರು ಎಂಬಲ್ಲಿ ವಾಸವಾಗಿರುವ ಸಾಧು ಕೃಷಿ ಕಾರ್ಯದಲ್ಲಿ ನೆಮ್ಮದಿ ಕಂಡವರು. ಹತ್ತು ಅಡಿ ಆಳದ ಬಾವಿಯಲ್ಲಿ ವರ್ಷವಿಡೀ ಸಾಕಾಗುವಷ್ಟು ಜಲಧಾರೆಯಿರುವುದು ಅವರ ಪಾಲಿಗೆ ವರವಾಗಿ ಪರಿಣಮಿಸಿದೆ.

ಮಿಶ್ರ ಬೆಳೆಗಾರ
ಸಾಧು ಅವರು ಮಿಶ್ರಬೆಳೆ ಬೆಳೆಯು ತ್ತಾರೆ. ಅಡಿಕೆ, ತೆಂಗು ಮಧ್ಯೆ ಬಾಳೆ ಗಿಡ, ಕರಿಮೆಣಸು ಮಾಡಿದ್ದಾರೆ. ಗೇರು ಗಿಡವೂ ಇದೆ. ಬಾಳೆಕಾಯಿ ಮತ್ತು ಬಾಳೆ ಎಲೆಯನ್ನೂ ಮಾರಾಟ ಮಾಡುತ್ತಾರೆ. ಮಳೆಗಾಲ ಮತ್ತು ಬೇಸಗೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಸೈ ಎಣಿಸಿಕೊಂಡಿದ್ದಾರೆ. ಹೀಗೆ ಕೃಷಿಯಲ್ಲೇ ಖುಷಿ ಕಾಣುತ್ತಿದೆ ಸಾಧು ಕುಟುಂಬ.

ಕಠಿನ ಪರಿಶ್ರಮಿ
ಸ್ವಂತ ಶ್ರಮದಿಂದಲೇ ಬಂಡೆ ಕಲ್ಲುಗಳಿಂದ ಕೂಡಿದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ದಿನಂಪ್ರತಿ ಕೂಲಿ ಕೆಲಸಕ್ಕೆ ತೆರಳುವ ಅವರದ್ದು ಕಠಿನ ದುಡಿಮೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ತನ್ನ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾರೆ. ಪತ್ನಿ ಶಾಂತಾರೊಂದಿಗೆ ಜೀವನ ನಡೆಸುತ್ತಿರುವ ಅವರಿಗೆ ಮೂವರು ಹೆಣ್ಣು ಮಕ್ಕಳು.‌ ಇವರು ಕೃಷಿಯಲ್ಲೇ ಸಂತೃಪ್ತಿಯ ಬದುಕು ಕಾಣುತ್ತಿದ್ದಾರೆ.

Advertisement

ಬಂಡೆ ಮೇಲೆ ಕೃಷಿ ವಿಧಾನ
ಮನೆ ಪಕ್ಕದಲ್ಲಿರುವ ಸುಮಾರು 55 ಸೆಂಟ್ಸ್‌ ಭೂಮಿ ಅಕ್ಷರಶಃ ಬಂಡೆಯಿಂದ ಆವೃತವಾಗಿದೆ. ಬಂಡೆಯಲ್ಲಿನ ಏರುತಗ್ಗುಗಳನ್ನು ಸರಿಪಡಿಸಿ, ನಾಲ್ಕು ಅಡಿಯಷ್ಟು ಮಣ್ಣನ್ನು ಹೊರಗಿನಿಂದ ತಂದು ತುಂಬಿಸಲಾಗಿದೆ. ಮಳೆಗಾಲ ಆರಂಭವಾಗುತ್ತಲೇ ಯಂತ್ರದ ಮೂಲಕ ಗದ್ದೆಯನ್ನು ಉಳುಮೆ ಮಾಡಿ ಇವರು ಭತ್ತ ಬೇಸಾಯ ಮಾಡುತ್ತಾರೆ. ವರ್ಷಕ್ಕೆ ನಾಲ್ಕು ಕ್ವಿಂಟಾಲ್‌ ಅಕ್ಕಿ ದೊರೆಯುತ್ತಿದೆ. ಮನೆಗೆ ಬೇಕಾಗುವಷ್ಟು ಆಹಾರ, ಹಸುಗಳಿಗೆ ಬೇಕಾಗುವಷ್ಟು ಬೆ„-ಹುಲ್ಲು ಪಡೆಯುತ್ತಿದ್ದಾರೆ.

ಮನಸ್ಸಿದ್ದರೆ ಕೃಷಿಯಲ್ಲೂ ಲಾಭ ಗಳಿಸಬಹುದು
ದುಡಿಯುವ ಮನಸ್ಸಿದ್ದರೆ ಕೃಷಿಯಲ್ಲೂ ಲಾಭ ಗಳಿಸಬಹುದು. ಕಲ್ಲುಗಳಿಂದ ಕೂಡಿದ ಬರಡಾದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದೆ ಎನ್ನುವ ಹೆಮ್ಮೆಯಿದೆ. ನಮಗೆ ಬೇಕಾದ ಆಹಾರವನ್ನು ನಾವೇ ಉತ್ಪಾದಿಸುತ್ತಿರುವುದು ಸಂತಸವನ್ನುಂಟು ಮಾಡಿದೆ.
-ಸಾಧು ನಕ್ರೆ,ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next