Advertisement

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

08:56 PM Apr 22, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದಲ್ಲಿ ಬೇರೆ ಪ್ರಾಣಿಯೊಂದಿಗೆ ಕಾದಾಟ ನಡೆಸಿದ ಸುಮಾರು6-7 ವರ್ಷದ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದ ಗಣಗೂರು ಶಾಖೆಯ ಗಣಗೂರು ಕೆರೆ ಬಳಿ ಸುಮಾರು ೬-೭ವರ್ಷದ ಗಂಡು ಹುಲಿ ಶವ ಪತ್ತೆಯಾಗಿದ್ದು, ಗಸ್ತಿನಲ್ಲಿದ್ದ ಸಿಬ್ಬಂದಿಗಳಿಗೆ ಹುಲಿ ಶವ ಗೋಚರಿಸಿದ್ದು, ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ನಾಗರಹೊಳೆ ವನ್ಯಜೀವಿ ವಿಭಾಗದ ವಿರಾಜಪೇಟೆ ಡಿಸಿಎಫ್ ಎನ್.ಎಚ್.ಜಗನ್ನಾಥ್, ಹುಣಸೂರು ವಲಯದ ಎಸಿಎಫ್ ದಯಾನಂದ್, ರಾಷ್ಟ್ರೀಯ ಹುಲಿ ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯ ತಮ್ಮಯ್ಯ, ಮುಖ್ಯ ವನ್ಯಜೀವಿ ಪರಿಪಾಲಕರ ನಾಮನಿರ್ದೇಶಿತರು, ಗ್ರಾ.ಪಂ.ಸದಸ್ಯರಾದ ನವೀನ್, ಆರ್.ಎಫ್.ಓ.ದೇವರಾಜ್ ಹಾಗೂ ಸಿಬ್ಬಂದಿಗಳು ಭೇಟಿ ಇತ್ತು ಪರಿಶೀಲಿಸಿದ್ದಾರೆ.

ಹುಲಿಯು ಬೇರೆ ಕಾಡು ಪ್ರಾಣಿಯೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿರ ಬಹುದೆಂದು ಶಂಕಿಸಲಾಗಿದೆ. ನಾಗರಹೊಳೆ ಮುಖ್ಯ ಪಶು ವೈದ್ಯಾಧಿಕಾರಿ, ಆನೆ ಪ್ರಭಾರಕ ಡಾ.ರಮೇಶ್, ಬಾಳೆಲೆ ಪಶುವೈದ್ಯ ಭವಿಷ್ಯಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಅಂತ್ಯ ಸಂಸ್ಕಾರ ನಡೆಸಲಾಯಿತೆಂದು ನಾಗರಹೊಳೆ ಹುಲಿಯೋಜನೆ ನಿದೇರ್ಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಗುಂಡೇಟಿಗೆ ಕಾಡುಕೋಣ ಬಲಿ
ಒಂದು ತಿಂಗಳೊಳಗೆ ದುಷ್ಕರ್ಮಿಗಳ ಕೃತ್ಯಕ್ಕೆ ಮೂರು ಕಾಡುಕೋಣ ಬಲಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯದ ಬಫರ್ ಝೋನ್‌ನಲ್ಲಿ ಸುಮಾರು 10-11 ವರ್ಷದ ಗಂಡು ಕಾಡುಕೋಣವೊಂದು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದೆ.

Advertisement

ಆನೆಚೌಕೂರು ವನ್ಯಜೀವಿ ವಲಯದ ಚನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಬ್ಬೂರು ಗಸ್ತಿನ ಶ್ಯಾಮಚಂದ್ರರವರ ಕಾಫಿ ತೋಟದ ಗಡಿ ಬಾಗದ ಇಪಿಟಿ ಬಳಿಯ ಜಾಗದಲ್ಲಿ ಸುಮಾರು 10-11 ವರ್ಷದ ಕಾಡುಕೋಣದ ಶವ ಪತ್ತೆಯಾಗಿದ್ದು, ಕೃತ್ಯನಡೆಸಿದವರು ಪತ್ತೆಯಾಗಿಲ್ಲ.

ಮಾಹಿತಿ ಮೇರೆಗೆ ಕೃತ್ಯ ನಡೆದ ಸ್ಥಳಕ್ಕೆ ನಾಗರಹೊಳೆ ಹುಲಿಯೋಜನೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಆರ್.ಎಫ್.ಓ ದೇವರಾಜ್ ಭೇಟಿ ಇತ್ತು ಪರಿಶೀಲನೆ ನಡೆಸಿದರು. ಮುಖ್ಯ ಪಶುವೈದ್ಯಾಕಾರಿ ಹಾಗೂ ಆನೆಗಳ ಪ್ರಭಾರಕರಾದ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದನಂತರ ಶವವನ್ನು ವಿಲೇವಾರಿ ಮಾಡಲಾಗಿದೆ.

ಅಪರಿಚಿತ ದುಷ್ಕರ್ಮಿಗಳ ವಿರುದ್ದ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕೃತ್ಯ ನಡೆಸಿರುವ ದುಷ್ಕರ್ಮಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಲ್ಲಿ ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದ ಬಫರ್ ಝೋನ್‌ನ ಚನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಬ್ಬೂರು ಗಸ್ತಿನಲ್ಲೇ ೩ಕಾಡು ಕೋಣಗಳ ಹತ್ಯೆ ನಡೆದಿರುವುದು ಅನುಮಾನಕ್ಕೆಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next