Advertisement

ಇಂದರಗಿ ಕೆರೆಗೆ ನಾಲಾ ಜೋಡಣಾ ಕಾರ್ಯ

02:36 PM Apr 23, 2019 | pallavi |

ಕೊಪ್ಪಳ: ಜಿಲ್ಲೆಯಲ್ಲಿ ಹೂಳೆತ್ತುವ ಕ್ರಾಂತಿ ಜೋರಾಗಿ ಸಾಗುತ್ತಿದೆ. ಗವಿಸಿದ್ದೇಶ್ವರ ಸ್ವಾಮೀಜಿಗಳ ಸಾರಥ್ಯದಲ್ಲಿ ಹಿರೇಹಳ್ಳ, ನಿಡಶೇಷಿ, ಕಲ್ಲಬಾವಿ ಸೇರಿದಂತೆ ಎಲ್ಲೆಡೆಯೂ ಜಲಕ್ರಾಂತಿ ಮೊಳಗುತ್ತಿದೆ. ಇದರೊಟ್ಟಿಗೆ ತಾಲೂಕಿನ ಇಂದರಿ ಗ್ರಾಮದಲ್ಲೂ ಕೆರೆಗೆ ನಾಲಾ ಜೋಡಣೆಯ ಕ್ರಾಂತಿಯೂ ಸದ್ದಿಲ್ಲದೇ ನಡೆಯುತ್ತಿದ್ದು ಗ್ರಾಮಸ್ಥರೇ ಮುಂದೆ ನಿಂತು ನಾಲಾ ಜೋಡಣೆಗೆ ಜೈ ಎಂದಿದ್ದಾರೆ.

Advertisement

ಹೌದು, ಸದಾ ಬರಗಾಲ ಪೀಡಿತ ಪ್ರದೇಶವೆಂದು ಹಣೆಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಜಲಕ್ರಾಂತಿಯ ಕಹಳೆ ಮೊಳಗುತ್ತಿದೆ. ಅದರಲ್ಲೂ ಇಂದರಗಿ ಗ್ರಾಮದ ಸೀಮಾದಲ್ಲಿ ಹೊಸ ಕೆರೆಗೆ ಗುಡ್ಡದಿಂದ ನಾಲಾ ಜೋಡಣೆ ಕಾರ್ಯ ಭರ್ಜರಿಯಾಗಿ ನಡೆದಿದೆ.

ನಾಲಾ ಜೋಡಣೆಗೆ ಪ್ರೇರಣೆ ಹೇಗಾಯ್ತು?: ಗವಿಸಿದ್ದೇಶ್ವರ ಸ್ವಾಮೀಜಿಗಳು ಇತ್ತೀಚೆಗೆ ಇಂದರಗಿ ಗ್ರಾಮಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಜಲಕ್ರಾಂತಿಯ ಬಗ್ಗೆ ಮಾತನಾಡಿದ್ದಾರೆ. ಆಗ ಸ್ಥಳೀಯ ಗ್ರಾಮಸ್ಥರು ತಮ್ಮಲ್ಲಿನ ಕೆರೆಯ ಬಗ್ಗೆ, ನೀರು ಬತ್ತಿ ಹೋಗಿರುವ ಬಗ್ಗೆ ನಾಲಾ ಮುಚ್ಚಿ ಹೋಗಿರುವ ಬಗ್ಗೆ ಶ್ರೀಗಳ ಗಮನಕ್ಕೆ ತಂದಿದ್ದಾರೆ. ಇದನ್ನರಿತ ಶ್ರೀಗಳು ಕೂಡಲೇ ಜನರೊಟ್ಟಿಗೆ ಅಲ್ಲಿಗೆ ತೆರಳಿ ಕೆರೆ ಸೇರಿದಂತೆ ನಾಲಾ ಮುಚ್ಚಿರುವುದನ್ನು ವೀಕ್ಷಣೆ ಮಾಡಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಂದರಗಿ-ಬೊಮ್ಮಸಾಗರ ತಾಂಡಾ ಗ್ರಾಮಗಳ ಅರಣ್ಯ ಪ್ರದೇಶದ ನೀರು ಹೊಟ್ಟೆಬೆನಕನ ನಾಲೆಯ ಮೂಲಕ ವ್ಯರ್ಥವಾಗಿ ಹರಿಯುವುದನ್ನು ಜನತೆ ಶ್ರೀಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ, ಈ ನಾಲೆಯನ್ನು ಇಂದರಗಿಯ ಹೊಸಕೆರೆಗೆ ಸಂಪರ್ಕಿಸಲು 15 ವರ್ಷಗಳ ಹಿಂದೆಯೇ ಸರಕಾರ ಕಾಮಗಾರಿ ರೂಪಿಸಿದ್ದರೂ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತವಾದ ಕುರಿತು ಶ್ರೀಗಳ ಗಮನಕ್ಕೆ ತಂದಿದ್ದಾರೆ.

ಅಲ್ಲಿನ ವಸ್ತುಸ್ಥಿತಿ ಅರಿತ ಶ್ರೀಗಳು ಜನರಿಗೆ ಪ್ರೇರಣೆ ನೀಡಿ ನಿಮ್ಮೂರಿನ ಕೆರೆ, ನಾಲಾ ರಕ್ಷಣೆ ಮಾಡಿ ಜಲಸಂರಕ್ಷಣೆ ಮಾಡಿ ಎನ್ನುವ ಸಂದೇಶ ನೀಡುತ್ತಿದ್ದಂತೆ ಸ್ವಯಂ ಪ್ರೇರೇಪಿತರಾದ ಜನತೆ ಟ್ರ್ಯಾಕ್ಟರ್‌, ಜೆಸಿಬಿಗಳನ್ನು ತಂದು ಹೊಟ್ಟೆಬೆನಕನ ನಾಲೆಯನ್ನು ಹೊಸ ಕೆರೆಗೆ ತಿರುಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ತುಂಬೆಲ್ಲ ಜಲಕ್ರಾಂತಿ ಮೊಳಗುತ್ತಿದ್ದು ಜನತೆ ನೀರಿನ ಜಪ ಮಾಡುತ್ತಿದ್ದಾರೆ. ಕೆರೆ ಹೂಳೆತ್ತುವ ಜೊತೆ ಜೊತೆಗೆ ನೀರು ನಿಲ್ಲಿಸುವ ಕಾಯಕದಲ್ಲೂ ಶ್ರಮಿಸುತ್ತಿದ್ದಾರೆ. ಬರದ ನಾಡಿನಲ್ಲಿ ಗವಿಮಠದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಭಗೀರಥನಂತೆ ಶ್ರಮಿಸಿ ಜನರಿಗೆ ಸಲಹೆ-ಸೂಚನೆ ಪ್ರೇರಣೆ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

Advertisement

65-70 ಎಕರೆ ವ್ಯಾಪ್ತಿ ಹೊಂದಿರುವ ನಮ್ಮೂರ ಹೊಸಕೆರೆಗೆ ನೀರು ಸಂಗ್ರಹವಾದರೆ ಸುತ್ತಮುತ್ತಲ ಗ್ರಾಮಗಳಾದ ಜಬ್ಬಲಗುಡ್ಡ, ಇಂದಿರಾನಗರ, ಬೂದಗುಂಪಾ, ಕೂಕನಪಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಸುಮಾರು 500-600 ಎಕರೆ ಪ್ರದೇಶದಷ್ಟು ಕೃಷಿ ಭೂಮಿಗೆ ನೀರು ಬಳಕೆಯಾಗಲಿದೆ. ಈ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಲಿದೆ. -ಭೋಜಪ್ಪ ಕುಂಬಾರ, ಗ್ರಾಮದ ಮುಖಂಡ

ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ವಿಪರೀತವಾಗುತ್ತಿದೆ. ಈ ಕಾಮಗಾರಿಯಿಂದಾಗಿ ನಮ್ಮೂರಿನ ಜನರಿಗೆ ಹೊಸ ಭರವಸೆ ಹುಟ್ಟಿಕೊಂಡಿದೆ. ಈ ಕ್ರಾಂತಿಗೆ ಗವಿಮಠದ ಶ್ರೀಗಳೇ ಪ್ರೇರಣೆ. ಇಂತಹ ಸ್ವಯಂಪ್ರೇರಿತ ಕಾರ್ಯಗಳು ಎಲ್ಲ ಗ್ರಾಮಗಳಲ್ಲೂ ನಡೆದಾಗ ನೀರಿನ ಸಮಸ್ಯೆಯನ್ನು ಬಹುತೇಕ ನಿವಾರಣೆ ಮಾಡಬಹುದು.
•ಶಿವಣ್ಣ ಭೀಮನೂರ, ರೈತ ಮುಖಂಡ

 

Advertisement

Udayavani is now on Telegram. Click here to join our channel and stay updated with the latest news.

Next