ಹುಮನಾಬಾದ: ಹಳ್ಳಿಖೇಡ(ಬಿ)ದ ಇತಿಹಾಸ ಪ್ರಸಿದ್ಧ ಪವಿತ್ರ ಧಾರ್ಮಿಕ ಕ್ಷೇತ್ರ ಸೀಮಿನಾಗನಾಥ ದೇವಸ್ಥಾನ ಮುಂಭಾಗದಲ್ಲಿ ಒಂದೂವರೆ ದಶಕ ಹಿಂದೆ ನಿರ್ಮಿಸಿದ್ದ ನಾಗವನ ಅಭಿವೃದ್ಧಿ ಕಾಣದೇ, ಬಳಕೆ ಇಲ್ಲದೇ ಸಂಪೂರ್ಣ ಪಾಳು ಬಿದ್ದಿದೆ.
ಪ್ರತೀ ವರ್ಷ ನಾಗಪಂಚಮಿ ಹಾಗೂ ದೀಪಾವಳಿ ಸಂದರ್ಭದಲ್ಲಿ ನಡೆಯುವ ನಾಗನಾಥ ಜಾತ್ರೆ ಸೇರಿದಂತೆ ಇನ್ನುಳಿದ ಸಂದರ್ಭದಲ್ಲೂ ಪ್ರತಿನಿತ್ಯ ಸಾವಿರಾರು ಜನ ಭಕ್ತರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ವನಮಹೋತ್ಸವ ಇತ್ಯಾದಿ ಕಾರಣಕ್ಕೆ ಸೀಮಿನಾಗನಾಥ ದೇವಸ್ಥಾನಕ್ಕೆ ಬರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ದೇವಸ್ಥಾನ ಮುಂಭಾಗದ ವಿಶಾಲ ಜಾಗದಲ್ಲಿ ಉದ್ಯಾನ ನಿರ್ಮಿಸಬೇಕೆಂಬ ಉದ್ದೇಶ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯ ಓಂಪ್ರಕಾಶ ಅವರು ಹೊಂದಿದ್ದರು. ಅದಕ್ಕಾಗಿ ವಿಶೇಷ ಅನುದಾನ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿಓಂಪ್ರಕಾಶ ಪ್ರಭಾ ತಮ್ಮ ವೈಯಕ್ತಿಕ 50 ಸಾವಿರ ಸೇರಿದಂತೆ ಕೆಲವು ಇತರೆ 4 ಜನ ಜಿಲ್ಲಾ ಪಂಚಾಯಿತಿ ಸದಸ್ಯರಿಂದ 50 ಸಾವಿರ ನೆರವು ಪಡೆದು, ಒಟ್ಟು ರೂ. 2.60 ಲಕ್ಷ ಸಂಗ್ರಹ ಮಾಡಿದ್ದರು.
2003ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಅನುರಾಧಾ ತಪಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನವೀನರಾಜ್ ಸಿಂಗ್, ಬೀದರ್ ಸಾಮಾಜಿಕ ಅರಣ್ಯ ವಿಭಾಗ ಅಧಿಕಾರಿಗಳು ಸೇರಿ ಒಟ್ಟು 2.60 ಲಕ್ಷ ವೆಚ್ಚದ ಉದ್ಯಾನ ನಿರ್ಮಾಣ ಕಾಮಗಾರಿಗೆ ಉದ್ಘಾಟನೆ ನೆರವೇರಿಸಿದ್ದರು.
ಸಂಗ್ರವಾದ ಹಣದಲ್ಲಿ ಹುಲ್ಲು ಹಾಸು, ಉದ್ಯಾನ ಸೌಂದರ್ಯ ಹೆಚ್ಚಿಸುವ ಹಸಿರು ಬೇಲಿ ವಿವಿಧ ಜಾತಿ ಹೂವಿನ ಗಿಡಗಳನ್ನು ಬೆಳೆಸಲಾಗಿತ್ತು. ತದನಂತರ ಬಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ವಿನೂತನ ಮಾದರಿ ಸಿಮೆಂಟ್ ಬೆಂಚ್ ಅಳವಡಿಸಲಾಗಿತ್ತು. ಆಗ ನಾಗನಾಥ ದೇವಸ್ಥಾನ ಇನ್ನೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಆಗಿರಲಿಲ್ಲ. ಈಗ ಕಳೆದ 2008ರಿಂದ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿದೆ. ದೇವಸ್ಥಾನ ವ್ಯವಸ್ಥೆ ಬಗ್ಗೆ ತೋರಿಸುತ್ತಿರುವ ಕಾಳಜಿ ಉದ್ಯಾನ ಅಭಿವೃದ್ಧಿ ಬಗ್ಗೆ ತೋರಿಸದೇ ಇರುವುದು ಪರಿಸರ ಪ್ರಿಯರಿಗೆ ಬೇಸರ ಮೂಡಿಸುತ್ತಿದೆ. ಉದ್ಯಾನ ಸೌಂದರ್ಯ ವೃದ್ಧಿ ಸುವುದಕ್ಕಾಗಿ ಮಾಡಿದ್ದ ಕಲ್ಲುಗಳ ಜೋಡಣೆಯುಳ್ಳ ಕಲಾಕೃತಿಯು ಕುಸಿದು ಬಿದ್ದಿದೆ.
ಆಕರ್ಷಕವಾಗಿದ್ದ ಕಾರಂಜಿ ಸಂಪೂರ್ಣ ತುಕ್ಕು ಹಿಡಿದು ಹಾಳಾಗುತ್ತಿದೆ. ನೆಮ್ಮದಿಯಾಗಿ ಕುಳಿತು ಊಟ, ವಿಶ್ರಾಂತಿ ಪಡೆಯಬೇಕಾದ ಹುಲ್ಲುಹಾಸಿನ ಜಾಗದಲ್ಲೀಗ ಹುಲ್ಲಿನ ಪೊದೆ ಬೆಳೆದು ವಿಷಜಂತುಗಳ ಕಾಟ ಹೆಚ್ಚಿದ್ದು, ದರ್ಶನಕ್ಕೆ ಬರುವ ಭಕ್ತರು ಅಲ್ಲಿ ಕುಳಿತುಕೊಳ್ಳಲು ಭಯ ಪಡುತ್ತಿದ್ದಾರೆ.
ಜಾತ್ರೆ ವೇಳೆ ಅಂತಾರರಾಷ್ಟ್ರೀಯ ಮಟ್ಟದ ವಾಲಿಬಾಲ್ ಸ್ಪರ್ಧೆ, ಜಂಗಿಕುಸ್ತಿ, ಪಶು ಪ್ರದರ್ಶನ ಇತ್ಯಾದಿ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಅದರ ಜೊತೆಗೆ ಅತ್ಯಂತ ಅವಶ್ಯವಿರುವ ಉದ್ಯಾನ ಅಭಿವೃದ್ಧಿಯತ್ತಲೂ ಸಂಬಂಧ ಪಟ್ಟರು ವಿಶೇಷ ಗಮನ ಹರಿಸಬೇಕು. ಉದ್ಯಾನ ಹಸಿರಿನ ಜೊತೆಗೆ ಆಟಿಕೆಗಳನ್ನು ಅಳವಡಿಸಿ, ನಿರ್ವಹಣೆ ವೆಚ್ಚ ಪಡೆದಲ್ಲಿ ಉದ್ಯಾನ ಮತ್ತಷ್ಟು ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಲ್ಲದ ನೆಪ ಹೇಳದೇ ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕೆಂಬುದು ಭಕ್ತರ ಒತ್ತಾಯ.
-ಶಶಿಕಾಂತ ಕೆ.ಭಗೋಜಿ