ತಣ್ಣೀರುಬಾವಿ: ಇಲ್ಲಿನ ನಾಯರ್ ಕುದ್ರು ಕಿರು ದ್ವೀಪಕ್ಕೆ ಇದೀಗ ಹೊಸ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ವತಿಯಿಂದ ಯೋಜನೆ ರೂಪಿಸ ಲಾಗಿದ್ದು, ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ.
ಅದು ಸುಮಾರು ಆಸುಪಾಸು 70 ಕುಟುಂಬ ಗಳಿರುವ ಕುದ್ರು. ಮಂಗಳೂರಿಂದ ಕೂಗಳತೆಯ ದೂರದಲ್ಲಿದೆ. ಆದರೆ ಮಂಗಳೂರಿಗೆ ಈ ಕುದ್ರುವಿನ ಜನರು ಕಚ್ಚಾ ರಸ್ತೆ ದಾಟಿ ಒಂದು ಗಂಟೆ ಕಾಲ ಬಸ್ ಪ್ರಯಾಣ ಮಾಡಿ ತಲುಪಬೇಕು. ಇಲ್ಲವೇ ದೋಣಿ ಮೂಲಕ ಪ್ರಯಾಣಿಸ ಬೇಕಿದೆ. ಜನರ ಅಗತ್ಯಕ್ಕಾಗಿ ನದಿಯು ಕಿರು ಕವಲಾಗಿ ಹರಿಯುವ ಭಾಗಕ್ಕೆ ಮಣ್ಣು ಹಾಕಿ ತಾತ್ಕಾಲಿಕ ರಸ್ತೆಯೇನೋ ನಿರ್ಮಿಸಲಾಗಿತ್ತು. ಆದರೆ ಇದರಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಯಿತು.
ಜನರ ಬಹು ವರ್ಷದ ಮನವಿಗೆ ಇದೀಗ ಸ್ಪಂದನೆ ದೊರಕಿದೆ. ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸರಕಾರದ ಮೂಲಕ ನಬಾರ್ಡ್‌ನ 1 ಕೋಟಿ ರೂ. ಅನುದಾನದಿಂದ ಸೇತುವೆ ನಿರ್ಮಾಣಕ್ಕೆ ಯೋಜನೆ ಅಂತಿಮಗೊಂಡಿದೆ. ಕೊರೊನಾ ಕಾರಣದಿಂದ ವಿಳಂಬವಾಗಿದ್ದು, ಅನುಮತಿ ಶೀಘ್ರ ಸಿಗಲಿದೆ.
ನೀರು ಹರಿಯದೆ ಸಮಸ್ಯೆ:
Related Articles
ಮಣ್ಣು ಹಾಕಿ ರಸ್ತೆ ನಿರ್ಮಾಣವಾಗಿ ದ್ದರೂ ನದಿ ನೀರು ಇಕ್ಕೆಲಗಳಲ್ಲಿ ನಿಂತು ದುರ್ವಾಸನೆ ಹರಡುತ್ತಿದೆ. ಫಲ್ಗುಣಿ ನದಿಯು ಈ ಭಾಗದಲ್ಲಿ ಕವಲಾಗಿ ಹರಿದು ಸಮುದ್ರ ಸೇರುತ್ತದೆ. ನದಿಯಲ್ಲಿ ಹರಿದು ಬರುವ ಕಸ ಕಡ್ಡಿ, ತ್ಯಾಜ್ಯ, ಮಲಿನ ನೀರು ಇದೀಗ ಸರಾಗವಾಗಿ ಹರಿಯಲು ಸಾಧ್ಯವಾಗದೆ ಕೊಳೆತ ವಾಸನೆ ಬರುತ್ತಿದೆ. ಇಲ್ಲಿ ಸೇತುವೆ ನಿರ್ಮಿಸಿ ಕಚ್ಚಾ ರಸ್ತೆಗೆ ಅಳವಡಿಸಿದ ಮಣ್ಣು ತೆವುರಗೊಳಿಸಿದರೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಅಲ್ಲದೆ ನಾಡದೋಣಿಗಳ ಸಂಚಾರಕ್ಕೆ, ಮೀನು ಗಾರರಿಗೂ ಸಹಕಾರಿಯಾಗುವುದು.
ಚರ್ಮರೋಗ, ಅಲರ್ಜಿ :
ಒಂದು ಕಾಲಕ್ಕೆ ನದಿಗಿಳಿದು ಬಲೆ ಹಾಕಿ ಮೀನು ಹಿಡಿಯುವ, ಮರುವಾಯಿ ಹೆಕ್ಕುವ ಮೂಲಕ ಬದುಕು ಕಟ್ಟಿಕೊಂಡವರ ಸಂಖ್ಯೆ ಅಪಾರವಿತ್ತು. ಆದರೆ ಇಂದು ನದಿಗಿಳಿದರೆ ತುರಿಕೆ ಚರ್ಮರೋಗ, ಅಲರ್ಜಿ ಮತ್ತಿತರ ಕಾಯಿಲೆಗಳು ಆವರಿಸಿಕೊಳ್ಳುತ್ತಿದೆ. ನದಿಯ ದಡದಲ್ಲಿರುವವ ಹಲವು ಕಂಪೆನಿಗಳು ಮಲಿನ ನೀರನ್ನು ನೇರವಾಗಿ ನದಿಗೆ ಬಿಡುವುದರಿಂದ ನದಿಯಲ್ಲಿ ಇಳಿದೊಡನೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುದು ಸ್ಥಳೀಯರ ಆರೋಪ.
ಒಂದೇ ಭಾಗದಲ್ಲಿ ನೀರು ಹರಿಯಲು ಮಣ್ಣು ಹಾಕಿ ತಡೆಯಾದ ಪರಿಣಾಮ ನಿಂತ ನೀರು ತ್ಯಾಜ್ಯ ಕೊಳೆತು ಈ ಸಮಸ್ಯೆ ಉದ್ಭವಿಸುತ್ತಿದೆ ಎಂಬುದು ತಜ್ಞರ ಅಭಿ ಪ್ರಾಯ. ಈ ಎಲ್ಲ ಸಮಸ್ಯೆ ತೊಲಗಿ ಸಲು ಹೊಸ ಸೇತುವೆ ನಿರ್ಮಾಣ ಯೋಜನೆ ಸ್ಥಳೀಯರಲ್ಲಿ ಸಂತಸ ಮೂಡಿ ಸಿದೆ. ಕುದುರು ನಿವಾಸಿಗಳಲ್ಲಿ ಈ ಹೊಸ ಯೋಜನೆ ಸಂತಸ ಮೂಡಿಸಿದೆ.
ಕೆಸರಿನಿಂದ ಬಾರಿ ಸಮಸ್ಯೆ :
ಮಳೆಗಾಲದಲ್ಲಿ ಮಣ್ಣು ಹಾಕಿದ ರಸ್ತೆಯಲ್ಲಿ ಹೋಗಲು ಕೆಸರಿನಿಂದ ಬಾರಿ ಸಮಸ್ಯೆಯಾಗುತ್ತಿದೆ. ಮಕ್ಕಳನ್ನು ಮಾತ್ರ ಈ ಅಗಲಕಿರಿದಾದ ರಸ್ತೆಯಲ್ಲಿ ಸೇತುವೆಯಲ್ಲಿ ಕಳಿಸಲು ಹೆತ್ತವರು ಹೆದರುವಂತಾಗಿದೆ. ಅಲ್ಲದೆ ನೀರು ಹರಿಯಲು ಸಾಧ್ಯವಾಗದೆ ದುರ್ವಾಸನೆ ಬೀರುತ್ತದೆ. ಹೊಸ ಸೇತುವೆ ನಿರ್ಮಾಣದಿಂದ ನಮಗೆಲ್ಲ ಪ್ರಯೋಜನವಾಗಲಿದೆ. –ಗಿಲ್ಬರ್ಟ್ ಸ್ಥಳೀಯರು
ಶೀಘ್ರ ಕಾಮಗಾರಿ ಆರಂಭ:
ಚುನಾವಣೆ ಸಂದರ್ಭ ಭೇಟಿ ಮಾಡಿದಾಗ ಜನತೆ ಸೇತುವೆಯ ಬೇಡಿಕೆ ಇರಿಸಿದ್ದರು. ನಬಾರ್ಡ್ ಮೂಲಕ 1 ಕೋಟಿ ರೂ. ಅನುದಾನ ತರಲಾಗುತ್ತಿದೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ.–ಡಾ| ಭರತ್ ಶೆಟ್ಟಿ ವೈ., ಶಾಸಕರು
-ಲಕ್ಷ್ಮೀನಾರಾಯಣ ರಾವ್