Advertisement

ಉಗುರಿನ ಮೇಲೆ ಚೆಲುವಿನ ಚಿತ್ತಾರ

09:31 AM Apr 02, 2020 | Suhan S |

ಯಾವುದೇ ಸೃಜನಶೀಲ ಕಲೆ ಸಮಯವನ್ನು ಬೇಡುತ್ತದೆ. ಅಲಂಕಾರಕೂಡಾ ಅಂಥ ಒಂದು ಕಲೆಯೇ. ನೀಟಾಗಿ ಕಾಡಿಗೆ ತೀಡುವುದು, ಜಡೆ ಹೆಣೆಯುವುದು, ಉಗುರಿಗೆ ಬಣ್ಣ ಹಚ್ಚುವುದು ಅಲಂಕಾರದ ಮುಖ್ಯ ಭಾಗವೇ. ಅದರಲ್ಲೂ ಉಗುರಿಗೆ ಬಣ್ಣ ಹಚ್ಚುವುದು ನೈಲ್‌ ಆರ್ಟ್‌ ಎಂದೇ ಹೆಸರು ಪಡೆದಿದೆ. ಪುಟ್ಟ ಉಗುರಿನ ಮೇಲೆ ಅಂದ ಚಂದದ ಚಿತ್ತಾರ ಮೂಡಿಸುವುದನ್ನು ಕಲಿಯಲು ಇದೊಂದು ಒಳ್ಳೆಯ ಅವಕಾಶ…

Advertisement

ಕೋವಿಡ್ 19 ಹರಡುವ ಭೀತಿಯಿಂದ ಮನೆಯೊಳಗೆ ಬಂಧಿಯಾಗಿರುವವರು, ಹೇಗಪ್ಪಾ ಸಮಯ ಕಳೆಯುವುದು ಅಂತ ಗೊಣಗಬೇಕಿಲ್ಲ. ಸಿಕ್ಕ ಸಮಯದಸದುಪಯೋಗ ಪಡೆಯಿರಿ. ನೀವು ಅಲಂಕಾರ ಪ್ರಿಯರಾಗಿದ್ದರೆ, ನೈಲ್‌ ಆರ್ಟ್‌ ಅನ್ನು ಕಲಿಯಿರಿ. ಕೈ – ಕಾಲು ಬೆರಳುಗಳ ಉಗುರಿನ ಮೇಲೆ ಬಣ್ಣಗಳ ಚಿತ್ತಾರ ಮೂಡಿಸುತ್ತ, ಮನೆಯೊಳಗೇ ಇರಬೇಕಾದ ಬೇಸರವನ್ನು ಕಳೆಯಬಹುದು.

ಚಿತ್ತಾರದ ಚಮಕ್‌ :  ಉಗುರಿನ ಸುತ್ತಲೂ ಗೋಂದು ಅಥವಾ ಗಮ್‌ ಟೇಪ್‌ ಅಂಟಿಸಿ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಎರಡು ಬೇರೆ ಬೇರೆ ಬಣ್ಣದ ನೇಲ್‌ ಪಾಲಿಶ್‌ನ ಕೆಲವು ಹನಿಗಳನ್ನು ಬೆರೆಸಿ, ಕೈ ಬೆರಳನ್ನು ಮುಳುಗಿಸಿ ತೆಗೆಯಿರಿ. ಗೋಂದು ಅಥವಾ ಗಮ್‌ ಟೇಪ್‌ ತೆಗೆದಾಗ ಉಗುರಿನ ಮೇಲೆ ಸುಂದರವಾದ ಚಿತ್ತಾರ ಮೂಡಿರುತ್ತದೆ. ಒಂದು ಉಗುರಿನಂತೆ ಇನ್ನೊಂದು ಉಗುರಿನ ಚಿತ್ತಾರ ಇರುವುದಿಲ್ಲ. ಇದುವೇ ಈ ಕಲೆಯ ವೈಶಿಷ್ಟ್ಯ. ಎರಡು ಅಥವಾ ಹೆಚ್ಚಿನ ಬಣ್ಣಗಳನ್ನೂ ಬಳಸಬಹುದು. ಚಿತ್ರ ಬಿಡಿಸಲು ಬಾರದೆ ಇರುವವರೂ ಕಲಿಯಬಹುದಾದ ಕಲೆ ಇದು.

ಉಗುರೇ ಕ್ಯಾನ್ವಾಸ್‌ :  ಚಿತ್ರ ಬಿಡಿಸುವ ಆಸಕ್ತಿ ಉಳ್ಳವರಿಗೆ, ಉಗುರೇ ಕ್ಯಾನ್ವಾಸ್‌. ಉಗುರಿನ ಮೇಲೆ ಚಿತ್ರ ಪ್ರಯೋಗ ಮಾಡುವವರಿಗಾಗಿ ಇಲ್ಲಿದೆ ಒಂದು ಸರಳ ಉಪಾಯ. ಉಗುರಿಗೆ ಮೊದಲು ಬಿಳಿ ಅಥವಾ ತಿಳಿ ಬಣ್ಣದ ನೇಲ್‌ ಪಾಲಿಶ್‌ ಹಚ್ಚಿ. ಅದು ಒಣಗಿದ ನಂತರ ಸ್ಟೆನ್ಸಿಲ್ , ಸ್ಟಿಕರ್‌ ಅಥವಾ ಅಚ್ಚು ಬಳಸಿ ಗಾಢವಾದ ನೇಲ್‌ ಪಾಲಿಶ್‌ ಹಚ್ಚಿ. ಅಂಟಿಸಿದ ಸ್ಟಿಕರ್‌/ ಬಳಸಿದ ಸ್ಟೆನ್ಸಿಲ್‌ ಅಥವಾ ಅಚ್ಚನ್ನು ತೆಗೆದಾಗ ಉಗುರಿನ ಮೇಲೆ ಅಂದದ ಚಿತ್ರ ಮೂಡುತ್ತದೆ. ಒಂದು ವೇಳೆ ಉಗುರಿನ ಮೇಲೆ ಮೊದಲಿಗೆ ಕಪ್ಪು ಅಥವಾ ಇತರ ಗಾಢವಾದ ಬಣ್ಣ ಹಚ್ಚುವುದಾದರೆ ಸ್ಟೆನ್ಸಿಲ್ , ಸ್ಟಿಕರ್‌ ಅಥವಾ ಅಚ್ಚು ಬಳಸಿದಾಗ ತಿಳಿ ಬಣ್ಣದ ನೇಲ್‌ ಪಾಲಿಶ್‌ ಬಳಸ ಬೇಕು. ಮೊದಲಿಗೆ ಹಚ್ಚಿದ ಬಣ್ಣ ಒಣಗಿದ ನಂತರವಷ್ಟೇ ಎರಡನೇ ಬಣ್ಣ ಹಚ್ಚಬೇಕು.

ಇಂಟರ್ನೆಟ್‌ ಗುರು! :  ಮನೆಯೊಳಗೇ ಇದ್ದರೇನು, ಇಂಟರ್ನೆಟ್‌ ಎಂಬ ಗುರು ಜೊತೆಗಿದ್ದಾನಲ್ಲ! ಹಲವು ರೀತಿಯಲ್ಲಿ ಉಗುರುಗಳ ಮೇಲೆ ಬಣ್ಣದ ಚಿತ್ತಾರ ಮೂಡಿಸಲು ಇಂಟರ್ನೆಟ್‌ನಲ್ಲಿ ಟ್ಯುಟೋರಿಯಲ್‌ ವಿಡಿಯೋಗಳಿವೆ. ಅವುಗಳನ್ನು ನೋಡಿ, ಬಣ್ಣ ಹಚ್ಚುವುದು ಹೇಗೆ, ಚಿತ್ರ ಬಿಡಿಸುವುದು ಹೇಗೆ, ಬಗೆ ಬಗೆಯ ಕಲೆ ಮೂಡಿಸುವುದು ಹೇಗೆ ಎಂದು ಕಲಿಯಬಹುದು. ಒಂದು ವೇಳೆ ಪ್ಲಾನ್‌ ವರ್ಕ್‌ ಔಟ್‌ ಆಗದಿದ್ದರೆ ನೇಲ್‌ ಪಾಲಿಶ್‌ ರಿಮೂವರ್‌ ಇದ್ದೇ ಇದೆಯಲ್ಲ! ­

Advertisement

 

-ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next