Advertisement
ರಾಜಾರೋಷದಿಂದ ಎಲ್ಲವನ್ನೂ ನಾಶಗೊಳಿಸಿ ಕಾಡಿನತ್ತ ನಡೆಯುವ ಕಾಡಾನೆಗಳಿಗೇನು ಗೊತ್ತು ಜನರ ನೋವು ಸಂಕಟ. ಹಾಗೆ ನೊಂದ ಕೃಷಿಕರಲ್ಲಿ ಒಬ್ಬರು ಮುಳ್ಳೇರಿಯ ಸಮೀಪದ ಕೊಟ್ಟಂಗುಯಿ ನಿವಾಸಿ ಚಾತು ನಾಯರ್. ತಾನು ಕಳೆದ ಹಲವಾರು ವರ್ಷಗಳಿಂದ ಬೆವರು ಸುರಿಸಿ ಬೆಳೆದ ಕೃಷಿಯನ್ನು ನಾಶಪಡಿಸಿ ಆನೆಗಳು ಮರಳುವಾಗ ಮುಂದಿನ ವರ್ಷವಾದರೂ ಬೆಳೆದ ಬೆಳೆ ಕೊಯ್ಯುವ ನಿರೀಕ್ಷೆ ಕನಸು ಮಾತ್ರವಾಗಿ ಉಳಿದಿದೆ. ಕಾಡಾನೆ ಕೊನೆಗೂ ತೊಂಬತ್ತೆರಡು ವರ್ಷದ ಚಾತು ನಾಯರ್‌ಅವರನ್ನು ಸೋಲಿಸಿಯೇ ಬಿಟ್ಟಿತು. ಸತತ ಆರು ವರ್ಷಗಳಿಂದ ಕಾಡಾನೆಗಳು ಈ ಕೃಷಿಕನ ನಿದ್ದೆಗೆಡಿಸಿದೆ.
Related Articles
Advertisement
ಕೊಟ್ಟಂಗುಯಿ, ಚೆಟ್ಟೋನಿ ಅರಣ್ಯ ಪ್ರದೇಶದ ಸಮೀಪವಿದೆ ಚಾತು ನಾಯರ್‌ಅವರ ಮನೆ ಹಾಗೂ ಜಾಗ. ಕಂಗು ತೋಟವನ್ನು ಅವಲಂಬಿಸಿ ಬದುಕುತ್ತಿದ್ದರು. ಕಾಡಾನೆಗಳು ಕೃಷಿಯನ್ನು ನಾಶಗೊಳಿಸಿತು. ಕಳೆದ ವರ್ಷ ಆನೆಹಿಂಡು ಮನೆಯಂಗಳದವರೆಗೂ ಬಂದಿತ್ತು.
ಜೀವ ಭಯದಿಂದ ಬಟ್ಟೆಗೆ ಬೆಂಕಿ ಕೊಟ್ಟು ಆನೆಯತ್ತ ಎಸೆದಿದ್ದರು. ಆನೆ ಹೆದರಿ ಹಿಂದೆ ಸರಿಯಿತಾದರೂ ಭಯದಿಂದಲೇ ಚಾತು ನಾಯರ್‌ರ ಕುಟುಂಬ ಬದುಕುವಂತಾಯಿತು. ಎಂಬತ್ತು ವರ್ಷದ ಪತ್ನಿ ಹಾಗೂ ಚಾತು ನಾಯರ್ ಮಾತ್ರವೇ ಆಗ ಮನೆಯಲ್ಲಿದ್ದರು. ಆನೆಗಳು ಮತ್ತೆ ಮತ್ತೆ ದಾಳಿಯಿಡುವ ಕಾರಣ ಬೇಸತ್ತ ಚಾತು ನಾಯರ್ ತನ್ನ ಆಸ್ತಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ತೀರ್ಮಾನಿಸಿದರು. ಈಗ ಕಾರಡ್ಕದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಇವರಿಬ್ಬರಿಗೆ ಪ್ರತಿ ತಿಂಗಳು ಸರಕಾರದಿಂದ ಬರುವ ಪಿಂಚಣಿಯೇ ಬದುಕಿಗೆ ಏಕ ಆಶ್ರಯ. ತನ್ನ ಕೃಷಿ ಭೂಮಿ ಬಿಟ್ಟು ಕೊಟ್ಟ ನೋವು ನಿರಾಸೆ ದಂಪತಿಯ ಆರೋಗ್ಯದ ಮೇಲೂ ಗಾಢವಾದ ಪ್ರಭಾವ ಬೀರಲು ಪ್ರಾರಂಭಿಸಿದೆ.
ಜಿಲ್ಲಾಧಿಕಾರಿಯವರ ಜನಸಂಪರ್ಕ ಕಾರ್ಯ ಕ್ರಮದಲ್ಲಿ ಭಾಗವಹಿಸಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕೇಳಬೇಕೆಂಬ ಚಾತು ನಾಯರ್‌ರ ತೀರ್ಮಾನವೂ ಕಾರಣಾಂತರಗಳಿಂದ ನಡೆಯದೇ ಹೋದುದು ಖೇದಕರ. ಈ ಇಳಿವಯಸಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ಚಾತು ನಾಯರ್ ದಂಪತಿಯ ಬದುಕು ಬಾಡಿಗೆ ಮನೆಯಲ್ಲಿ ಕಳೆಯಬೇಕಾಗಿ ಬಂದುದು ಜನರಲ್ಲಿ ನೋವನ್ನು ತರುವುದರಲ್ಲಿ ಎರಡು ಮಾತಿಲ್ಲ.
ಅಖೀಲೇಶ್ ನಗುಮುಗಂ